ವಿಜಯಪುರ: ಜಿಲ್ಲೆಯ ಬಬಲೇಶ್ವರ ತಾಲೂಕಿನಲ್ಲಿ ಮಹಿಳೆಯೊಬ್ಬರು ವಿಡಿಯೊ ಮೂಲಕ ಲೈವ್ ಮಾಡುತ್ತಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide case) ಮಾಡಿಕೊಂಡಿದ್ದಾರೆ. ಸುಹಾನಾ ಸೋನಾರ್ (21) ಎಂಬ ಮಹಿಳೆ ವಿಡಿಯೊದಲ್ಲಿ ಮೊದಲು ತಾನು ಎದುರಿಸುವ ಸಮಸ್ಯೆ ಮತ್ತು ಅದಕ್ಕೆ ಕಾರಣದಾದವರ ಹೆಸರನ್ನು ಹೇಳಿ ಬಿಕ್ಕಿಬಿಕ್ಕಿ ಅಳುತ್ತಲೇ ಬಳಿಕ ನೇಣು ಬಿಗಿದುಕೊಂಡಿದ್ದಾರೆ. ಈ ಲೈವ್ ಆತ್ಮಹತ್ಯೆಗೆ ಕಾರಣ ಪ್ರಿಯಕರನ ಬ್ಲ್ಯಾಕ್‌ಮೇಲ್ ಎಂದು ತಿಳಿದುಬಂದಿದೆ.
ಪ್ರಿಯಕರ ಅಲ್ತಾಫ್ ಸುಲೇಮಾನ್ ಎಂಬಾತ ಸುಹಾನಾ ಸೋನಾರ್‌ಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಎಂದು ಹೇಳಲಾಗಿದೆ. ʻʻನನ್ನೊಂದಿಗಿರುವ ಫೋಟೊವನ್ನು ನಿನ್ನ ಗಂಡನಿಗೆ ತೋರಿಸುತ್ತೇನೆʼʼ ಎಂಬ ಪ್ರಿಯಕರನ ಬೆದರಿಕೆಗೆ ಹೆದರಿ ಆಕೆ ಪ್ರಾಣ ಕಳೆದುಕೊಂಡಿದ್ದಾಳೆ. ಜತೆಗೆ ಈ ಪ್ರಕರಣದಲ್ಲಿ ರಾಜಕೀಯ ದ್ವೇಷವೂ ಸೇರಿಕೊಂಡಿದೆ.
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಉಪ್ಪಲದಿನ್ನಿ ಗ್ರಾಮದಲ್ಲಿ ನಡೆದ ಘಟನೆ ನಡೆದಿದೆ.
ಉಪ್ಪಲದಿನ್ನಿ ಗ್ರಾಮದ ಅಲ್ತಾಫ್ ಸುಲೇಮಾನ್ ಮತ್ತು ಸುಹಾನಾಗೆ ಒಂದು ವರ್ಷದ ಹಿಂದೆ ಆತ್ಮೀಯತೆ ಬೆಳೆದು ಅವರಿಬ್ಬರು ಪ್ರೀತಿಸುತ್ತಿದ್ದರು. ಸುಲೇಮಾನ್ ಸ್ವಲ್ಪ ಜಾಸ್ತಿಯೇ ಸಲುಗೆ ಬೆಳೆಸಿದ್ದ. ಈ ವಿಷಯ ಸುಹಾನಾ ಪೋಷಕರಿಗೆ ಗೊತ್ತಾಗಿ ಹಿರಿಯರ ಸಮ್ಮುಖದಲ್ಲಿ ಅಲ್ತಾಫ್‌ಗೆ ಆಕೆಯ ಸುದ್ದಿಗೆ ಬರದಂತೆ ತಾಕೀತು ಮಾಡಿದ್ದರು.
