Site icon Vistara News

Amit Shah: ಲಿಂಗಾಯತ, ಒಕ್ಕಲಿಗರ ಮೀಸಲಾತಿ ಕಿತ್ತು ಮುಸ್ಲಿಮರಿಗೆ ಕೊಡುತ್ತೀರಾ?; ಕಾಂಗ್ರೆಸ್‌ಗೆ ಅಮಿತ್‌ ಶಾ ಪ್ರಶ್ನೆ

Will you take away the reservation of Lingayats and Vokkaligas and give them to Muslims Amit Shah questions to Congress

ಚಾಮರಾಜನಗರ/ಹಾಸನ/ಮೈಸೂರು: ಚುನಾವಣಾ ಚಾಣಕ್ಯ ಎಂದೇ ಹೆಸರಾಗಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಅವರು ರಾಜ್ಯಕ್ಕೆ ಮೇಲಿಂದ ಮೇಲೆ ಭೇಟಿ ನೀಡುತ್ತಿದ್ದು, ಸಭೆ, ಸಮಾವೇಶಗಳನ್ನು ಹಮ್ಮಿಕೊಳ್ಳುವ ಮೂಲಕ ರಣತಂತ್ರವನ್ನು ರೂಪಿಸುತ್ತಿದ್ದಾರೆ. ಈ ನಡುವೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ (Gundlupet Assembly Constituency of Chamarajanagar District) ಹಾಗೂ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಭರ್ಜರಿ ರೋಡ್‌ ಶೋ ನಡೆಸಿ, ಮಿಂಚಿನ ಸಂಚಲನವನ್ನುಂಟು ಮಾಡಿದ್ದಾರೆ. ಈ ವೇಳೆ ಮಾತನಾಡಿದ ಅಮಿತ್‌ ಶಾ (Amit Shah), “ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಮುಸ್ಲಿಂರಿಗೆ ನೀಡಿದ್ದ 4 ಪರ್ಸೆಂಟ್ ಮೀಸಲಾತಿಯನ್ನು ನಾವು ತೆಗೆದುಹಾಕಿ ಲಿಂಗಾಯತರು, ಒಕ್ಕಲಿಗರಿಗೆ ಹಂಚಿದ್ದೇವೆ. ಆದರೆ, ಇದನ್ನು ತೆಗೆದುಹಾಕುವುದಾಗಿ ಕಾಂಗ್ರೆಸ್‌ನವರು ಹೇಳುತ್ತಿದ್ದು, ಯಾರ ಮೀಸಲಾತಿಯನ್ನು ತೆಗೆಯುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ.

Amit Shah rally Gundlupet Assembly Constituency of Chamarajanagar District

ಜನಸ್ತೋಮದೆದುರು ರೋಡ್‌ ಶೋ

ಗುಂಡ್ಲುಪೇಟೆ ಬಿಜೆಪಿ ಅಭ್ಯರ್ಥಿ ನಿರಂಜನ್‌ ಕುಮಾರ್‌ ಪರವಾಗಿ ಭರ್ಜರಿ ರೋಡ್‌ ಶೋ ನಡೆಸಿದ ಅಮಿತ್‌ ಶಾ ಅವರಿಗೆ ಹೂ ಮಳೆ ಸ್ವಾಗತ ದೊರೆಯಿತು. ರಸ್ತೆಯುದ್ದಕ್ಕೂ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಸಾಲು ಗಟ್ಟಿ ನಿಂತಿದ್ದರು. ಸಂಸದ ಪ್ರತಾಪ್ ಸಿಂಹ, ಶಾಸಕ ನಿರಂಜನ್ ಸೇರಿದಂತೆ ಮತ್ತಿತರರು ಜತೆಗಿದ್ದರು. ದಾರಿಯುದ್ದಕ್ಕೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಜೈಕಾರ ಕೂಗಿದರು. ಇದೇ ವೇಳೆ ಬ್ಯಾರಿಕೇಡ್ ತೆರವು ಮಾಡಿ ಕಾರ್ಯಕರ್ತರನ್ನು ರಸ್ತೆಗೆ ಬರುವಂತೆ ಅಮಿತ್ ಶಾ ಸೂಚನೆ ನೀಡಿದರು.

