Site icon Vistara News

Varthur Santhosh : ವರ್ತೂರು ಸಂತೋಷ್‌ ಜೈಲಿನಿಂದ ಬಿಡುಗಡೆ; ಮತ್ತೆ ಬಿಗ್‌ ಬಾಸ್‌ ಮನೆಗೆ?

Varthur prakash released from jail

ಬೆಂಗಳೂರು: ಹುಲಿಯ ಉಗುರು (Tiger Nail) ಹೊಂದಿದ ಪೆಂಡೆಂಟ್‌ ಧರಿಸಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿ ಕಳೆದ ಐದು ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ (Parappana Agrahara Jail) ಬಿಗ್ ಬಾಸ್‌ ಸೀಸನ್‌ 10 (BBK Season 10) ಸ್ಪರ್ಧಿ ವರ್ತೂರು ಸಂತೋಷ್‌ (Varthur Santhosh) ಅವರಿಗೆ ಕೋರ್ಟ್‌ ಜಾಮೀನು ನೀಡಿದೆ. ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಗೊಂಡಿರುವ ಅವರು ಮತ್ತೆ ಬಿಗ್‌ ಬಾಸ್‌ ಮನೆಗೆ ಹೋಗುತ್ತಾರಾ ಅಥವಾ ಮನೆಗೆ ಹೋಗುತ್ತಾರಾ ಎನ್ನುವ ಕುತೂಹಲ ಮೂಡಿದೆ. ಆಪ್ತರ ಪ್ರಕಾರ ಅವರ ಬಿಗ್‌ ಬಾಸ್‌ ಮನೆಗೇ ಹೋಗುತ್ತಾರೆ.

ಬಿಗ್‌ ಬಾಸ್‌ ಸೀಸನ್‌ 10 ಸ್ಪರ್ಧಿಯಾಗಿದ್ದ ವರ್ತೂರು ಸಂತೋಷ್‌ ಅವರು ಕೊರಳಿನಲ್ಲಿ ಹುಲಿಯುಗುರು ಇರುವ ಪೆಂಡೆಂಟ್‌ ಧರಿಸಿದ್ದನ್ನು ಟಿವಿಯಲ್ಲಿ ಗಮನಿಸಿದ ಅರಣ್ಯಾಧಿಕಾರಿಗಳು ಅತ್ಯುತ್ಸಾಹದಿಂದ ಅವರ ಮೇಲೆ ಕೇಸು ದಾಖಲಿಸಿದ್ದರು. ಕಳೆದ ಭಾನುವಾರ ಅವರನ್ನು ಬಿಗ್‌ ಬಾಸ್‌ ಮನೆಗೇ ಹೋಗಿ ಬಂಧಿಸಲಾಗಿತ್ತು. ಸೋಮವಾರ ಅವರನ್ನು ಕೋರ್ಟ್‌ಗೆ ಹಾಜರುಪಡಿಸಿದಾಗ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಅವರ ಜಾಮೀನು ಅರ್ಜಿಯ ವಿಚಾರಣೆ ಗುರುವಾರ ನಡೆದು ಶುಕ್ರವಾರ ತೀರ್ಪು ನೀಡಲಾಯಿತು. ಇದರಲ್ಲಿ ಸಂತೋಷ್‌ ಅವರನ್ನು ಜಾಮೀನಿನಲ್ಲಿ ಬಿಡುಗಡೆ ಮಾಡಲು ಸೂಚಿಸಲಾಗಿದೆ.

ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಲಿರುವ ಸಂತೋಷ್‌ ಕೆಲವೊಂದು ಕಾನೂನು ಮತ್ತು ಷರತ್ತಿನ ಪ್ರಕ್ರಿಯೆಗಳನ್ನು ಪೂರೈಸಬೇಕು. ಜತೆಗೆ ಕೋರ್ಟ್‌ನಲ್ಲಿ ವಿಚಾರಣೆ ಇರುವಾಗ ಹಾಜರಾಗಬೇಕಾಗಿದೆ.

ಈ ನಡುವೆ ಬಿಗ್‌ ಬಾಸ್‌ ಮನೆಯಿಂದ ಬಂಧನಕ್ಕೆ ಒಳಗಾದ ಸಂತೋಷ್‌ ಮತ್ತೆ ಬಿಗ್‌ ಬಾಸ್‌ ಮನೆಗೆ ಹೋಗುತ್ತಾರಾ ಅಥವಾ ತಮ್ಮದೇ ಮನೆಗೆ ಹೋಗುತ್ತಾರಾ ಎನ್ನುವ ಕುತೂಹಲ ಎಲ್ಲ ಕಡೆ ಇದೆ.

