ಗದಗ: ಈಚೆಗೆ ಸಾರಿಗೆ ಬಸ್‌ನಲ್ಲಿ (KSRTC Bus) ಪ್ರಯಾಣ ಮಾಡುತ್ತಿದ್ದಾಗ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಮಹಿಳೆ ಕವಿತಾ ಬದುಕು ಅಂತ್ಯವಾಗಿದೆ. ಹಾಸಿಗೆ ಹಿಡಿದ ಪತಿ, ಮೂವರನ್ನು ಮಕ್ಕಳನ್ನು ಬಿಟ್ಟು ತಮ್ಮ ಬದುಕಿನ ಪ್ರಯಾಣವನ್ನು ಅವರು ಅಂತ್ಯಗೊಳಿಸಿದ್ದಾರೆ. ಈಗ ಆ ಕುಟುಂಬಕ್ಕೆ ದಿಕ್ಕೇ ಇಲ್ಲದಂತಾಗಿದೆ. ಅಲ್ಲದೆ, ಆಕೆಯ ತಪ್ಪಿಲ್ಲದಿದ್ದರೂ ಸುಳ್ಳು ಕೇಸನ್ನು ಹಾಕಲಾಗಿದೆ. ಹೀಗಾಗಿ ಈ ಕುಟುಂಬಕ್ಕೆ ದಿಕ್ಕೇ ಇಲ್ಲದಂತೆ ಆಗಿದೆ. ಅನಾಥ ಮಕ್ಕಳಿಗೆ ನ್ಯಾಯ ಸಿಗಬೇಕು, ಸರ್ಕಾರದಿಂದ ಸೂಕ್ತ ನ್ಯಾಯ ಸಿಗಬೇಕು ಎಂದು ಕುಟುಂಬದವರು ಆಗ್ರಹಿಸಿದ್ದಾರೆ. ಅಲ್ಲದೆ, ಶಕ್ತಿ ಯೋಜನೆಯಿಂದ (Shakti Scheme) ಬಸ್ ರಶ್ ಆಗುತ್ತಿರುವುದೇ ಇಷ್ಟೆಲ್ಲ ಅವಘಡಕ್ಕೆ ಕಾರಣ ಎಂಬುದೂ ಕುಟುಂಬದವರ ಆರೋಪವಾಗಿದೆ.
ಜುಲೈ 17 ರಂದು ಕವಿತಾ ಹೆಳವರ (36) ಬಸ್‌ನಲ್ಲಿ ಹೋಗುವಾಗ ಆಯತಪ್ಪಿ ಬಿದ್ದು ಗಾಯಗೊಂಡಿದ್ದರು. ಈ ವೇಳೆ ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. ಬಳಿಕ ಅವರನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿತ್ತು. ಪರಿಸ್ಥಿತಿ ಗಂಭೀರವಾಗಿದ್ದರಿಂದ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರ ಸಾವು ಬದುಕಿನ ನಡುವಿನ ಹೋರಾಟ ಕೊನೆಗೂ ಅಂತ್ಯವಾಗಿದೆ. ಚಿಕಿತ್ಸೆಗೆ ಸ್ಪಂದಿಸದ ಕವಿತಾ ಉಸಿರು ನಿಲ್ಲಿಸಿದ್ದಾರೆ.
