ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ವಿರುದ್ಧ ಅಕ್ರಮ ಸಂಪಾದನೆಗೆ ಸಂಬಂಧಪಟ್ಟಂತೆ 2019ರಲ್ಲಿ ಅಂದಿನ ಸಿಎಂ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರು ಸಿಬಿಐಗೆ ವಹಿಸಿದ್ದ ಕೇಸ್ (CBI Case) ಅನ್ನು ರಾಜ್ಯ ಸರ್ಕಾರ ಗುರುವಾರ ವಾಪಸ್ ಪಡೆದಿದೆ. ಆದರೆ, ಹೀಗೆ ವಾಪಸ್ ಪಡೆದಿರುವ ವಿಷಯ ಸ್ವತಃ ಡಿ.ಕೆ. ಶಿವಕುಮಾರ್ ಅವರಿಗೇ ಗೊತ್ತಿರಲಿಲ್ಲವಂತೆ. ಈ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, ಕೇಸ್ ವಾಪಸ್ ಪಡೆದಿರುವ ವಿಷಯವನ್ನು ಪತ್ರಿಕೆ ನೋಡಿ ತಿಳಿದುಕೊಂಡೆ ಎಂದು ಹೇಳಿದ್ದಾರೆ!
ಆದಾಯ ಮೂಲಕ್ಕಿಂತ 200 ಕೋಟಿಗೂ ಹೆಚ್ಚು ಅಕ್ರಮ ಸಂಪಾದನೆ (Illegal editing) ಮಾಡಿದ್ದ ಆರೋಪದ ಮೇಲೆ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ವಿರುದ್ಧದ ಸಿಬಿಐ ಕೇಸ್ (CBI Case) ಅನ್ನು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ಗುರುವಾರ ವಾಪಸ್ ಪಡೆದುಕೊಳ್ಳಲಾಗಿತ್ತು.
ಇದನ್ನೂ ಓದಿ: Namma Metro : ಮೆಟ್ರೊ ರೈಲಿಗೂ ಕಾಲಿಟ್ಟ ಭಿಕ್ಷುಕರು; ಮೊದಲ ಪ್ರಕರಣದಲ್ಲೇ 500 ರೂ. ದಂಡ
ರಾಜಕೀಯ ಪ್ರೇರಿತ ಪ್ರಕರಣ ಎಂದು ಸಂಪುಟ ಸದಸ್ಯರು ತೀರ್ಮಾನಿಸಿ ಈ ಪ್ರಕರಣವನ್ನು ಕೈಬಿಡಲಾಗಿದೆ. ಸ್ಪೀಕರ್ ಅನುಮತಿ ಪಡೆಯದೆ ಸರ್ಕಾರ ಸಿಬಿಐ ತನಿಖೆಗೆ ಕಳುಹಿಸಿದೆ. ಇದು ಕಾನೂನು ವಿರುದ್ಧದ ತೀರ್ಮಾನವಾಗಿದೆ. ಹಾಗಾಗಿ ಡಿ.ಕೆ. ಶಿವಕುಮಾರ್ ಪ್ರಕರಣವನ್ನು ರಾಜ್ಯ ಸರ್ಕಾರ ವಾಪಸ್ ಪಡೆಯುವ ನಿರ್ಧಾರಕ್ಕೆ ಬಂದಿದೆ. ಇನ್ನು ಎರಡು ಮೂರು ದಿನಗಳಲ್ಲಿ ಸರ್ಕಾರದ ಆದೇಶ ಆಗುತ್ತದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಮಾಹಿತಿ ನೀಡಿದ್ದರು. ಡಿ.ಕೆ. ಶಿವಕುಮಾರ್ ಗೈರು ಹಾಜರಿಯಲ್ಲಿ ಸಂಪುಟದಲ್ಲಿ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು.