ಇದನ್ನೂ ಓದಿ: PM Narendra Modi : ಮೋದಿಯವರ ಸರ್ವ ಧರ್ಮ ಸಮ ಭಾವ ನೀತಿಗೆ ಆಸ್ಟ್ರೇಲಿಯಾದಲ್ಲಿ ಚಿಂತಕರ ಮೆಚ್ಚುಗೆ

ಜಾತಿ ಮೀಸಲಾತಿ ಅಸ್ತ್ರ ಪ್ರಯೋಗ

ಚಾಮರಾಜನಗರ ಜಿಲ್ಲೆಯಲ್ಲಿ ಬಿಜೆಪಿ ನಾಲ್ಕಕ್ಕೆ ‌ನಾಲ್ಕು ಸ್ಥಾನ ಗೆಲ್ಲಲಿದೆ. ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಮುಸ್ಲಿಂರಿಗೆ ನೀಡಿದ್ದ 4 ಪರ್ಸೆಂಟ್ ಮೀಸಲಾತಿಯನ್ನು ನಾವು ತೆಗದುಹಾಕಿದ್ದೇವೆ. ಅದನ್ನು ನಾವು ಲಿಂಗಾಯತರು, ಒಕ್ಕಲಿಗರಿಗೆ ಹಂಚಿದ್ದೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಸ್ಲಿಂರಿಗೆ ವಾಪಸ್ ಮೀಸಲಾತಿ ಕೊಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳುತ್ತಿದ್ದಾರೆ.‌ ಯಾರ ಮೀಸಲಾತಿ ಕಡಿಮೆ ಮಾಡಿ ಅವರಿಗೆ ಕೊಡುತ್ತೀರಾ? ಲಿಂಗಾಯತರ ಮೀಸಲಾತಿ ಕಡಿಮೆ ಮಾಡ್ತೀರಾ? ಒಕ್ಕಲಿಗರ ಮೀಸಲಾತಿ ಕಡಿಮೆ ಮಾಡ್ತೀರಾ? ಎಂದು ಗುಂಡ್ಲುಪೇಟೆಯಲ್ಲಿ ರೋಡ್‌ ಶೋ ವೇಳೆ ಕಾಂಗ್ರೆಸ್‌ಗೆ ಅಮಿತ್ ಶಾ ಪ್ರಶ್ನೆ ಮಾಡಿದರು.

ಕಾಂಗ್ರೆಸ್‌ನವರದ್ದು ತುಷ್ಟೀಕರಣ ರಾಜಕಾರಣ, ನರೇಂದ್ರ ಮೋದಿ ಅವರದ್ದು ವಿಕಾಸ ರಾಜಕಾರಣ. ಹಾಗಾಗಿ ನಿಮ್ಮ ಬೆಂಬಲ ಯಾರಿಗೆ ಕೊಡಬೇಕು ಎಂಬುದನ್ನು ನೀವೇ ನಿರ್ಧಾರ ಮಾಡಿ. ಬಿಜೆಪಿಯಿಂದ ಮಾತ್ರವೇ ಅಭಿವೃದ್ಧಿ ಸಾಧ್ಯ ಎಂದು ಶಾ ಹೇಳಿದರು.

ಶಾ ಆಗಮನದಿಂದ ಬಿಜೆಪಿಗೆ ಪ್ಲಸ್‌

ಈ ಬಗ್ಗೆ ಬಿಜೆಪಿ ಕಾರ್ಯಕರ್ತನೊಬ್ಬ ಮಾತನಾಡಿ, ಗುಂಡ್ಲುಪೇಟೆಗೆ ಅಮಿತ್ ಷಾ ಆಗಮನದಿಂದಾಗಿ ಚುನಾವಣೆಯಲ್ಲಿ ಸಾಕಷ್ಟು ಪ್ಲಸ್ ಆಗಲಿದೆ. ಸ್ಥಳೀಯ ಶಾಸಕ ನಿರಂಜನ್ ಕುಮಾರ್ 30 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲುವು ಸಾಧಿಸುತ್ತಾರೆ.. ಈಗಾಗಲೇ ಶಾಸಕರು ಗುಂಡ್ಲುಪೇಟೆ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸವನ್ನು ಶಾಸಕರು ಮಾಡಿದ್ದಾರೆ. ಈ ಭಾರಿ ನಿರಂಜನ್ ಗೆಲುವು ನಿಶ್ಚಿತ. ಅಮಿತ್ ಷಾ ಅವರನ್ನು ನೋಡಿ ಕಾರ್ಯಕರ್ತರಿಗೆ ಹೊಸ ಉತ್ಸಾಹ ಬಂದಂತಾಗಿದೆ ಎಂದು ಹೇಳಿದರು.

