ಆನೇಕಲ್: ಬುಲೆಟ್ ಬೈಕ್‌ಗೆ ಟ್ರ್ಯಾಕ್ಟರ್ ಡಿಕ್ಕಿಯಾಗಿ ಮಹಿಳೆ ಮೃತಪಟ್ಟಿರುವ ಘಟನೆ ತಾಲೂಕಿನ ದೊಮ್ಮಸಂದ್ರದಲ್ಲಿ ನಡೆದಿದೆ. ಟ್ರ್ಯಾಕ್ಟರ್ ಅತಿವೇಗವಾಗಿ ಬಂದು ಡಿಕ್ಕಿ ಹೊಡೆದಿದ್ದರಿಂದ (Road Accident) ಬೈಕ್ ಹಿಂಬದಿ ಕುಳಿತಿದ್ದ ಮಹಿಳೆ ಕೆಳಗೆ ಬಿದ್ದಿದ್ದು, ಈ ವೇಳೆ ಅವರ ಮೇಲೆ ಟ್ರ್ಯಾಕ್ಟರ್ ಹರಿದಿದ್ದರಿಂದ ದುರ್ಘಟನೆ ಸಂಭವಿಸಿದೆ.
ಟ್ರಾಕ್ಟರ್ ಹರಿದು ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಆದರೆ, ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಸರ್ಜಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅನೈತಿಕ ಸಂಬಂಧ ಹಿನ್ನೆಲೆ ವ್ಯಕ್ತಿಯ ಕೊಲೆ
ಬೆಂಗಳೂರು: ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಬರ್ಬರವಾಗಿ ವ್ಯಕ್ತಿಯ ಕೊಲೆ ಮಾಡಿರುವುದು ಬಿಎಚ್‌ಎಲ್ ಲೇಔಟ್‌ನ ಕೃಷ್ಣಪ್ಪ ಗಾರ್ಡನ್ ಬಳಿ ನಡೆದಿದೆ. ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದ್ದು, ತಬ್ರೇಜ್ ಕೊಲೆಯಾದ ವ್ಯಕ್ತಿ, ಶಬ್ಬೀರ್ ಎಂಬಾತನ ಪತ್ನಿಯ ಜತೆ ತಬ್ರೇಜ್ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ. ಈ ಹಿಂದೆ ಹಲವಾರು ಬಾರಿ ರಾಜಿ ಪಂಚಾಯಿತಿ ನಡೆದಿತ್ತು. ಬುಧವಾರ ಮತ್ತೆ ಸಂಧಾನಕ್ಕೆಂದು ಕರೆದು ತಬ್ರೇಜ್‌ನ ಶಬ್ಬೀರ್ ಗ್ಯಾಂಗ್ ಕೊಂದಿದೆ ಎಂದ ಆರೋಪ ಕೇಳಿಬಂದಿದೆ.
ಇದನ್ನೂ ಓದಿ | Wheeling Stunt: ಹುಡುಗಿಯರನ್ನು ಇಂಪ್ರೆಸ್ ಮಾಡಲು ವ್ಹೀಲಿಂಗ್; ನಾಲ್ವರು ವಶಕ್ಕೆ
ಆಸ್ತಿಗಾಗಿ ಪತ್ನಿಯನ್ನೇ ಕೊಂದ ಗಂಡ; ಮುಖಕ್ಕೆ ದಿಂಬು ಇಟ್ಟು ಉಸಿರುಗಟ್ಟಿಸಿದ!
ಮಂಡ್ಯ: ಪತ್ನಿ ಮಲಗಿದ್ದ ವೇಳೆ ಮುಖಕ್ಕೆ ದಿಂಬು ಇಟ್ಟು, ಬೆಡ್ ಶೀಟ್‌ನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ ಘಟನೆ (Murder Case) ಮಂಡ್ಯದ (Mandya News) ವಿ.ವಿ. ನಗರ ಬಡಾವಣೆಯಲ್ಲಿ ಘಟನೆ (Man kills wife) ನಡೆದಿದೆ. ಎಸ್.ಶೃತಿ(32) ಕೊಲೆಯಾದ ಗೃಹಿಣಿ. ಟಿ.ಎನ್.ಸೋಮಶೇಖರ್(41) ಎಂಬಾತನೇ ಕೊಲೆ ಮಾಡಿದ ಪತಿರಾಯ.
