Site icon Vistara News

BJP Karnataka : ಒಕ್ಕಲಿಗರಿಗೇ ರಾಜ್ಯ ಬಿಜೆಪಿ ಅಧ್ಯಕ್ಷ ಪಟ್ಟ?

Vokkalagi precident in BJP CT Ravi shobha karandlaje Ashwath narayan and R Ashok

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ (Karnataka Assembly Elections) ಮುಗಿದು ಫಲಿತಾಂಶ ಬಂದು ಕಾಂಗ್ರೆಸ್‌ ಆಡಳಿತ ನಡೆಸುತ್ತಿದೆ. ಆದರೆ, ರಾಜ್ಯ ಬಿಜೆಪಿಯಲ್ಲಿ (BJP Karnataka) ಪ್ರತಿಪಕ್ಷ ನಾಯಕನ ಸ್ಥಾನ ಮಾತ್ರ ಇನ್ನೂ ಭರ್ತಿಯಾಗಿಲ್ಲ. ಪ್ರತಿಪಕ್ಷ ನಾಯಕನಿಲ್ಲದೇ ಒಂದು ಸದನ ಮುಗಿದು ಹೋಗಿದೆ. ಇದರ ಜತೆಗೆ ಬಿಜೆಪಿ ರಾಜ್ಯಾಧ್ಯಕ್ಷ (BJP state president) ಆಯ್ಕೆ ಸಹ ಯಥಾ ಸ್ಥಿತಿಯಲ್ಲಿತ್ತು. ಈ ಮಧ್ಯೆ ಬಿಜೆಪಿ ಹಾಗೂ ಜೆಡಿಎಸ್‌ ಮಧ್ಯೆ ಮೈತ್ರಿ (BJP and JDS Alliance) ಮಾತುಕತೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಹಲವು ರಾಜಕೀಯ ಲೆಕ್ಕಾಚಾರಗಳನ್ನು ಬಿಜೆಪಿ ಹಾಕಿಕೊಂಡಿತ್ತು. ಸದ್ಯಕ್ಕೆ ಈ ಎಲ್ಲವೂ ತಲೆಕೆಳಗಾದಂತೆ ಕಾಣುತ್ತಿದ್ದು, ಇನ್ನು ತಡ ಮಾಡುವುದು ಬೇಡ ಎಂಬ ನಿರ್ಧಾರಕ್ಕೆ ಕಮಲ ಪಕ್ಷದ ನಾಯಕರು ಬಂದಂತೆ ಕಾಣುತ್ತಿದೆ. ಇದರ ಭಾಗವಾಗಿ ಮೊದಲಿಗೆ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಗೆ ಸಕಲ ಸಿದ್ಧತೆ ನಡೆಯುತ್ತಿದೆ. ಇಲ್ಲಿ ಜಾತಿ ಸೂತ್ರಕ್ಕೆ ಮೊರೆ ಹೋಗಲಾಗಿದ್ದು, ಒಕ್ಕಲಿಗ ಸಮುದಾಯ ನಾಯಕರಿಗೇ (Vokkaliga community leader) ಈ ಪಟ್ಟ ಒಲಿಯುವ ಸಾಧ್ಯತೆ ನಿಚ್ಚಳವಾಗಿದೆ.

ಈಗ ಈ ಸಂಬಂಧ ರಾಜ್ಯ ಬಿಜೆಪಿಯಲ್ಲಿ ಬಿರುಸಾದ ಚಟುವಟಿಕೆ ನಡೆಯುತ್ತಿದೆ. ಜೆಡಿಎಸ್ ಜತೆಗಿನ ಮೈತ್ರಿ, ವಿಲೀನ ಸದ್ಯಕ್ಕಿಲ್ಲ ಎಂಬುದನ್ನು ಅರಿತ ಬಿಜೆಪಿ ನಾಯಕರು ಮುಂದಿನ ನಿರ್ಧಾರಗಳಿಗೆ ಅಣಿಯಾಗುತ್ತಿದ್ದಾರೆ. ಅಲ್ಲದೆ, ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ (HD Devegowda) ಅವರು ಮೈತ್ರಿಗೆ ರೆಡ್‌ಸಿಗ್ನಲ್ ತೋರಿದ್ದರಿಂದ ಕಮಲ ಪಡೆಗೆ ಈಗ ಮುಂದಿನ ಹಾದಿ ಸ್ಪಷ್ಟವಾಗಿದೆ.

