ಯಾದಗಿರಿ: ಜಿಲ್ಲೆಯಲ್ಲಿ ಕಲುಷಿತ ನೀರು (Contaminated Water) ಪ್ರಕರಣ ಹೆಚ್ಚುತ್ತಲೇ ಇದ್ದು, ಸಾವು-ನೋವುಗಳು ಸಂಭವಿಸುತ್ತಿವೆ. ಈಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಕಲುಷಿತ ನೀರು ಸೇವಿಸಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. 30ಕ್ಕೂ ಹೆಚ್ಚು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಹಾಪುರ ತಾಲೂಕಿನ ಹೊತಪೇಟ್ ಗ್ರಾಮದಲ್ಲಿ ಈಚೆಗೆ ಕಾಣಿಸಿಕೊಂಡಿತ್ತು. ಈಗ ಗುರುಮಿಠಕಲ್ ತಾಲೂಕಿನ ಅನಪುರ ಗ್ರಾಮದಲ್ಲಿ ಕಲುಷಿತಗೊಂಡ ನೀರು ಸೇವಿಸಿದ್ದರಿಂದ ವಾಂತಿ-ಭೇದಿ ಉಲ್ಬಣಗೊಂಡಿತ್ತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ಸೇರಿದ್ದ ಸಾವಿತ್ರಮ್ಮ (35) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಗ್ರಾಮಕ್ಕೆ ನೀರು ಪೂರೈಸುವ ಪೈಪ್‌ನಲ್ಲಿ ಚರಂಡಿ ನೀರು ಸೇರ್ಪಡೆಗೊಂಡಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಪರಿಣಾಮ ಕಲುಷಿತ ನೀರು ಸೇವನೆಯಿಂದ ಗ್ರಾಮದ ಜನರಲ್ಲಿ ವಾಂತಿ-ಭೇದಿ ಉಲ್ಬಣಗೊಂಡಿದೆ. ಮಂಗಳವಾರ (ಫೆ.೧೪) ಸುಮಾರು ೨೪ ಜನರಲ್ಲಿ ವಾಂತಿ-ಭೇದಿ ಉಲ್ಬಣಗೊಂಡಿದ್ದು, ಬುಧವಾರ (ಫೆ. ೧೫) ಮತ್ತೆ ಆರು ಜನರಲ್ಲಿ ಕಾಣಿಸಿಕೊಂಡಿದೆ.
ಈ ಹಿನ್ನೆಲೆಯಲ್ಲಿ ಸಾವಿತ್ರಮ್ಮ ಅವರನ್ನು ತೆಲಂಗಾಣದ ನಾರಾಯಣಪೇಟೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬುಧವಾರ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ 13 ಜನರನ್ನು ದಾಖಲು ಮಾಡಲಾಗಿದೆ.
ಇದನ್ನೂ ಓದಿ: Gold rate : ಬಂಗಾರ ದರದಲ್ಲಿ ಕಳೆದ ಮೂರು ದಿನಗಳಿಂದ ಇಳಿಕೆ, ಖರೀದಿದಾರರಿಗೆ ತುಸು ರಿಲೀಫ್
ತೆಲಂಗಾಣದ ನಾರಾಯಣಪೇಟೆ ಆಸ್ಪತ್ರೆಯಲ್ಲಿ 8, ಮೈಬೂಬನಗರದ ಖಾಸಗಿ ಆಸ್ಪತ್ರೆಯಲ್ಲಿ 4 ವರ್ಷದ ಬಾಲಕನನ್ನು ದಾಖಲು ಮಾಡಲಾಗಿದೆ. ಅಲ್ಲದೆ, ವೈದ್ಯರ ತಂಡವೊಂದು ಗ್ರಾಮದಲ್ಲಿಯೇ ವಾಸ್ತವ್ಯ ಹೂಡಿದ್ದು, ಅಗತ್ಯ ಕ್ರಮ ಕೈಗೊಂಡಿದೆ.