ಬೆಂಗಳೂರು: ಕಾಂಗ್ರೆಸ್‌ನಿಂದ ಬಂಡಾಯವೆದ್ದು ಚುನಾವಣೆಯಲ್ಲಿ (Karnataka Election 2023) ಸ್ಪರ್ಧಿಸಿರುವ ಪಕ್ಷದ ಅಭ್ಯರ್ಥಿಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (d k shivakumar) ಖಡಕ್ ಎಚ್ಚರಿಕೆ ನೀಡಿದ್ದಾರೆ. ಬಂಡಾಯ ಅಭ್ಯರ್ಥಿಗಳಿಗೆ ಡಿಕೆಶಿ (d k shivakumar) ಬಹಿರಂಗ ಪತ್ರ ಬರೆದಿದ್ದು, “ವಿಧಾನಸಭೆ ಚುನಾವಣೆಯ ಸ್ಪರ್ಧೆಯಿಂದ ಹಿಂದೆ ಸರಿಯಬೇಕು. ಬಂಡಾಯ ಅಭ್ಯರ್ಥಿಗಳು ಹಿಂದೆ ಸರಿಯಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.
“ನಿಮಗೆಲ್ಲಾ ತಿಳಿದಿರುವಂತೆ ಪ್ರಸ್ತುತ ನಡೆಯುತ್ತಿರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರವಾದ ಅಲೆ ರಾಜ್ಯಾದ್ಯಂತ ಇದೆ. ರಾಜ್ಯದಲ್ಲಿ ಭ್ರಷ್ಟ ಬಿಜೆಪಿ ಸರ್ಕಾರದ ಆಡಳಿತದಿಂದ ಜನರು ಬೇಸತ್ತು ಹೋಗಿದ್ದಾರೆ. ಕಾಂಗ್ರೆಸ್ ಪಕ್ಷದ ಮೇಲೆ ಭರವಸೆ ಹೊಂದಿದ್ದಾರೆ. ಹಾಗಾಗಿ, ಕಾರ್ಯಕರ್ತರು ಹಗಲಿರುಳೆನ್ನದೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತಿದ್ದಾರೆ. ಆದರೆ, ಕಾಂಗ್ರೆಸ್ ಮುಖಂಡರು ಸ್ವತಂತ್ರವಾಗಿ ಕಣಕ್ಕಿಳಿದಿರುವುದು ತಿಳಿದುಬಂದಿದೆ. ಹಾಗಾಗಿ, ದಯಮಾಡಿ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿಯಬೇಕು” ಎಂದು ಡಿಕೆಶಿ ಸೂಚಿಸಿದ್ದಾರೆ.
“ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸದೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಪರವಾಗಿ ಬೆಂಬಲ ಘೋಷಿಸಬೇಕಾಗಿ ಕೋರುತ್ತೇನೆ. ಕೂಡಲೇ, ಸ್ಥಳೀಯವಾಗಿ ನಮ್ಮ ಕಾರ್ಯಕರ್ತರೊಂದಿಗೆ ಸೇರಿಕೊಳ್ಳಿ. ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಗೆಲ್ಲಿಸಲು ಸಹಕರಿಸಿ. ಕೂಡಲೇ ನೀವು ಸ್ಪರ್ಧೆಯಿಂದ ನಿವೃತ್ತರಾಗದಿದ್ದರೆ, ಅನಿವಾರ್ಯವಾಗಿ ನಿಮ್ಮ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂಬುದಾಗಿ ತಿಳಿಸುತ್ತೇನೆ” ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ: Karnataka Election 2023 : ಕಣದಿಂದ ಹಿಂದೆ ಸರಿದ ಗಂಗಾಂಬಿಕೆ, ರಾಮಣ್ಣ ಲಮಾಣಿ ಸೇರಿದಂತೆ ಪ್ರಮುಖ ಬಂಡಾಯ ಅಭ್ಯರ್ಥಿಗಳು