ಸಿಬಿಐ ಪ್ರಕರಣವನ್ನು ವಾಪಸ್ ಪಡೆದಿರುವ ಬಗ್ಗೆ ಶುಕ್ರವಾರ (ನ. 24) ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ಈ ಬಗ್ಗೆ ನಾನು ಪತ್ರಿಕೆಗಳಲ್ಲಿ ನೋಡಿ ತಿಳಿದುಕೊಂಡೆ. ಈ ವಿಷಯದ ವಿಚಾರವಾಗಿ ಯಾರು ಮಾತನಾಡಬೇಕೊ ಅವರೇ ಮಾತನಾಡುತ್ತಾರೆ ಎಂದಷ್ಟೇ ಉತ್ತರ ನೀಡಿದ್ದಾರೆ. ಅಲ್ಲದೆ, ಅನಿವಾರ್ಯ ಕಾರಣಗಳಿಂದಾಗಿ ಗುರುವಾರ ನಡೆದ ಸಚಿವ ಸಂಪುಟ ಸಭೆಗೆ ಹೋಗಲು ಆಗಲಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಪ್ರಕರಣವನ್ನು ವಾಪಸ್ ಪಡೆಯುವ ವಿಚಾರವಾಗಿ ತಮಗೆ ಮಾಹಿತಿ ಇರಲಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಏನಿದು ಪ್ರಕರಣ?
2013ರಿಂದ 2018ರ ಅವಧಿಯಲ್ಲಿ ಆದಾಯಕ್ಕಿಂತಲೂ ಅಧಿಕ ಆಸ್ತಿ ಗಳಿಸಿದ ಆರೋಪ ಡಿ.ಕೆ. ಶಿವಕುಮಾರ್ ಮೇಲೆ ಇತ್ತು. ಈ ಪ್ರಕರಣವನ್ನು ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ನೇತೃತ್ವದ ಸರ್ಕಾರ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಿ 2019ರಲ್ಲಿ ಸಿಬಿಐಗೆ ನೀಡಿತ್ತು. ಸಿಬಿಐಗೆ ಪ್ರಕರಣವನ್ನು ವಹಿಸಿದ್ದನ್ನು ಪ್ರಶ್ನೆ ಮಾಡಿದ್ದ ಡಿ.ಕೆ. ಶಿವಕುಮಾರ್ ಕೋರ್ಟ್ ಮೊರೆ ಹೋಗಿದ್ದರು. ಎಫ್ಐಆರ್ ಹಾಕದೇ ಕೇಂದ್ರೀಯ ತನಿಖಾ ತಂಡಕ್ಕೆ ನೀಡಿದ್ದು ಸರಿಯಲ್ಲ ಎಂದು ಕೋರ್ಟ್ನಲ್ಲಿ ಡಿಕೆಶಿ ಪ್ರಶ್ನೆ ಮಾಡಿದ್ದರು.
ಅಲ್ಲದೆ ಇದೇ ಪ್ರಕರಣದಲ್ಲಿ ಸುಮಾರು ಐದು ತಿಂಗಳುಗಳ ಕಾಲ ಡಿ.ಕೆ. ಶಿವಕುಮಾರ್ ಜೈಲು ಪಾಲಾಗಿದ್ದರು. ಬಳಿಕ ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿತ್ತು. ಕೊನೆಗೆ ಕೋರ್ಟ್ನಿಂದ ಷರತ್ತುಬದ್ಧ ಜಾಮೀನು ಪಡೆಯಲಾಗಿತ್ತು. ಈ ನಡುವೆ ಹೈಕೋರ್ಟ್ನಲ್ಲಿ ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳಿ ಎಂದು ಸುಪ್ರೀಂ ಕೋರ್ಟ್ ಆದೇಶವನ್ನು ಹೊರಡಿಸಿತ್ತು. ಇಲ್ಲಿ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್ನ ಏಕ ಸದಸ್ಯ ಪೀಠ ಸಿಬಿಐ ವಿಚಾರಣೆಯನ್ನು ಎತ್ತಿ ಹಿಡಿದಿತ್ತು. ಹೀಗಾಗಿ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನೆ ಮಾಡಿದ ಡಿ.ಕೆ. ಶಿವಕುಮಾರ್ ದ್ವಿಸದಸ್ಯ ಪೀಠಕ್ಕೆ ಅಪೀಲು ಹೋಗಿದ್ದಾರೆ. ಈ ಅರ್ಜಿಯ ವಿಚಾರಣೆ ಇನ್ನೂ ನಡೆಯುತ್ತಿದೆ.
ಇದು ಅಡ್ವೋಕೇಟ್ ಜನರಲ್ ಸಲಹೆ!
