ಬೆಂಗಳೂರು: ಸಿದ್ದರಾಮಯ್ಯ (CM Siddaramaiah) ಅವರು ಕಳೆದ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಅನುಷ್ಠಾನಕ್ಕೆ ತಂದಿದ್ದ ಟಿಪ್ಪು ಜಯಂತಿ (Tippu Jayanti) ಈ ಬಾರಿ ಮತ್ತೆ ಆರಂಭವಾಗಲಿದೆಯೇ? ಎಂಬ ಪ್ರಶ್ನೆ ಮೂಡಿತ್ತು. ಈ ಸಚಿವ ಸಂಪುಟ ಸಭೆಯಲ್ಲಿ (Cabinet meeting) ಅದರ ಬಗ್ಗೆ ಚರ್ಚೆಯಾಗುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ, ಗುರುವಾರ ನಡೆದ ಸಂಪುಟ ಸಭೆಯಲ್ಲಿ ಅದರ ಬಗ್ಗೆ ಯಾವುದೇ ಚರ್ಚೆಯೇ ನಡೆದಿಲ್ಲ ಎಂದು ಸಚಿವ ಎಚ್.ಕೆ. ಪಾಟೀಲ್ (Minister HK Patil) ಸ್ಪಷ್ಟನೆ ನೀಡಿದ್ದಾರೆ.
ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಅವರು ಟಿಪ್ಪು ಜಯಂತಿ ಆಚರಣೆ ಬಗ್ಗೆ ಚರ್ಚೆಗೆ ಬಂದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ 2015ರಲ್ಲಿ ಟಿಪ್ಪು ಜಯಂತಿಯನ್ನು ಜಾರಿಗೆ ತಂದಿದ್ದರು. ಅವರ ಆಡಳಿತ ಅವಧಿಯಲ್ಲಿ ಪ್ರತಿ ವರ್ಷ ನವೆಂಬರ್ 10ರಂದು ಸರ್ಕಾರದಿಂದ ಟಿಪ್ಪು ಜಯಂತಿಯನ್ನು ಆಚರಣೆ ಮಾಡಿಕೊಂಡು ಬರಲಾಗುತ್ತಿತ್ತು. ಈ ಬಗ್ಗೆ ಬಿಜೆಪಿಯಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೆ, ಈ ವಿರೋಧದ ನಡುವೆಯೂ ಸಿದ್ದರಾಮಯ್ಯ ಅವರು ಟಿಪ್ಪು ಜಯಂತಿಯನ್ನು ಆಚರಿಸಿಕೊಂಡು ಬರುತ್ತಿದ್ದರು.
ಬಿಜೆಪಿಯಿಂದ ತೀವ್ರ ವಿರೋಧ
ಇನ್ನು ಬಿಜೆಪಿ ಸೇರಿದಂತೆ ಹಿಂದು ಪರ ಸಂಘಟನೆಗಳು ಇದರ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳಿದ್ದವು. ಮುಸ್ಲಿಂ ಸಮುದಾಯದಲ್ಲಿ ಜಯಂತಿ ಆಚರಣೆ ಎಂಬುದು ಇಲ್ಲ. ಹೇಗೆ ಟಿಪ್ಪು ಜಯಂತಿಯನ್ನು ಆಚರಣೆ ಮಾಡಲಾಗುತ್ತದೆ ಎಂಬ ಪ್ರಶ್ನೆಗಳನ್ನು ಕೇಳಿದ್ದವು. ಕೊನೆಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಟಿಪ್ಪು ಜಯಂತಿಯನ್ನು ರದ್ದು ಪಡಿಸಿತ್ತು.
