ಕೋಲಾರ: ಕೋಲಾರ ಬಿಜೆಪಿ ಸಂಸದ ಮುನಿಸ್ವಾಮಿ ಬೊಟ್ಟಿನ ವಿಷಯಕ್ಕಾಗಿ ಮಹಿಳೆ ವಿರುದ್ಧ ರೇಗಾಡಿದ ಪ್ರಸಂಗವು ಮಹಿಳಾ ದಿನಾಚರಣೆಯಂದೇ ನಡೆದಿರುವುದು ಬೆಳಕಿಗೆ ಬಂದಿದೆ. ನಗರದ ಚೆನ್ನಯ್ಯ ರಂಗಮಂದಿರದಲ್ಲಿ ಮಹಿಳಾ ದಿನಾಚರಣೆ ಪ್ರಯುಕ್ತವಾಗಿ ಮಳಿಗೆ ಇಟ್ಟಿದ್ದ ಮಹಿಳೆಯೊಬ್ಬರ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ ಸಂಸದರು, ಬೊಟ್ಟು ಇಡದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ, ಗಂಡ ಬದುಕಿದ್ದರೂ ಯಾಕೆ ಬೊಟ್ಟನ್ನು ಇಟ್ಟಿಲ್ಲ ಎಂದು ಹೇಳಿದ್ದಲ್ಲದೆ, ಇನ್ನೊಬ್ಬಳಿಂದ ಬೊಟ್ಟು ಕೊಡಿಸಿ ಇಟ್ಟುಕೊಳ್ಳುವಂತೆ ಮಾಡಿದ್ದಾರೆ. ಸಂಸದರ ಈ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಕಾಂಗ್ರೆಸ್ ಸಹ ಟ್ವೀಟ್ ಮಾಡಿ ಕಿಡಿಕಾರಿದೆ.
ಚೆನ್ನಯ್ಯ ರಂಗಮಂದಿರದಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಸದ ಮುನಿಸ್ವಾಮಿ, ಬಳಿಕ ಅಲ್ಲಿ ಹಾಕಲಾಗಿದ್ದ ಮಳಿಗೆಗಳಿಗೆ ಭೇಟಿ ನೀಡುತ್ತಾ ಬಂದಿದ್ದಾರೆ. ಅಲ್ಲಿಯೇ ಬಟ್ಟೆ ಮಳಿಗೆಯೊಂದರ ಬಳಿ ಬಂದಾಗ ಅದರಲ್ಲಿದ್ದ ಮುಳಬಾಗಿಲು ಪಟ್ಟಣದ ಮತ್ಯಾಲಪೇಟೆ ನಿವಾಸಿ ಸುಜಾತ ಎಂಬುವವರು ಬೊಟ್ಟನ್ನು ಇಟ್ಟುಕೊಂಡಿರಲಿಲ್ಲ. ಇದನ್ನು ಗಮನಿಸಿದ ಮುನಿಸ್ವಾಮಿ, “ಏನಮ್ಮ ನಿನ್ನ ಹೆಸರು? ಎಂದು ಕೇಳಿದ್ದಾರೆ. ಅದಕ್ಕೆ ಆಕೆ ಸುಜಾತಾ ಎಂದು ಹೇಳಿದ್ದಾರೆ. ಆಗ ಏಕಾಏಕಿ ಸಿಟ್ಟಾದ ಮುನಿಸ್ವಾಮಿ, ಹಣೆಗೆ ಯಾಕೆ ಬೊಟ್ಟು ಇಟ್ಟಿಲ್ಲ? ಕಾಸು ಕೊಟ್ಟು ಬಲವಂತವಾಗಿ ಮತಾಂತರ ಮಾಡಿದ್ದಾರಾ ನಿನಗೇ?” ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: 9 ರಾಜ್ಯಗಳಲ್ಲಿ ಬಿಜೆಪಿಯಿಂದ 9 ಸುದ್ದಿಗೋಷ್ಠಿ, ಪ್ರತಿಪಕ್ಷಗಳಿಗೆ ತಿರುಗೇಟು ನೀಡಲು ರೂಪಿಸಿದ ಯೋಜನೆ ಹೇಗಿದೆ?