ಸಂತೋಷ್‌ ಗೆಳೆಯರ ಬಯಕೆ ಬಿಗ್‌ ಬಾಸ್‌

ಪರಪ್ಪನ ಅಗ್ರಹಾರ ಜೈಲಿನಿಂದ ಎಲ್ಲಿ ಹೋಗಬೇಕು ಎನ್ನುವುದು ಸಂತೋಷ್‌ಗೆ ಬಿಟ್ಟಿದ್ದು ಎನ್ನುವುದು ಅವರ ಮನೆಯವರು ಹಾಗೂ ಸ್ನೇಹಿತರ ಅಭಿಪ್ರಾಯ. ಆದರೆ, ಹೆಚ್ಚಿನ ಗೆಳೆಯರು ಸಂತೋಷ್‌ ಮತ್ತೆ ಬಿಗ್‌ ಬಾಸ್‌ಗೇ ಹೋಗಬೇಕು, ಅಲ್ಲಿಂದ ಗೆದ್ದೇ ಊರಿಗೆ ಬರಬೇಕು ಎಂದು ಆಶಿಸುತ್ತಿದ್ದಾರೆ.

ಸಂತೋಷ್‌ ಅವರನ್ನು ಹುಲಿಯುಗುರು ಹೆಸರಿನಲ್ಲಿ ಬಂಧಿಸಿರುವುದು ಅವರ ಆಪ್ತರನ್ನು ಕೆರಳಿಸಿದೆ. ಬಿಗ್‌ ಬಾಸ್‌ನಲ್ಲಿ ಮಿಂಚುತ್ತಾನೆ ಎಂದು ಜನಪ್ರಿಯತೆಯನ್ನು ಸಹಿಸದೆ ಕೆಲವರು ದ್ವೇಷದಿಂದ ಸಂತೋಷ್‌ ಅವರನ್ನು ಹಿಡಿಸಿ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಸಂತೋಷ್‌ಗೆ ನ್ಯಾಯ ಕೊಡಿಸಬೇಕು ಎಂದು ಕಳೆದ ಐದು ದಿನವೂ ಪರಪ್ಪನ ಅಗ್ರಹಾರ ಜೈಲಿನ ಎದುರು ಪ್ರತಿಭಟನೆಗಳು ನಡೆದಿವೆ.

ಬಿಗ್‌ಬಾಸ್‌ಗೆ ಹೋಗಿ ಗೆಲ್ಲಲಿ ಎನ್ನುವುದು ನಮ್ಮ ಆಸೆ ಎಂದ ಆಪ್ತ

ಈ ನಡುವೆ ಪರಪ್ಪನ ಅಗ್ರಹಾರ ಜೈಲಿನ ಬಳಿ ಹೇಳಿಕೆ ನೀಡಿದ ಸಂತೋಷ್‌ ಅವರ ಆಪ್ತ ಮಧು ಅವರು, ಸಂತೋಷ್‌ ಮತ್ತೆ ಬಿಗ್‌ ಬಾಸ್‌ಗೆ ಹೋಗಿ ಜಯಶಾಲಿಯಾಗಿ ಹೊರಗೆ ಬರಲಿ ಎನ್ನುವುದು ನಮ್ಮೆಲ್ಲರ ಆಸೆಯಾಗಿದೆ. ಆದರೆ ಅವರು ಏನು ತೀರ್ಮಾನ ಮಾಡುತ್ತಾರೋ ಹಾಗೆ ನಡೆಯುತ್ತದೆ ಎಂದಿದ್ದಾರೆ.

