ಹುಬ್ಬಳ್ಳಿ: ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿಯಾಗಿ ಯುವತಿ ಮೃತಪಟ್ಟಿರುವ ಘಟನೆ (Bike Accident) ನಗರದ ಅಮರಗೋಳದ ಬಳಿ ನಡೆದಿದೆ. ನವನಗರ ಕಡೆಯಿಂದ ಹುಬ್ಬಳ್ಳಿಯತ್ತ ದ್ವಿಚಕ್ರ ವಾಹನದಲ್ಲಿ ಯುವತಿ ಬರುತ್ತಿದ್ದಾಗ ಅತಿವೇಗವಾಗಿ ಬಂದ ಟಿಪ್ಪರ್ ಹಿಂಬದಿಯಿಂದ ಗುದ್ದಿದೆ. ಈ ವೇಳೆ ಬೈಕ್ ಹಿಂಬದಿ ಕುಳಿತಿದ್ದ ಗಂಗಾ ಎಂಬ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದ ಬಳಿಕ ಟಿಪ್ಪರ್ ಚಾಲಕ ವಾಹನದ ಸಮೇತ ಪರಾರಿಯಾಗಿದ್ದಾನೆ. ಬೈಕ್‌ನಲ್ಲಿ ಮೂವರು ಸವಾರಿ ಮಾಡುತ್ತಿದ್ದು, ಅದೃಷ್ಟ ವಶಾತ್ ಇಬ್ಬರು ಅಪಾಯದಿಂದ ಪಾರಾಗಿದ್ದಾರೆ. ಅಪಘಾತದ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಹುಬ್ಬಳ್ಳಿಯ ಉತ್ತರ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಟಿಪ್ಪರ್ ಚಾಲಕನ ಪತ್ತೆಗೆ ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ | Suicide case: ನೆರೆಮನೆಯ ಮಹಿಳೆ ಜತೆಗಿನ ಅಕ್ರಮ ಸಂಬಂಧ ಬಹಿರಂಗ; ಮರ್ಯಾದೆಗೆ ಅಂಜಿ ನೇಣು ಬಿಗಿದುಕೊಂಡ ವಿವಾಹಿತ
ಕರೆಂಟ್ ಶಾಕ್‌ನಿಂದ ಲೈನ್‌ಮ್ಯಾನ್‌ಗೆ ಬೆಂಕಿ; ಗಂಭೀರ ಗಾಯ
ಹಾಸನ: ಜಿಲ್ಲೆಯ ಅರಕಲಗೂಡು ತಾಲೂಕಿನ ಬೆಳವಾಡಿ ಗ್ರಾಮದಲ್ಲಿ ಟ್ರಾನ್ಸ್‌ಫಾರ್ಮರ್ ಬದಲಾವಣೆ ವೇಳೆ ವಿದ್ಯುತ್ ಶಾಕ್ ತಗುಲಿ ಬೆಂಕಿ ಹೊತ್ತಿಕೊಂಡಿದ್ದರಿಂದ ಲೈನ್‌ಮ್ಯಾನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ವಿದ್ಯುತ್ ಶಾಕ್‌ನಿಂದ ಕಂಬದ ಮೇಲೆ ನರಳಾಡುತ್ತಿದ್ದ ಲೈನ್‌ಮ್ಯಾನ್‌ನನ್ನು ಸಿಬ್ಬಂದಿ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕುಪ್ಪೆ ಗ್ರಾಮದ ಸುನೀಲ್ (28) ಗಾಯಾಳುವಾಗಿದ್ದು, ಹಾಸನದ ಜಿಲ್ಲಾಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಅವಘಡದಲ್ಲಿ ಲೈನ್‌ಮ್ಯಾನ್ ದೇಹದ ಭಾಗಶಃ ಭಾಗವೆಲ್ಲಾ ಸುಟ್ಟಗಾಯಗಳಾಗಿವೆ.