ಇದನ್ನೂ ಓದಿ: Rain News: ರಾಜ್ಯದಲ್ಲಿ 3 ದಿನ ಭಾರೀ ಮಳೆ, ಕರಾವಳಿಗೆ ರೆಡ್ ಅಲರ್ಟ್
ಆಕೆಗೇನು ಹುಚ್ಚು ಹಿಡಿದಿಲ್ಲ
ತುಂಬಿ ತುಳುಕುತ್ತಿದ್ದ ಬಸ್‌ನಲ್ಲಿ ನೂಕಾಡಿದ್ದರಿಂದ ಬಿದ್ದು ಮಹಿಳೆ ಮೃತಪಟ್ಟಿದ್ದಾರೆ. ಶಕ್ತಿ ಯೋಜನೆಯಿಂದ ಈಗೀಗ ಬಸ್‌ಗಳು ಸಖತ್ ರಶ್ ಆಗುತ್ತಿದ್ದು, ಇದರಿಂದ ಕವಿತಾ ಮೃತಪಟ್ಟಿದ್ದಾರೆ. ಚಲಿಸುವ ಬಸ್‌ನಿಂದ ಜಿಗಿಯಲು ಆಕೆಗೇನು ಹುಚ್ಚು ಹಿಡಿದಿಲ್ಲ. ಬದಲಾಗಿ ನೂಕಾಟದಿಂದ ಆಕೆ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಆದರೆ, ಕಂಡಕ್ಟರ್ ಮತ್ತು ಡ್ರೈವರ್ ತಮ್ಮ ರಕ್ಷಣೆಗಾಗಿ ಆಕೆಯೇ ಹಾರಿದ್ದಾಳೆ ಎಂಬ ರೀತಿಯಲ್ಲಿ ಸುಳ್ಳು ಹೇಳಿಕೆ ಕೊಟ್ಟಿದ್ದಾರೆ. ಪ್ರಕರಣವನ್ನು ತಿರುಚಲು ಯತ್ನ ನಡೆದಿದೆ. ಪೊಲೀಸರು ಸಹ ನಮ್ಮ ಹೇಳಿಕೆಯ ಮೇಲೆ ಕೇಸ್ ದಾಖಲಿಸಿಲ್ಲ. ಯಾರೋ ಬೇರೆಯವರನ್ನು ಕರೆದುಕೊಂಡು ಹೋಗಿ ಕೇಸ್ ದಾಖಲಿಸಿದ್ದಾರೆ. ಕೇಸ್ ದಾಖಲಿಸಿದ ಬಳಿಕ ನನ್ನ ಸಹಿ ಮಾಡಿಸಿದ್ದಾರೆ. ನಾನು ತುರಾತುರಿಯಲ್ಲಿ ಸಹಿ ಮಾಡಿ ಆಸ್ಪತ್ರೆಗೆ ಹೋದೆ ಎಂದು ಮೃತ ಮಹಿಳೆ ಕವಿತಾ ಅವರ ಮೈದುನ ಜಗದೀಶ್ ಹೆಳವರ ಆರೋಪ ಮಾಡಿದ್ದಾರೆ.
ಗದಗ ತಾಲೂಕಿನ ಮಲ್ಲಸಮುದ್ರ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಇವರು ವಾಸವಾಗಿದ್ದು, ಕುಟುಂಬ ಈಗ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಕಾರಣ, ಕವಿತಾ ಅವರ ಪತಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇವರಿಗೆ ಮೂವರು ಮಕ್ಕಳಿದ್ದು, ಈಗ ಅನಾಥವಾದಂತೆ ಆಗಿದೆ. ಅವರನ್ನು ಯಾರು ಸಲಹುತ್ತಾರೆ. ಎಲ್ಲರ ಜವಾಬ್ದಾರಿಯನ್ನು ಕವಿತಾ ನಿಭಾಯಿಸುತ್ತಿದ್ದರು. ಆದರೆ, ಈಗ ಈ ಕುಟುಂಬಕ್ಕೆ ಯಾರು ದಿಕ್ಕು? ಎಂದು ಕವಿತಾ ಅತ್ತೆ ಕಣ್ಣೀರು ಹಾಕುತ್ತಿದ್ದಾರೆ.
ಇದನ್ನೂ ಓದಿ: Rain News : ಬೀದರ್‌ನಲ್ಲೂ ಭಾರಿ ಮಳೆ; ಉಕ್ಕಿಹರಿದ ಹಳ್ಳದಲ್ಲಿ ಕೊಚ್ಚಿ ಹೋದ ಯುವಕ
ಈ ಸಾವಿಗೆ ನ್ಯಾಯ ಸಿಗಬೇಕು. ಕವಿತಾ ನಿಧನದಿಂದ ಆ ಕುಟುಂಬಕ್ಕೆ ಈಗ ದಿಕ್ಕೇ ಇಲ್ಲವಾಗಿದೆ. ಈಗ ತಾಯಿ ಇಲ್ಲದೆ ಅನಾಥವಾಗಿರುವ ಮಕ್ಕಳಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಒತ್ತಾಯ ಮಾಡಿದ್ದಾರೆ.