ʻʻಬಿಗ್ ಬಾಸ್ ನಿಂದ ನೇರ ಜೈಲಿಗೆ ಹೋಗಿರೋದು ತುಂಬಾ ಬೇಸರವಾಗಿದೆ. ಬಿಗ್ ಬಾಸ್ ಮನೆಯಿಂದ ರಿಸೀವ್ ಮಾಡಿಕೊಳ್ಳಬೇಕು ಅಂದುಕೊಂಡಿದ್ದೆವಯ, ಆದರೆ ಜೈಲಿನಿಂದ ಅವರನ್ನು ಕರೆದುಕೊಂಡು ಹೋಗುತ್ತೇವೆ ಅಂದುಕೊಂಡಿರಲಿಲ್ಲ. ಬಿಗ್ ಬಾಸ್ ಮನೆಗೆ ಮರಳಿ ಹೋಗುವ ಬಗ್ಗೆ ಸಂತೋಷ್ ಬಳಿ ಮೊದಲು ಅಭಿಪ್ರಾಯ ಪಡೆಯಬೇಕು. ಬಿಗ್ ಬಾಸ್ ಮನೆಗೆ ಮತ್ತೆ ಹೋಗಿ ಗೆದ್ದು ಬರಲಿ ಎನ್ನುವುದೇ ನಮ್ಮಲ್ಲರ ಆಸೆಯಾಗಿದೆ. ಸಂತೋಷ್ ಮನೆಗೆ ಹೋಗೋಕೆ ಒಪ್ಪಿಕೊಳ್ತಾರ ಅಥವಾ ಬಿಗ್ ಬಾಗ್ ಮರಳಿ ಹೋಗ್ತಾರೋ ಅವರಿಗೆ ಬಿಟ್ಟಿದ್ದುʼʼ ಎಂದು ಮಧು ಹೇಳಿದರು.

ʻʻಕೋರ್ಟ್ ನಲ್ಲಿ ಬೇಲ್ ಸಿಕ್ಕಿಲ್ಲ ಅಂದ್ರೆ ಮತ್ತಷ್ಟು ಹೋರಾಟವಾಗುತ್ತಿತ್ತು. ಸಂತೋಷ್‌ಗೆ ದೊಡ್ಡ ಮಟ್ಟದ ಅಭಿಮಾನಿ ಬಳಗವಿದೆʼʼ ಎಂದು ಮಧು ನೆನಪಿಸಿದರು.

ಇದನ್ನೂ ಓದಿ : Varthur Santhosh : ವರ್ತೂರು ಸಂತೋಷ್‌ಗೆ ಬಿಗ್‌ ರಿಲೀಫ್‌, ಜಾಮೀನಿನಲ್ಲಿ ಬಿಡುಗಡೆ

ʻʻಜೈಲಿನಿಂದ ಹೊರ ಹೋದ ಬಳಿಕ ಮತ್ತಷ್ಟು ಹೆಸರು ಮಾಡ್ತಾರೆ ಎಂದು ತಿಳಿದು ಬೇಕು ಅಂತಲೇ ಟಾರ್ಗೆಟ್‌ ಮಾಡಿ ಈ ರೀತಿ ಸಿಲುಕಿಸಲಾಗಿದೆ. ದೊಡ್ಡದೊಡ್ಡ ನಟರು, ಉದ್ಯಮಿಗಳು ಹುಲಿ ಉಗುರು ಹಾಕಿಕೊಂಡಿದ್ದಾರೆ. ಆದರೆ, ವರ್ತೂರ್ ಸಂತೋಷ್‌ ಅವರನ್ನು ಮಾತ್ರ ಸಿಲುಕಿಸುವ ಕೆಲಸ ಮಾಡಲಾಗಿದೆ, ಅದಕ್ಕೆಲ್ಲ ಮುಂದಿನ ದಿನಗಳಲ್ಲಿ ಉತ್ತರ ಸಿಗುತ್ತದೆ. ನಮ್ಮ ಹಳ್ಳಿಕಾರ್ ಏನು ಅಂತ ನಮಗೆ ಚೆನ್ನಾಗಿ ಗೊತ್ತಿದೆʼʼ ಎಂದು ಸಂತೋಷ್ ಆಪ್ತ ಮಧು ಹೇಳಿದರು.

ವರ್ತೂರು ಸಂತೋಷ್‌ಗೆ ಅದ್ಧೂರಿ ಸ್ವಾಗತ

ಪರಪ್ಪನ ಅಗ್ರಹಾರ ಜೈಲಿನಿಂದ ಹೊರಬಂದ ವರ್ತೂರ್ ಸಂತೋಷ್ಗೆ ಆಪ್ತರು ಭವ್ಯ ಸ್ವಾಗತ ಕೋರಿದರು. ಆದರೆ, ಸಂತೋಷ್‌ ಮಾತ್ರ ಹೆಚ್ಚೇನೂ ಮಾತನಾಡದೆ ಹೊರಟು ಹೋದರು.

Exit mobile version