ಇದನ್ನೂ ಓದಿ: Gruha Lakshmi scheme : ಗೃಹಲಕ್ಷ್ಮಿ ನೋಂದಣಿ ಮತ್ತಷ್ಟು ಸರಳ; ಮೆಸೇಜ್‌ ಮಾಡ್ಬೇಕಾಗಿಲ್ಲ, ಡೈರೆಕ್ಟ್‌ ಹೋಗಿ!

ಶುರುವಾಗಿದೆ ಕಾಂಬಿನೇಷನ್‌ ಲೆಕ್ಕಾಚಾರ

ಈಗಾಗಲೇ ಬಹಳಷ್ಟು ವಿಳಂಬವಾಗಿದೆ. ಇನ್ನು ಮತ್ತಷ್ಟು ಕಾಯದೆ ರಾಜ್ಯ ಅಧ್ಯಕ್ಷರ ನೇಮಕ ಮಾಡುವ ಕಡೆಗೆ ಗಮನ ಹರಿಸಲೇಬೇಕು ಎಂಬ ತೀರ್ಮಾನಕ್ಕೆ ಬರಲಾಗಿದೆ. ವಿಧಾನಸಭೆ ಪ್ರತಿಪಕ್ಷ ನಾಯಕನ ಜತೆಗೆ ರಾಜ್ಯ ಅಧ್ಯಕ್ಷ ಹುದ್ದೆಯ ಜಾತಿ ಕಾಂಬಿನೇಷನ್ (Caste Combination) ನಡೆಯುತ್ತಿದೆ. ಎರಡು ಪ್ರಬಲ ಸಮುದಾಯಗಳಿಗೆ ಮಣೆ ಹಾಕಬೇಕಾದ ಅನಿವಾರ್ಯತೆ ಬಿಜೆಪಿಗಿದೆ.

1980ರಿಂದ ಇಲ್ಲಿಯವರೆಗೆ ಹಳೇ ಮೈಸೂರು ಭಾಗದ ಒಕ್ಕಲಿಗರಿಗೆ ಸೂಕ್ತ ಪ್ರಾತಿನಿಧ್ಯ ಸಿಗುತ್ತಿಲ್ಲ. ಈ ಸಂಬಂಧ ಕೇಂದ್ರ ಬಿಜೆಪಿಯ ವರಿಷ್ಠರು ರಾಜ್ಯ ಬಿಜೆಪಿಯಿಂದ ವರದಿ ಪಡೆದಿದ್ದಾರೆ. ಈವರೆಗೆ ಸಮುದಾಯದ ಆಧಾರವಾಗಿ ನೋಡುವುದಾದರೆ ಒಕ್ಕಲಿಗ ಸಮುದಾಯದಿಂದ ಕೇಂದ್ರ ಮಾಜಿ ಸಚಿವ ಡಿ.ವಿ. ಸದಾನಂದ ಗೌಡ ಒಬ್ಬರೇ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರು.

ಕೊಡವ ಸಮುದಾಯದ ಎ.ಕೆ.‌ಸುಬ್ಬಯ್ಯ ಅವರು ಬಿಜೆಪಿಯ ಮೊದಲ ಅಧ್ಯಕ್ಷರಾಗಿದ್ದವರು. ನಂತರ ವೀರಶೈವ ಲಿಂಗಾಯತ ಸಮುದಾಯದ ಬಿ.ಎಸ್.‌ ಯಡಿಯೂರಪ್ಪ 3 ಬಾರಿ‌ ಅಧ್ಯಕ್ಷರಾಗಿದ್ದಾರೆ. ಅದೇ ಸಮುದಾಯದ ಬಿ.ಬಿ. ಶಿವಪ್ಪ, ಬಸವರಾಜ ಪಾಟೀಲ್ ಸೇಡಂ, ಜಗದೀಶ ಶೆಟ್ಟರ್ ಅಧ್ಯಕ್ಷರಾಗಿದ್ದಾರೆ. ಕುರುಬ ಸಮುದಾಯದ ಕೆ.ಎಸ್. ಈಶ್ವರಪ್ಪ ಎರಡು ಬಾರಿ ಅಧ್ಯಕ್ಷರಾಗಿದ್ದರು. ಬ್ರಾಹ್ಮಣ ಸಮುದಾಯದ ಅನಂತಕುಮಾರ್, ಪ್ರಲ್ಹಾದ ಜೋಶಿ ತಲಾ ಒಂದು‌ ಬಾರಿ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ್ದರು. ಇದೇ ಮೊದಲ ಬಾರಿಗೆ ಬಂಟ ಸಮುದಾಯದ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷರಾಗಿದ್ದಾರೆ.