ಅಷ್ಟಕ್ಕೇ ಸುಮ್ಮನಾಗದ ಸಂಸದರು ಅಂಗಡಿಯ ಹೆಸರನ್ನು ನೋಡಿದ್ದಾರೆ. ಮತ್ತೆ ವಾಗ್ದಾಳಿ ಮುಂದುವರಿಸಿದ ಮುನಿಸ್ವಾಮಿ, “ವೈಷ್ಣವಿ ಎಂದು ಅಂಗಡಿಗೆ ಹೆಸರನ್ನು ಇಟ್ಟುಕೊಂಡಿದ್ದೀಯ. ಸುಜಾತ ಎಂಬ ಹೆಸರೂ ಇದೆ. ಯಾರೋ ಕಾಸು ಕೊಡುತ್ತಾರೆ ಅಂತ ಬೊಟ್ಟು ಇಟ್ಟುಕೊಂಡಿಲ್ಲವಾ? ಹಣದ ಆಸೆಗೆ ಮತಾಂತರ ಆಗಿದ್ದೀಯಾ? ಗಂಡ ಬದುಕಿದ್ದಾನೆ ತಾನೇ? ಕಾಮನ್ ಸೆನ್ಸ್ ಇಲ್ಲವಾ ನಿನಗೆ? ಬೊಟ್ಟು ಇಟ್ಟುಕೋ ಮೊದಲು ಎಂದು ಹೇಳಿದ್ದಲ್ಲದೆ, ಆಕೆ ಪಕ್ಕದಲ್ಲಿದ್ದ ಮಹಿಳೆಯತ್ತ ತಿರುಗಿ, ಏ ಆ ಎಮ್ಮನಿಗೆ ನಿನ್ನ ಬಳಿ ಇರುವ ಬೊಟ್ಟು ಕೊಡಮ್ಮಾ ಎಂದು ಹೇಳಿದ್ದಾರೆ.
ಈ ವೇಳೆ ಜತೆಯಲ್ಲಿದ್ದ ಶಾಸಕ ಶ್ರೀನಿವಾಸಗೌಡ ಬೇರೆ ಕಾರಣ ಇರಬಹುದು, ಬಿಡಪ್ಪ ಎಂದರೂ ಬಿಡದೆ ಮುನಿಸ್ವಾಮಿ ರೇಗಾಟ ನಡೆಸಿದ್ದಾರೆ. ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಕೂಡ ಸಮಾಧಾನಪಡಿಸಲು ಯತ್ನ ಮಾಡಿದರೂ ಕೇಳದೆ ಹರಿಹಾಯ್ದಿದ್ದಾರೆ. ಇದೀಗ ಸಾರ್ವಜನಿಕವಾಗಿ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಇದನ್ನೂ ಓದಿ: ಮಹಿಳಾ ಮೀಸಲಿಗೆ ಆಗ್ರಹಿಸಿ ಮಾ.10ರಂದು ದಿಲ್ಲಿಯಲ್ಲಿ ಉಪವಾಸ ಸತ್ಯಾಗ್ರಹ: ಕೆ. ಕವಿತಾ
ಕಾಂಗ್ರೆಸ್ ತೀವ್ರ ಖಂಡನೆ
ಈ ಬಗ್ಗೆ ಕಾಂಗ್ರೆಸ್ ಟ್ವೀಟ್ ಮೂಲಕ ಖಂಡಿಸಿದೆ. “ಹಣೆಗೆ ಕುಂಕುಮ ಯಾಕಿಟ್ಟಿಲ್ಲ, ಗಂಡ ಬದುಕಿದ್ದಾನೆ ತಾನೇ” ಎಂದು ಬಿಜೆಪಿ ಸಂಸದ ಮುನಿಸ್ವಾಮಿ ಅವರು ಮಹಿಳೆಗೆ ಅವಮಾನಿಸಿದ್ದು ಬಿಜೆಪಿಯ ಮಹಿಳಾ ವಿರೋಧಿ ನೀತಿಗೆ ಸಾಕ್ಷಿಯಾಗಿದೆ. ಮಹಿಳೆಯರ ಸ್ವಾತಂತ್ರ್ಯ ಕಸಿಯಲು, ಅವರ ಉಡುಗೆ, ತೊಡುಗೆ ನಿರ್ಧರಿಸಲು ಬಿಜೆಪಿಗೆ ಯಾವ ಹಕ್ಕಿದೆ? ಮಹಿಳಾ ದಿನದಂದೇ ಮಹಿಳೆಗೆ ಅವಮಾನಿಸಿ ವಿಕೃತಿ ಮೆರೆದಿದೆ ಎಂದು ಬಿಜೆಪಿಯನ್ನು ಪ್ರಶ್ನೆ ಮಾಡಿದೆ.