ಈ ನಡುವೆ ಕ್ಯಾಬಿನೆಟ್ನಲ್ಲಿ ಈ ಪ್ರಕರಣವನ್ನು ವಾಪಸ್ ಪಡೆದುಕೊಳ್ಳಬಹುದು ಎಂದು ಅಡ್ವೋಕೇಟ್ ಜನರಲ್ ನೀಡಿರುವ ಸಲಹೆ ಮೇರೆಗೆ ಈಗ ಈ ವಿಚಾರವನ್ನು ಕ್ಯಾಬಿನೆಟ್ನಲ್ಲಿ ಚರ್ಚೆಗೆ ತೆಗೆದುಕೊಳ್ಳಲಾಗಿದೆ.
ಈ ಚಿಂತನೆ ಬಂದಿದ್ದು ಹೀಗೆ!
ಸಚಿವ ಸಂಪುಟ ಸಭೆ ಮುಂದೆ ಸಿಬಿಐಗೆ ನೀಡಿರುವ ಅನುಮತಿ ವಾಪಸ್ ಪಡೆಯುವ ಪ್ರಸ್ತಾವನೆ ವಿಚಾರವಾಗಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಡ್ವೋಕೇಟ್ ಜನರಲ್ ಆಗಿದ್ದ ಅಶೋಕ್ ಹಾರನಹಳ್ಳಿ ವರದಿ ಆಧರಿಸಿ ಹಾಲಿ ಎಜಿಯಿಂದ ಈ ಅಭಿಪ್ರಾಯ ವ್ಯಕ್ತವಾಗಿದೆ ಎನ್ನಲಾಗಿದೆ. ಸಿಬಿಐ ತನಿಖೆಗೆ ನೀಡುವಂತಹ ಪ್ರಕರಣ ಇದಲ್ಲ ಎಂದು ಅಂದಿನ ಎಜಿ ವಿರೋಧ ಮಾಡಿದ್ದರು. ಅಂದಿನ ಎಜಿ ವರದಿಯನ್ನೂ ಕಡೆಗಣಿಸಿ ಅಂದಿನ ಸರ್ಕಾರದಿಂದ ಸಿಬಿಐ ತನಿಖೆಗೆ ಅನುಮೋದನೆ ನೀಡಿತ್ತು. ಹಿಂದಿನ ಅಡ್ವೋಕೇಟ್ ಜನರಲ್ ಅಭಿಪ್ರಾಯ ಅಸ್ತ್ರವಾಗಿಟ್ಟುಕೊಂಡು ಈಗ ಎಜಿ ಶಶಿಕಿರಣ್ ಶೆಟ್ಟಿ ಅಭಿಪ್ರಾಯ ಸಲ್ಲಿಸಿದ್ದಾರೆ. ಕೋರ್ಟ್ ನಲ್ಲಿ ವಿಚಾರಣೆ ಬಾಕಿ ಇರುವ ಹಿನ್ನಲೆಯಲ್ಲಿ ರಿಲೀಫ್ ಪಡೆಯುವ ಪ್ರಯತ್ನಕ್ಕೆ ಡಿ.ಕೆ. ಶಿವಕುಮಾರ್ ಮುಂದಾಗಿದ್ದಾರೆ.
ಆದರೆ, ಸಿಬಿಐ ವಿಚಾರಣೆ ರದ್ದು ಅಥವಾ ತಡೆ ಹಿಡಿಯಲು ಸಾಧ್ಯವಿಲ್ಲ. ಕೇವಲ ಸಿಬಿಐಗೆ ತನಿಖೆಗೆ ನಡೆಸಲು ನೀಡಿರುವ ಅನುಮತಿ ಮಾತ್ರ ವಾಪಸ್ ಪಡೆಯುವ ಸಾಧ್ಯತೆ ಇದೆ. ಬಳಿಕ ಈ ಕೇಸನ್ನು ರಾಜ್ಯ ತನಿಖಾ ಸಂಸ್ಥೆಗೆ ನೀಡಿ ಮುಂದುವರಿಸಲಾಗುತ್ತದೆ. ಕೆಲ ದಿನಗಳ ಹಿಂದೆ ಈ ಅಂಶವನ್ನು ಕೆಪಿಸಿಸಿ ಕಚೇರಿಯಲ್ಲಿ ಡಿ.ಕೆ. ಶಿವಕುಮಾರ್ ಪ್ರಸ್ತಾಪ ಮಾಡಿದ್ದರು.
ಪ್ರಕರಣ ಹಿಂಪಡೆಯುವ ಅಧಿಕಾರ ಕ್ಯಾಬಿನೆಟ್ಗೆ ಇದೆಯಾ?