ಒಕ್ಕಲಿಗರ ಮೇಲೆ ಆಶಾಕಿರಣ

ಒಕ್ಕಲಿಗರು ಬಿಜೆಪಿಗೆ ಮತ ನೀಡುವುದಿಲ್ಲ ಎಂದು ನಿರ್ಧರಿಸಿದ್ದ ಬಿಜೆಪಿ ಆ ಸಮುದಾಯವನ್ನು ಅಧ್ಯಕ್ಷ ಪಟ್ಟಕ್ಕೆ ಹೆಚ್ಚು ಪರಿಗಣಿಸುತ್ತಿರಲಿಲ್ಲ. ಆದರೆ, ಈ ವಿಧಾನಸಭೆ ಚುನಾವಣೆಯಲ್ಲಿ ಆಶಾಕಿರಣ ಕಂಡುಬಂದಿದೆ.. ಒಕ್ಕಲಿಗ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಬಿಜೆಪಿ ಗಣನೀಯ ಸಾಧನೆ ಮಾಡಿದೆ. ಹೆಚ್ಚಿನ ಮತವನ್ನು ಗಳಿಕೆ ಮಾಡಿದೆ. ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರದಲ್ಲೂ ಸಾಕಷ್ಟು ಮತಗಳು ಲಭಿಸಿವೆ.

ಗೆಲ್ಲುವಷ್ಟು ಮತ ಸಿಕ್ಕಿಲ್ಲವಾದರೂ ಒಕ್ಕಲಿಗ ಮತವನ್ನು ಬಿಜೆಪಿ ಪಡೆದಿದ್ದರಿಂದ ಜೆಡಿಎಸ್ ಸೋತಿದೆ. ಅಲ್ಲಿನ ಮತದಾರರ ವಿಶ್ವಾಸವನ್ನು ಉಳಿಸಿಕೊಂಡರೆ ಮುಂದಿನ ಚುನಾವಣೆಗಳಲ್ಲಿ ಲಾಭ ಕಟ್ಟಿಟ್ಟ ಬುತ್ತಿ ಎಂಬ ತೀರ್ಮಾನಕ್ಕೆ ಕಮಲ ಪಕ್ಷ ಬಂದಿದೆ. ಹೀಗಾಗಿ ಒಕ್ಕಲಿಗರನ್ನೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪರಿಗಣಿಸಬೇಕು ಎಂಬ ಚರ್ಚೆ ನಡೆಯುತ್ತಿದೆ.

ಲಿಂಗಾಯತ ಸಮುದಾಯಕ್ಕೆ ಕಾರ್ಯಾಧ್ಯಕ್ಷ ಹುದ್ದೆ ಸೃಷ್ಟಿ?