ದಿಂಬು ಮತ್ತು ಬೆಡ್ ಶೀಟ್‌ನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ ಗಂಡ ಇದೊಂದು ಸಹಜ ಸಾವೆಂದು ಬಿಂಬಿಸಲು ಸಾಕಷ್ಟು ಪ್ರಯತ್ನಪಟ್ಟಿದ್ದ. ಆದರೆ ಆತನ ಹಿನ್ನೆಲೆ, ಆತ ನೀಡುತ್ತಿದ್ದ ಕಿರುಕುಳಗಳ ಹಿನ್ನೆಲೆಯಲ್ಲಿ ಆತನ ವಿಚಾರಣೆ ನಡೆಸಿದಾಗ ಸತ್ಯ ಹೊರಬಿದ್ದಿದೆ.
ಶ್ರುತಿಯ ಹೆಸರಿನಲ್ಲಿ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಇದೆ ಎನ್ನಲಾಗಿದೆ. ಅದರಲ್ಲಿ ಒಂದು ಭಾಗವನ್ನು ಮಾರಾಟ ಮಾಡಲು ಶ್ರುತಿ ಮುಂದಾಗಿದ್ದರು. ಆದರೆ, ಪತಿ ಸೋಮಶೇಖರ್ ಇದನ್ನು ವಿರೋಧಿಸಿದ್ದ. ಹಾಗಂತ ಅವನು ಒಳ್ಳೆಯ ಕಾರಣಕ್ಕಾಗಿ ಹೀಗೆ ಮಾಡಿದ್ದಲ್ಲ. ಅವನಿಗೆ ಇದ್ದದ್ದು ಎಲ್ಲ ಆಸ್ತಿಯನ್ನು ತನ್ನದಾಗಿಸಿಕೊಳ್ಳುವ ಉದ್ದೇಶ ಎನ್ನಲಾಗಿದೆ. ಇದೀಗ ಪತ್ನಿಯನ್ನು ಕೊಂದಾದರೂ ಸರಿ ಭೂಮಿ ಮತ್ತು ಆಸ್ತಿಯನ್ನು ಕಬಳಿಸಲು ಮುಂದಾಗಿದ್ದಾನೆ.
ಇದನ್ನೂ ಓದಿ : Murder Case: ಕಲಾಸಿಪಾಳ್ಯದಲ್ಲಿ ಕೊಲೆ; ಪತ್ನಿಗೆ ಬೇರೆ ಮದುವೆ ಮಾಡಿಸಿದವನನ್ನು ಕೊಂದು ಸುಟ್ಟು ಹಾಕಿದ
ಸೋಮಶೇಖರ್ ಆಸ್ತಿ ವಿಚಾರದಲ್ಲಿ ಜಗಳ ಮಾಡುವುದು ಹೊಸತೇನಲ್ಲ. ಹಲವು ಬಾರಿ ರಾಜೀ ಪಂಚಾಯಿತಿ ನಡೆಸಿದ್ದರು ಕಿರುಕುಳ ಮುಂದುವರಿಸಿದ್ದ. ಹೀಗಾಗಿ ಆತನ ಮೇಲೆ ಎಲ್ಲರಿಗೂ ಸಂಶಯವಿತ್ತು. ಶ್ರುತಿ ಸಾವನ್ನಪ್ಪಿದ ಬಳಿಕ ಸಂಬಂಧಿಯೊಬ್ಬರು ಪತಿಯ ಮೇಲೆ ದೂರು ನೀಡಿದ್ದರು. ಯಾವ ಕಾರಣಕ್ಕೂ ಸತ್ಯವನ್ನು ಒಪ್ಪಿಕೊಳ್ಳಲು ನಿರಾಕರಿಸಿದ ಆರೋಪಿ ಕೊನೆಗೆ ಪೊಲೀಸ್ ಟ್ರೀಟ್‌ಮೆಂಟ್‌ಗೆ ಹೆದರಿ ಉಸಿರುಗಟ್ಟಿಸಿ ಕೊಂದಿರುವುದಾಗಿ ಒಪ್ಪಿದ್ದಾನೆ. ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