ಬೆಂಗಳೂರು: ಇಂದಿನಿಂದ ಚಳಿಗಾಲದ ಎರಡನೇ ವಾರದ ರಾಜ್ಯ ವಿಧಾನಸಭೆ ಅಧಿವೇಶನ (Winter session) ಆರಂಭವಾಗಲಿದೆ. ರಾಜ್ಯ ಸರ್ಕಾರದ ವಿರುದ್ಧ ಇನ್ನಷ್ಟು ಅಟ್ಯಾಕ್ ಮಾಡಲು ಪ್ರತಿಪಕ್ಷ ಸಜ್ಜಾಗುತ್ತಿದೆ.
ಮೊದಲ ವಾರ ಬಿಜೆಪಿಯೊಳಗಿನ ಭಿನ್ನಮತಗಳಿಂದಾಗಿ ಸರ್ಕಾರಕ್ಕೆ ಲಾಭವಾಗಿತ್ತು. ಎರಡನೇ ವಾರ ಸರ್ಕಾರಕ್ಕೆ ತಲೆ ಬಿಸಿ ಉಂಟುಮಾಡಲು ಒಗ್ಗಟ್ಟಿನ ಹೋರಾಟಕ್ಕೆ ಬಿಜೆಪಿ ಸಜ್ಜಾಗುತ್ತಿದೆ. ಒಗ್ಗಟ್ಟಿನ ಹೋರಾಟಕ್ಕಾಗಿ ಇಂದು ಅತೃಪ್ತ ಹಾಗೂ ಹಿರಿಯ ಶಾಸಕರ ಜೊತೆಗೆ ಸಭೆ ಆಯೋಜನೆ ಮಾಡಲಾಗಿದೆ. ಬಿಜೆಪಿ ಸಭೆಯ ಹಿನ್ನೆಲೆಯಲ್ಲಿ ಸರ್ಕಾರ ಅಲರ್ಟ್ ಆಗಿದೆ.
ಬಿಜೆಪಿ ವಿರುದ್ಧ ಮೊದಲ ವಾರ ಸರ್ಕಾರದ ಸಚಿವರು ಹಾಗೂ ಶಾಸಕರು ಒಗ್ಗಟ್ಟು ಪ್ರದರ್ಶಿಸಿದ್ದರು. ಎರಡನೇ ವಾರವೂ ಒಗ್ಗಟ್ಟಿನ ಮಂತ್ರ ಪಠಿಸಲು ಮುಂದಾಗಿದ್ದಾರೆ. ಸಚಿವ ಜಮೀರ್ ಅಹ್ಮದ್ ಅವರು ಸ್ಪೀಕರ್ ಕುರಿತು ನೀಡಿರುವ ಹೇಳಿಕೆ ಮುಂದಿಟ್ಟು ಬಿಜೆಪಿ ದಾಳಿ ನಡೆಸುವ ಸಾಧ್ಯತೆ ಇದೆ. ಇದಕ್ಕಾಗಿ ಕೆಲ ಮಹತ್ವದ ಮಾಹಿತಿಗಳನ್ನು ಸರ್ಕಾರ ಕಲೆ ಹಾಕಿದೆ.
ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಪೀಕರ್ ಪೀಠದಲ್ಲಿ ಕುಳಿತು ಆರ್.ಎಸ್ ಎಸ್ ಬಗ್ಗೆ ಆಡಿರುವ ಮಾತುಗಳನ್ನು ಪ್ರಸ್ತಾಪ ಮಾಡುವ, ಸ್ಪೀಕರ್ ಸ್ಥಾನದ ಕುರಿತು ಬಿಜೆಪಿ ಮಾಡಿರುವ ಎಡವಟ್ಟುಗಳನ್ನ ಪ್ರಸ್ತಾಪ ಮಾಡುವ, ಆ ಮೂಲಕ ಸಚಿವ ಜಮೀರ್ ಅಹಮದ್ ಬೆನ್ನಿಗೆ ನಿಲ್ಲುವ ಸಾಧ್ಯತೆ ಇದೆ. ಡಿಸಿಎಂ ಡಿಕೆ ಶಿವಕುಮಾರ್ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಾಗ ಬಿಜೆಪಿ ಸರ್ಕಾರ ಮಾಡಿದ ಎಡವಟ್ಟಗಳನ್ನು, ತಾಂತ್ರಿಕ ದೋಷಗಳನ್ನು ಎಳೆ ಎಳೆಯಾಗಿ ಬಿಡಿಸಿ ಇಡುವ, ಆ ಮೂಲಕ ಡಿಕೆಶಿ ಪರ ಬ್ಯಾಟಿಂಗ್ ಮಾಡುವ ಸಾಧ್ಯತೆ ಇದೆ.
YST ಟ್ಯಾಕ್ಸ್ ಆರೋಪ ಮಾಡಿದ್ರೆ ಬಿಜೆಪಿ ಕಾಲದ ವರ್ಗಾವಣೆ ಲೋಪಗಳನ್ನು ಪ್ರಸ್ತಾಪ ಮಾಡಬಹುದು. ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿ ಮಾಡಿದ್ದೇವೆ. ರಾಜ್ಯ ಬರಗಾಲದಲ್ಲಿದ್ದರೂ ಕೇಂದ್ರ ಸರ್ಕಾರದಿಂದ ನೆರವು ಸಿಕ್ಕಿಲ್ಲ, ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡಿದೆ, ಬಿಜೆಪಿ ಅಧಿಕಾರದಲ್ಲಿದ್ದಾಗಲೂ ರಾಜ್ಯಕ್ಕಾಗಿ ಇಲ್ಲಿಯ ಬಿಜೆಪಿ ಮುಖಂಡರು, ಸಂಸದರು ಹೋಗಿ ಕೇಂದ್ರ ಬಳಿ ಮಾತಾಡಿಲ್ಲ ಎಂದು ಮರು ದಾಳಿ ನಡೆಸಲಿದೆ. ರಾಜ್ಯ ಸರ್ಕಾರ ಬರದ ಕುರಿತು ಕೈಗೊಂಡಿರುವ ಕಾರ್ಯಕ್ರಮಗಳನ್ನು ಅಂಕಿ ಅಂಶ ಸಮೇತ ಪ್ರಸ್ತಾಪ ಮಾಡಿ ವಿಪಕ್ಷಗಳ ಆರೋಪಕ್ಕೆ ಸರ್ಕಾರ ಸಡ್ಡು ಹೊಡೆಯಲಿದೆ.
ಇದನ್ನೂ ಓದಿ: VISTARA TOP 10 NEWS : ಜಾತಿ ಗಣತಿಗೆ ಕಾಂಗ್ರೆಸ್ ಕಂಗಾಲು; ಜಮೀರ್‌ಗೆ ವಿಜಯೇಂದ್ರ ಸವಾಲು