ರಾಜ್ಯದ ಅನೇಕ ನಾಯಕರನ್ನು ಮಾತನಾಡಿಸಿದ ವರಿಷ್ಠರಿಗೆ ಈ ಮಾಹಿತಿ ಲಭಿಸಿದೆ. ಆದರೆ, ಈಗಾಗಲೇ ಜತೆಗಿರುವ ವೀರಶೈವ ಲಿಂಗಾಯತ ಸಮುದಾಯವನ್ನು ಕಡೆಗಣಿಸಬಾರದು ಎಂಬ ಎಚ್ಚರಿಕೆ ಸಹ ವರಿಷ್ಠರಲ್ಲಿ ಮೂಡಿದೆ. ಲಿಂಗಾಯತ ಸಮುದಾಯಕ್ಕೆ ಕಾರ್ಯಾಧ್ಯಕ್ಷ ಹುದ್ದೆಯನ್ನು ಸೃಜಿಸುವ ಚಿಂತನೆ ಸಹ ನಡೆದಿದೆ. ಒಂದು ವೇಳೆ ಅದೂ ಆಗದಿದ್ದರೆ ಪ್ರಧಾನ ಕಾರ್ಯದರ್ಶಿ ಸ್ಥಾನದಲ್ಲಿ ಹೆಚ್ಚಿನ ಆದ್ಯತೆ ನೀಡುವ ತೀರ್ಮಾನಕ್ಕೆ ಬರಲಾಗಿದೆ.

ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಲಿಂಗಾಯತ ನಾಯಕ?

ವಿಧಾನಸಭೆ ಪ್ರತಿಪಕ್ಷ ನಾಯಕನಾಗಿ ಲಿಂಗಾಯತರನ್ನು ಪರಿಗಣಿಸಲು ಚಿಂತನೆ ನಡೆಸಲಾಗಿದೆ. ಈ ಮೂಲಕ ಎರಡು ಪ್ರಬಲ ಸಮುದಾಯವನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗಲು ತೀರ್ಮಾನಿಸಲಾಗಿದೆ. ಒಕ್ಕಲಿಗ ಸಮುದಾಯದಿಂದ ರಾಜ್ಯಾಧ್ಯಕ್ಷರಾಗಲು ರೇಸ್‌ನಲ್ಲಿ ಅನೇಕರು ಇದ್ದಾರೆ. ಸಿ.ಟಿ. ರವಿ, ಡಾ. ಸಿ.ಎನ್.‌ ಅಶ್ಚತ್ಥನಾರಾಯಣ, ಶೋಭಾ ಕರಂದ್ಲಾಜೆ, ಆರ್. ಅಶೋಕ್ ಹೆಸರು ಚರ್ಚೆಯಲ್ಲಿದೆ. ವಾರದಲ್ಲಿ ಈ ಕುರಿತು ಸ್ಪಷ್ಟ ಅಭಿಪ್ರಾಯಕ್ಕೆ ಬರಲಿದೆ.

ಇದನ್ನೂ ಓದಿ: CP Yogeshwar : ತಂದೆಯ ವಿರುದ್ಧವೇ ಸಿಡಿದ ಸಿ.ಪಿ. ಯೋಗೇಶ್ವರ್‌ ಪುತ್ರಿ! ಡಿಕೆಶಿ ಭೇಟಿ ಹಿಂದಿನ ರಹಸ್ಯವೇನು?

ಬರಲಿದ್ದಾರಾ ವಿನೋದ್‌ ತಾವಡೆ?

ಈ ಎಲ್ಲ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರದಿಂದ ವಿನೋದ್ ತಾವಡೆ ಆಗಮಿಸುವ ಸಾಧ್ಯತೆ ಇದೆ. ಅವರು ರಾಜ್ಯಕ್ಕೆ ಬಂದು ಅಂತಿಮ ಸುತ್ತಿನ ಅಭಿಪ್ರಾಯ ಪಡೆಯಲಿದ್ದಾರೆ. ಇಲ್ಲಿ ವ್ಯಕ್ತವಾದ ಅಭಿಪ್ರಾಯಗಳ ಒಟ್ಟಾರೆ ಚಿತ್ರಣವನ್ನು ಕೇಂದ್ರದ ವರಿಷ್ಠರಿಗೆ ಮುಟ್ಟಿಸಲಿದ್ದಾರೆ. ಅಲ್ಲಿ ಅಂತಿಮವಾಗಿ ರಾಜ್ಯಾಧ್ಯಕ್ಷರು ಹಾಗೂ ಪ್ರತಿಪಕ್ಷ ನಾಯಕನ ಆಯ್ಕೆ ನಡೆಯಲಿದೆ.

Exit mobile version