Site icon Vistara News

Karnataka Election 2023: ಕೊರಟಗೆರೆಯಲ್ಲಿ ಪರಮೇಶ್ವರ್ ನಾಮಪತ್ರ ಸಲ್ಲಿಕೆ ವೇಳೆ ಕಲ್ಲೆಸೆತ; ಕುಸಿದು ಬಿದ್ದ ಮಹಿಳಾ ಪೇದೆ

Woman constable injured in stone-pelting while Dr G pParameshwar filing nomination papers in Koratagere

Woman constable injured in stone-pelting while Dr G pParameshwar filing nomination papers in Koratagere

ತುಮಕೂರು: ಕೊರಟಗೆರೆಯಲ್ಲಿ ಕಾಂಗ್ರೆಸ್‌ ಶಾಸಕ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರು ಬುಧವಾರ ನಾಮಪತ್ರ ಸಲ್ಲಿಸುವ (Karnataka Election 2023) ವೇಳೆ ಕಿಡಿಗೇಡಿಯೊಬ್ಬ ಕಲ್ಲೆಸೆದಿದ್ದು, ಮಹಿಳಾ ಪೇದೆಗೆ ಗಂಭೀರ ಗಾಯವಾಗಿದೆ. ತಾಲೂಕು ಕಚೇರಿಯೊಳಗೆ ಪರಮೇಶ್ವರ್ ಹೋಗುತ್ತಿದ್ದಾಗ ಗುಂಪಿನಿಂದ ಕಿಡಿಗೇಡಿ ಕಲ್ಲೆಸೆದಿದ್ದಾನೆ. ಈ ವೇಳೆ ಗೇಟ್‌ ಒಳಗೆ ನಿಂತಿದ್ದ ಮಹಿಳಾ ಪೇದೆಗೆ ಪೆಟ್ಟು ಬಿದ್ದು, ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪರಮೇಶ್ವರ್‌ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ತಾಲೂಕು ಕಚೇರಿ ಬಳಿ ಸಾವಿರಾರು ಬೆಂಬಲಿಗರು ಆಗಮಿಸಿದ್ದರು. ಈ ವೇಳೆ ಗುಂಪಿನಲ್ಲಿದ್ದ ಒಬ್ಬಾತ ಕಲ್ಲೆಸೆದಿದ್ದರಿಂದ ಪೇದೆ ಗಾಯಗೊಂಡಿದ್ದಾರೆ. ಕೂಡಲೇ ಆಕೆಗೆ ಆರೈಕೆ ಮಾಡಿ ಪೊಲೀಸ್ ಜೀಪ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಘಟನೆಗೆ ಪೊಲೀಸ್‌ ಭದ್ರತಾ ವೈಫಲ್ಯ ಕಾರಣ ಎಂದು ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.

ನಾಮಪತ್ರ ಸಲ್ಲಿಸಿದ ಬಳಿಕ ಬೃಹತ್ ಮೆರವಣಿಗೆ

ಕೊರಟಗೆರೆಯ ಕಟ್ಟೆ ಗಣಪತಿ ಮತ್ತು ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿದ ಬಳಿಕ, ತಾಲೂಕು ಕಚೇರಿಗೆ ಸಾವಿರಾರು ಬೆಂಬಲಿಗರು, ಕಾರ್ಯಕರ್ತರೊಂದಿಗೆ ತೆರಳಿ ಕಾಂಗ್ರೆಸ್‌ ನಾಯಕ ಡಾ.ಜಿ.ಪರಮೇಶ್ವರ್‌ ಅವರು ನಾಮಪತ್ರ ಸಲ್ಲಿಸಿದರು. ಬಳಿಕ ಬೃಹತ್ ಮೆರವಣಿಗೆ ಮಾಡುವ ಮೂಲಕ ಶಕ್ತಿ ಪ್ರದರ್ಶನ ಮಾಡಿದರು.

ನಂತರ ಮಾತನಾಡಿದ ಪರಮೇಶ್ವರ್‌, ಸಂವಿಧಾನದ ಚೌಕಟ್ಟಿನಲ್ಲಿ ಚುನಾವಣೆ ನಡೆಸಲು ಒಪ್ಪಿಕೊಂಡಿದ್ದೇವೆ. ಅದರನ್ವಯ ನಾನು ನಾಮಪತ್ರ ಸಲ್ಲಿಸಿದ್ದೇನೆ. ಈ ಚುನಾವಣೆಯಲ್ಲಿ ನಾನು ಗೆದ್ದೇ ಗೆಲ್ಲುತ್ತೇನೆ ಎನ್ನುವ ಆತ್ಮವಿಶ್ವಾಸದಿಂದ ನಾಮಪತ್ರ ಸಲ್ಲಿಸಿದ್ದೇನೆ‌ ಎಂದು ತಿಳಿಸಿದರು.