ಕಳೆದ ವರ್ಷ ಟ್ವೀಟ್ ಮಾಡಿದ್ದ ಸಿದ್ದರಾಮಯ್ಯ
ಈ ಎಲ್ಲ ಬೆಳವಣಿಗೆ ಮಧ್ಯೆ ಕಳೆದ ಬಾರಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿ, ಟಿಪ್ಪು ಜಯಂತಿಯ ಶುಭಾಶಯಗಳನ್ನು ಕೋರಿದ್ದರು. “ಟಿಪ್ಪು ಸುಲ್ತಾನ್ ಅಪ್ರತಿಮ ದೇಶಪ್ರೇಮಿ. ವೀರ ಸ್ವಾತಂತ್ರ್ಯ ಹೋರಾಟಗಾರ, ದಕ್ಷ ಆಡಳಿತಗಾರ ಮತ್ತು ಪರಧರ್ಮ ಸಹಿಷ್ಣು ಟಿಪ್ಪು ಸುಲ್ತಾನ್ ಓರ್ವ ಆದರ್ಶಸ್ವರೂಪಿ ಜನನಾಯಕ. ಟಿಪ್ಪು ಜಯಂತಿ ದಿನ ಅವರಿಗೆ ಗೌರವದ ನಮನಗಳು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿ ಶುಭಾಶಯ ಕೋರಿದ್ದರು.
ಮತ್ತೆ ಟಿಪ್ಪು ಜಯಂತಿ ಶುರುವಾಗಲಿದೆಯೇ?
ಕಳೆದ ವರ್ಷ ಟಿಪ್ಪು ಜಯಂತಿಗೆ ಶುಭಾಶಯ ಕೋರಿ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದರಿಂದ ಈ ಬಾರಿಯಿಂದ ಅವರು ಪುನಾರಂಭ ಮಾಡಲಿದ್ದಾರೆ ಎಂಬ ಚರ್ಚೆ ಜೋರಾಗಿಯೇ ನಡೆದಿತ್ತು. ಅಲ್ಲದೆ, ಗುರುವಾರದ (ಅಕ್ಟೋಬರ್ 05) ಸಚಿವ ಸಂಪುಟ ಸಭೆಯಲ್ಲಿ ಟಿಪ್ಪು ಜಯಂತಿ ಬಗ್ಗೆ ಚರ್ಚೆ ಆಗಲಿದೆ ಎಂದು ಹೇಳಲಾಗಿತ್ತು. ಈಗ ಈ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದು ಸಚಿವ ಎಚ್.ಕೆ. ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ. ಆದರೆ, ಕಳೆದ ಬಾರಿಯ ಲೆಕ್ಕದಂತೆ ಟಿಪ್ಪು ಜಯಂತಿ ಇರುವುದು ನವೆಂಬರ್ 10ನೇ ತಾರೀಖಿಗೆ. ಹಾಗಾಗಿ ಇದಕ್ಕೆ ಇನ್ನೂ ಸಮಯ ಇದೆ. ಅಷ್ಟರಲ್ಲಿ ಇನ್ನೂ 5 ಸಚಿವ ಸಂಪುಟ ಸಭೆ ನಡೆಯಲಿದೆ. ಹೀಗಾಗಿ ಈ ನಡುವೆ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ.
ಇದನ್ನೂ ಓದಿ: Karnataka Drought : ಕರ್ನಾಟಕದಲ್ಲಿ ಈ ವರ್ಷ ಎದುರಾಗಲಿದೆ ಆಹಾರ ಕೊರತೆ!
ಶಿವಮೊಗ್ಗ ಗಲಭೆ ವಿಚಾರ ಚರ್ಚೆಗೆ ಬಂದಿಲ್ಲ
ಶಿವಮೊಗ್ಗದ ರಾಗಿಗುಡ್ಡೆಯಲ್ಲಿ ಭಾನುವಾರ (ಅಕ್ಟೋಬರ್ 5) ನಡೆದಿದ್ದ ಈದ್ ಮಿಲಾದ್ ಮೆರವಣಿಗೆ (Eid Milad Procession) ಸಂದರ್ಭದಲ್ಲಿ ಉಂಟಾದ ಗಲಭೆ (Shivamogga Violence), ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ಸಂಪುಟ ಸಭೆಯಲ್ಲಿ ಚರ್ಚೆ ನಡೆಯುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ, ಅದರ ಬಗ್ಗೆ ಸಹ ಯಾವುದೇ ಚರ್ಚೆ ನಡೆದಿಲ್ಲ ಎಂದು ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.