ಈಜಾಡಲು ಹೋಗಿದ್ದ ಇಬ್ಬರು ಕುರಿಗಾಹಿ ಯುವಕರು ನೀರಿನಲ್ಲಿ ಮುಳುಗಿ ಸಾವು
ದಾವಣಗೆರೆ: ಈಜಾಡಲು ಹೋಗಿದ್ದ ಇಬ್ಬರು ಕುರಿಗಾಹಿ ಯುವಕರು ನೀರಿನಲ್ಲಿ ಮುಳುಗಿ (Drowned in Lake) ಮೃತಪಟ್ಟ ಘಟನೆ ಜಗಳೂರು ತಾಲೂಕಿನ ಚಿಕ್ಕಮಲ್ಲನಹೊಳೆ ಗೊಲ್ಲರಹಟ್ಟಿ ಕೆರೆಯಲ್ಲಿ ನಡೆದಿದೆ.
ಅಲೂರು ಗ್ರಾಮದ ರಾಜು (19), ಚಿಕ್ಕಮಲ್ಲನಹೊಳೆ ಗ್ರಾಮದ ವಿಜಯ್ (19) ಮೃತ ಯುವಕರು. ಬೇಸಿಗೆ ರಜೆ ಇದ್ದ ಕಾರಣ ಕುರಿ ಮೇಯಿಸಲು ಕೆರೆಯ ಬಳಿ ಬಂದಿದ್ದ ಯುವಕರು, ಬಿಸಿಲು ಜಾಸ್ತಿ ಇದ್ದ ಹಿನ್ನೆಲೆಯಲ್ಲಿ ಕೆರೆಯಲ್ಲಿ ಈಜಾಡಲು ಹೋಗಿದ್ದಾರೆ.
ಇದನ್ನೂ ಓದಿ | Car Accident: ರಸ್ತೆ ಬದಿ ನಿಂತಿದ್ದ ಬೈಕ್‌ಗೆ ಕಾರು ಡಿಕ್ಕಿ; ಸವಾರ ಸಾವು; ಚೇಸ್ ಮಾಡಿ ಚಾಲಕನ ಹಿಡಿದ ಸ್ಥಳೀಯರು
ಈ ವೇಳೆ ಚೆನ್ನಾಗಿಯೇ ಈಜಾಡುತ್ತಿದ್ದ ರಾಜು ಸುಸ್ತಾಗಿ ನೀರಿನಲ್ಲಿ ಮುಳುಗಳು ಪ್ರಾರಂಭಿಸಿದ್ದಾನೆ. ಹೀಗಾಗಿ ಆತ ರಕ್ಷಣೆಗೆ ಕೂಗಿಕೊಂಡಿದ್ದಾನೆ. ಸ್ನೇಹಿತನಿಗೆ ತೊಂದರೆಯಾಗಿರುವುದನ್ನು ಗಮನಿಸಿದ ವಿಜಯ್ ಆತನನ್ನು ಕಾಪಾಡುವ ಸಂಬಂಧ ಸಮೀಪ ಹೋಗಿದ್ದಾನೆ. ಆದರೆ, ಈ ವೇಳೆ ಆತನಿಂದ ರಾಜುವಿನ ರಕ್ಷಣೆ ಸಾಧ್ಯವಾಗಲಿಲ್ಲ.
ಮೊದಲೇ ಭಯದಲ್ಲಿದ್ದ ರಾಜು, ರಕ್ಷಿಸಲು ಬಂದಿದ್ದ ವಿಜಯ್‌ನನ್ನು ಗಟ್ಟಿಯಾಗಿ ಹಿಡಿದು ಕೊಂಡಿದ್ದರಿಂದ ಆತನಿಗೂ ತಪ್ಪಿಸಿಕೊಂಡು ಬರಲಾಗದೆ, ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ವಿಷಯ ತಿಳಿದ ಸ್ಥಳೀಯರು ಸ್ಥಳಕ್ಕಾಗಮಿಸಿ ಇಬ್ಬರ ಮೃತದೇಹವನ್ನು ಹೊರಗೆ ತೆಗೆದಿದ್ದಾರೆ. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.