ರಾಮದಾಸ್‌ ತಬ್ಬಿಕೊಂಡ ಶಾ

ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕೇಂದ್ರ ಗೃಹ‌ ಸಚಿವ ಅಮಿತ್ ಶಾ ಅವರಿಗೆ ಮೈಸೂರು ಜಿಲ್ಲಾ ಬಿಜೆಪಿ ವತಿಯಿಂದ ಸ್ವಾಗತ ಕೋರಲಾಯಿತು. ಈ ವೇಳೆ ಶಾಸಕ ಎಸ್.ಎ. ರಾಮದಾಸ್‌ ಅವರು ಕೈ ಕುಲುಕಿ ಸ್ವಾಗತ ಕೋರುತ್ತಿದ್ದಂತೆ ಅಮಿತ್‌ ಶಾ ಅವರು ರಾಮದಾಸ್‌ ಅವರನ್ನು ತಬ್ಬಿ ಭುಜ ತಟ್ಟಿದರು. ಈ ವೇಳೆ ಸಂಸದ ಪ್ರತಾಪ್ ಸಿಂಹ, ಮೇಯರ್ ಶಿವಕುಮಾರ್, ಉಪ‌ ಮೇಯರ್ ರೂಪಾ, ಚುನಾವಣಾ ಉಸ್ತುವಾರಿ ವಿ.ರವಿಶಂಕರ್, ಕೆ.ಆರ್.ಕ್ಷೇತ್ರದ ಚುನಾವಣಾ ಉಸ್ತುವಾರಿ ರಾಜೀವ್ ಬಬ್ಬರ್ ಸೇರಿ 14 ಜನರಿದ್ದರು.

ಚಾಮುಂಡೇಶ್ವರಿಗೆ ಪೂಜೆ

ವಿಮಾನ ನಿಲ್ದಾಣದಿಂದ ಸೀದಾ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ಗೃಹ ಸಚಿವ ಅಮಿತ್ ಶಾ, ಶ್ರೀ ಚಾಮುಂಡೇಶ್ವರಿ ಅಮ್ಮನವರ ದರ್ಶನ ಪಡೆದರು. ಮೊದಲಿಗೆ ಅವರಿಗೆ ದೇವಾಲಯದ ಮುಖ್ಯದ್ವಾರದ ಬಳಿ ಬಿಜೆಪಿ ಕಾರ್ಯಕರ್ತರಿಂದ ಸ್ವಾಗತ ಕೋರಲಾಯಿತು. ದೇವಾಲಯಕ್ಕೆ ತೆರಳಿ ನಾಡಿನ ಅಧಿದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ, ಮಹಾಮಂಗಳಾರತಿಯನ್ನು ಸ್ವೀಕರಿಸಿದರು. ಎಸ್‌ಪಿಜಿ ಮಾರ್ಗದರ್ಶನದಲ್ಲಿ ಸಿಆರ್‌ಪಿಎಫ್, ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ಅನ್ನು ಏರ್ಪಡಿಸಲಾಗಿತ್ತು.

ಇದನ್ನೂ ಓದಿ: ವಿಸ್ತಾರ Explainer: ಕೇಶವಾನಂದ ಭಾರತೀ ಪ್ರಕರಣಕ್ಕೆ 50 ವರ್ಷ; ಇದು ಸಂವಿಧಾನದ ಮೂಲ ಸ್ವರೂಪ ಉಳಿಸಿದ ತೀರ್ಪು

ಹಾಸನದಲ್ಲಿ ರೋಡ್‌ ಶೋ

ಹಾಸನ ಜಿಲ್ಲೆಯ ಸಕಲೇಶಪುರ ವಿಧಾನಸಭಾ ಕ್ಷೇತ್ರದ ಆಲೂರಿನಲ್ಲಿ ಬಿಜೆಪಿ ಅಭ್ಯರ್ಥಿ ಎಸ್.‌ ಮಂಜುನಾಥ ಅವರ ಪರ ಅಮಿತ್ ಶಾ ರೋಡ್ ಶೋ ನಡೆಸಿದರು. ಆಲೂರಿನ ಕೆ.ಇ.ಬಿ ಸರ್ಕಲ್‌ನಿಂದ ಮೆರವಣಿಗೆಯನ್ನು ಆರಂಭಿಸಲಾಗಿತ್ತು. ರೋಡ್ ಶೋದಲ್ಲಿ ಶಾಸಕ ಪ್ರೀತಂಗೌಡ, ಜಿಲ್ಲಾಧ್ಯಕ್ಷ ಎಚ್.ಕೆ. ಸುರೇಶ್ ಸೇರಿದಂತೆ ಇತರರು ಭಾಗಿಯಾಗಿದ್ದರು. ಈ ವೇಳೆ ಭಾರಿ ಸಂಖ್ಯೆಯಲ್ಲಿ ಜನ ಸೇರಿ ಅಭಿನಂದನೆ ಸಲ್ಲಿಸಿದರು.

Exit mobile version