ಈಗ ಸಚಿವ ಸಂಪುಟ ಸಭೆಗೆ ಈ ಪ್ರಕರಣವನ್ನು ವಾಪಸ್ ಪಡೆದುಕೊಳ್ಳುವ ಅಧಿಕಾರ ಇದೆಯಾ? ಎಂಬ ಪ್ರಶ್ನೆ ಕಾಡುತ್ತಿದೆ. ಹೋರಾಟ, ಪ್ರತಿಭಟನೆ ಪ್ರಕರಣಗಳನ್ನು ವಾಪಸ್ ಪಡೆದುಕೊಳ್ಳುವ ಅಧಿಕಾರವನ್ನು ಸಚಿವ ಸಂಪುಟಕ್ಕೆ ನೀಡಲಾಗಿದೆ. ಆದರೆ, ಈಗಾಗಲೇ ಕೋರ್ಟ್ನಲ್ಲಿ ಇರುವ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿರುವುದರಿಂದ ಹಾಗೂ ಪ್ರಕರಣದ ವಿಚಾರಣೆ ನಡೆಯುವಾಗ ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಅಂತಹ ನಿರ್ಧಾರ ಕೈಗೊಂಡರೆ ಕೋರ್ಟ್ ಸರ್ಕಾರಕ್ಕೆ ಎಚ್ಚರಿಕೆ ಕೊಡುವ ಸಾಧ್ಯತೆ ಇದೆ. ಸರ್ಕಾರ ತಮ್ಮ ವ್ಯಾಪ್ತಿ ಮೀರಿದೆ ಎಂದು ಸೂಚಿಸುವ ಸಾಧ್ಯತೆ ಇದೆ.
ವಾಪಸ್ ಪಡೆದುಕೊಂಡರೆ ಡಿಕೆಶಿಗೆ ಮತ್ತೇನು ಸಂಕಷ್ಟ?
ಒಂದು ವೇಳೆ ಸಚಿವ ಸಂಪುಟದಲ್ಲಿ ಈ ಪ್ರಕರಣವನ್ನು ಸಿಬಿಐನಿಂದ ವಾಪಸ್ ಪಡೆಯುವ ನಿರ್ಧಾರ ಮಾಡಿದರೆ ಇದಕ್ಕೆ ಸಿಬಿಐ ಪ್ರಬಲ ವಿರೋಧವನ್ನು ಒಡ್ಡಲಿದೆ. ಈ ನಡುವೆ ಷರತ್ತು ಬದ್ಧ ಜಾಮೀನು ಪಡೆದು ಹೊರಗೆ ಇರುವ ಡಿ.ಕೆ. ಶಿವಕುಮಾರ್ ವಿರುದ್ಧ ಸಿಬಿಐ ಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ.
ಇದನ್ನೂ ಓದಿ: Karnataka Weather : ಬೆಂಗಳೂರಲ್ಲಿ ಸಂಜೆಗೆ ಜಿಟಿ ಜಿಟಿ ಮಳೆ; ಮಲೆನಾಡಲ್ಲಿ ಭಾರಿ ವರ್ಷಧಾರೆ
ರಾಜಕೀಯ ಪ್ರಭಾವ ಬೀರಿ ಕೇಸ್ ವಾಪಸ್ ಪಡೆದುಕೊಂಡಿದ್ದಾರೆ. ಸರ್ಕಾರದ ನಡೆ ಸರಿಯಲ್ಲ ಎಂದು ಅರ್ಜಿ ಸಲ್ಲಿಸಿ ವಾದ ಮಂಡಿಸುವ ಸಾಧ್ಯತೆ ದಟ್ಟವಾಗಿದೆ. ಅಲ್ಲದೆ, ಷರತ್ತು ಉಲ್ಲಂಘನೆಯ ಕಾರಣ ಹೇಳಿ ಜಾಮೀನು ರದ್ದು ಮಾಡುವಂತೆ ವಾದ ಮಾಡಬಹುದು. ಅಲ್ಲದೇ ಸಿಬಿಐ ತನಿಖೆ ಇನ್ನಷ್ಟು ಕಠಿಣ ಆಗಬಹುದು. ಒಂದು ವೇಳೆ ರಾಜಕೀಯ (ಕೇಂದ್ರ ಸರ್ಕಾರ) ಬಳಕೆಯಾದರೆ ಡಿ.ಕೆ. ಶಿವಕುಮಾರ್ ಮತ್ತೊಮ್ಮೆ ಜೈಲು ಸೇರಬಹುದು.