ಇದನ್ನೂ ಓದಿ | Karnataka Election 2023 : ಅಶೋಕ್‌ ವಿರುದ್ಧ ಸುರೇಶ್‌ ಸ್ಪರ್ಧೆ; ಕುತೂಹಲ ಉಳಿಸಿಕೊಂಡ ಕಾಂಗ್ರೆಸ್‌!

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಎಲ್ಲ ಸೂಚನೆ ಇದೆ. ಮೇ 10ರಂದು ನನಗೆ ಮತ ಕೊಡಿ ಎಂದು ಕೊರಟಗೆರೆ ಕ್ಷೇತ್ರದ ಜನರಲ್ಲಿ ಮನವಿ ಮಾಡುತ್ತೇನೆ. ನಾನು ಉನ್ನತ ಹುದ್ದೆಗೆ ಏರಲಿ ಎಂದು ಅಭಿಮಾನಿಗಳು ಆಸೆ ಇಟ್ಟುಕೊಂಡಿರುತ್ತಾರೆ. ಅದು ಸಹಜ, ಹೊಸದೇನಲ್ಲ. ಈ ಕ್ಷೇತ್ರದಿಂದ ನಾನು ಗೆಲ್ಲುತ್ತೇನೆ ಎಂಬ ಅಚಲ ವಿಶ್ವಾಸ ಇದೆ ಎಂದು ಹೇಳಿದರು.

ಕಾಂಗ್ರೆಸ್‌ಗೆ ವಲಸೆ ಬರುವವರ ಸಂಖ್ಯೆ ಹೆಚ್ಚಾಗಿರುವುದು ಶುಭ ಸೂಚನೆ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂಬ ಸೂಚನೆ ಇರುವುದರಿಂದ ಪಕ್ಷಕ್ಕೆ ಬರುತ್ತಿದ್ದಾರೆ. ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿಯಂತಹ ಹಿರಿಯ ನಾಯಕರು ಬಂದಿರುವುದು ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬುದರ ಮುನ್ಸೂಚನೆಯಾಗಿದೆ. ಇನ್ನೂ ತುಂಬಾ ಜನ ಕಾಂಗ್ರೆಸ್‌ಗೆ ಬರುವವರಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ | Karnataka Election 2023: ಬೊಮ್ಮಾಯಿ ಅವರದ್ದು ನಾಮ್‌ಕೆ ವಾಸ್ತೆ ಅಲ್ಲ, ಕಾಮ್‌ಕೆ ವಾಸ್ತೆ: ಕಿಚ್ಚ ಸುದೀಪ್‌

ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕ ರಾಮದಾಸ್ ಕೂಡ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಬಂದರೆ ಆಶ್ಚರ್ಯಪಡುವಂತಿಲ್ಲ. ಜಿಲ್ಲೆಯ ಬೇರೆ ಬೇರೆ ಪಕ್ಷದ ಮುಖಂಡರು ನನ್ನ ಸಂಪರ್ಕದಲ್ಲಿ ಇದ್ದಾರೆ. ಸಿದ್ದರಾಮಯ್ಯ ಅವರು ಕೂಡ ಕೊರಟಗೆರೆ ಕ್ಷೇತ್ರದಲ್ಲಿ ಪ್ರಚಾರಕ್ಕೆ ಬರುತ್ತಾರೆ. ಈಗ ತಾನೇ ಅವರಿಗೆ ಪೋನ್‌ನಲ್ಲೂ ಮಾತನಾಡಿ, ನಾಮಪತ್ರ ಸಲ್ಲಿಸಿದ್ದಕ್ಕೆ ಶುಭ ಹಾರೈಸಿದ್ದೇನೆ. ಅವರು ಕೂಡ ನನಗೆ ಶುಭವಾಗಲಿ ಎಂದು ಹೇಳಿರುವುದಾಗಿ ತಿಳಿಸಿದರು.

ದಲಿತ ಸಿಎಂ ಕುರಿತು ನಾನು ಪ್ರತಿಕ್ರಿಯೆ ಕೊಡಲು ಹೋಗಲ್ಲ. ನಮಗೆ ಬೇಕಾಗಿರುವುದು ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು, ಅದರ ಬಗ್ಗೆ ಪ್ರತಿಕ್ರಿಯಿಸುವುದು ನನಗೆ ಇಷ್ಟ ಇಲ್ಲ ಎಂದು ಹೇಳಿದರು. ಕಾಂಗ್ರೆಸ್ ಮುಳುಗುವ ಹಡಗು ಎಂಬ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರೇ ಹೇಳಿದ ಹಾಗೆ ಯಾರು ಮುಳುಗುತ್ತಾರೆ ಎಂಬುದು ಮೇ 13ರಂದು ಗೊತ್ತಾಗುತ್ತದೆ ಎಂದು ತಿಳಿಸಿದರು.

Exit mobile version