ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹಿರೇಕೆರೆಯಲ್ಲಿ ಮಹಿಳೆ ಮತ್ತು ಇಬ್ಬರು ಮಕ್ಕಳು ಮುಳುಗಿ (Drowned in pond) ಸಾವನ್ನಪ್ಪಿದ್ದಾರೆ. ಇದು ಒಂದು ಕೊಲೆ ಎಂದು ಪ್ರಾಥಮಿಕವಾಗಿ ನಂಬಲಾಗಿದ್ದು, ಮಹಿಳೆಯ ಪತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಿರೇಹಳ್ಳಿಯ ಮಹಾಂತೇಶ ಎಂಬಾತನ ಪತ್ನಿ ದುರುಗಮ್ಮ(25), ಮಗ ಅಜ್ಜಯ್ಯ(6), ಮಗಳು ಸೇವಂತಿ(4) ಮೃತಪಟ್ಟವರು. ಇವರು ಬೋಸೇದೇವರಹಟ್ಟಿ ಜಾತ್ರೆಗಾಗಿ ಬಂದಿದ್ದರು. ಬೋಸೇದೇವರಹಟ್ಟಿಯಲ್ಲಿ ಸಂಬಂಧಿಕರ ಮನೆ ಇದ್ದು, ಅಲ್ಲಿ ಉಳಿದಿದ್ದರು.
ನಾಯಕನಹಟ್ಟಿಯ ಹಿರೇಕೆರೆಯಲ್ಲಿ ಗಂಗಾಪೂಜೆ ಬಹಳ ವಿಶೇಷವಾಗಿದ್ದು, ಅಲ್ಲಿ ಗಂಗಾ ಪೂಜೆ ಮಾಡಲೆಂದು ಪತ್ನಿ, ಪತ್ನಿ ಮತ್ತು ಮಕ್ಕಳು ಬಂದಿದ್ದರು. ಈ ವೇಳೆ ಮಕ್ಕಳು ಮತ್ತು ತಾಯಿ ನೀರಿನಲ್ಲಿ ಮುಳುಗಿ ಮೃತಪಟ್ಟಿದಾರೆ. ಮಹಾಂತೇಶನ ಪ್ರಕಾರ, ಪತ್ನಿ ಮತ್ತು ಮಕ್ಕಳು ನೀರಿಗೆ ಇಳಿದಾಗ ಮುಳುಗಿ ಸಾವನ್ನಪ್ಪಿದ್ದಾರೆ. ಆದರೆ, ಪೊಲೀಸರಿಗೆ ಮಾತ್ರ ಮಹಾಂತೇಶನೇ ಪತ್ನಿ ಮತ್ತು ಮಕ್ಕಳನ್ನು ಕೆರೆನೀರಿಗೆ ತಳ್ಳಿ ಕೊಲೆ ಮಾಡಿದ್ದಾನೆ ಎಂಬ ಸಂಶಯವಿದೆ. ಹೀಗಾಗಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಹಿರೇಕೆರೆಯಲ್ಲಿ ಶವಗಳಿಗಾಗಿ ಶೋಧ ಕಾರ್ಯ ನಡೆಸಿ ಹೊರತೆಗೆದಿದ್ದಾರೆ. ನಾಯಕನಹಟ್ಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ | Suicide case | ಕೌಟುಂಬಿಕ ಕಲಹದ ಯಾತನೆ: ಇಬ್ಬರು ಪುಟ್ಟ ಹೆಣ್ಣು ಮಕ್ಕಳೊಂದಿಗೆ ಕಾಲುವೆಗೆ ಹಾರಿ ತಾಯಿ ಆತ್ಮಹತ್ಯೆ