ಬಳಿಕ ಸುಹಾನಾಳನ್ನು ಹೊಕ್ಕುಂಡಿ ಗ್ರಾಮದ ಷರೀಫ್ ಸೋನಾರ್ ಜೊತೆಗೆ ಈಚೆಗೆ ಮದುವೆ ಮಾಡಿಕೊಟ್ಟಿದ್ದರು. ಈ ಮದುವೆಯಾದ ಬಳಿಕ ಸುಲೇಮಾನ್ ಆಕೆಯನ್ನು ಕಾಡಲು ಆರಂಭಿಸಿದ್ದ. ʻʻಗಂಡನನ್ನು ಬಿಟ್ಟು ಬಾ ಇಲ್ಲವಾದರೆ ನನ್ನೊಂದಿಗಿರುವ ಫೋಟೊ ನಿನ್ನ ಗಂಡನಿಗೆ ತೋರಿಸುತ್ತೇನೆʼʼ ಎಂದು ಸುಹಾನಾಳಿಗೆ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಅಲ್ತಾಫ್ ಸುಲೆಮಾನ್.
ಇದರ ಜತೆಗೆ ಸುಹಾನಾಳ ತಂದೆ ಅಸ್ಲಾಂ ಮುಲ್ಲಾ ಅವರಿಗೆ ಇದ್ದ ರಾಜಕೀಯ ದ್ವೇಷವೂ ಈ ಪ್ರಕರಣದ ಜತೆಗೆ ಬೆಸೆದುಕೊಂಡಿದೆ. ಇನ್ನೂಸ್ ಪಾರ್ಥನಳ್ಳಿ ಹಾಗೂ ದಸ್ತಗಿರಸಾಬ ಮುಳವಾಡ ಎಂಬವರ ಜತೆ ಅಸ್ಲಾಂ ಮುಲ್ಲಾ ಅವರಿಗೆ ಸಣ್ಣ ಮಟ್ಟಿಗಿನ ವೈಷಮ್ಯ ಇತ್ತು.
ದಸ್ತಗಿರಸಾಬ ಮುಳವಾಡ ಮಗಳಿಗೆ ಇತ್ತೀಚೆಗೆ ಬಾಲ್ಯ ವಿವಾಹ ಮಾಡಲು ಮುಂದಾದಾಗ ಅಧಿಕಾರಿಗಳು ತಡೆದಿದ್ದರು. ಅದಕ್ಕೆ ಅಸ್ಲಾಂ ಮುಲ್ಲಾ ಕಾರಣವೆಂದು ಅವರಿಗೆ ಸಿಟ್ಟಿತ್ತು. ಹೀಗಾಗಿ ಮುಲ್ಲಾನ ಮಗಳ ಭವಿಷ್ಯವೂ ನೆಟ್ಟಗಿರಬಾರದು ಎಂದು ಅವರು ಕಿರುಕುಳ ಕೊಡುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸುಹಾನಾ ಕಳೆದ ಏಪ್ರಿಲ್ 15ರಂದು ತನ್ನ ಬದುಕಿನಲ್ಲಿ ಬಂದ ಸುಲೇಮಾನ್, ನಂತರ ನಡುವೆ ಮದುವೆ, ಬಳಿಕ ಆತ ಬ್ಲ್ಯಾಕ್‌ಮೇಲ್ ಮಾಡುತ್ತಿರುವುದು, ಹಣಕ್ಕಾಗಿ ಒತ್ತಡ ಹಾಕುವುದು, ಇನ್ನಿಬ್ಬರು ನೀಡುತ್ತಿರುವ ಕಿರುಕುಳಗಳೆಲ್ಲವನ್ನೂ ವಿವರಿಸಿ ವಿಡಿಯೊ ಮಾಡಿದ್ದಾಳೆ. ಬಳಿಕ ವಿಡಿಯೊ ಆನ್ ಇರುವಾಗಲೇ ಆಕೆ ನೇಣು ಹಾಕಿಕೊಂಡಿದ್ದು, ಆಕೆಯ ಸಾವಿನ ಸಂಕಟವೂ ದಾಖಲಾಗಿದೆ.
ಘಟನೆಯ ಬಗ್ಗೆ ಸುಹಾನಾ ತಂದೆ ಅಸ್ಲಾಂ ಮುಲ್ಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಧಾನ ಆರೋಪಿ ಸುಲೇಮಾನ್‌ನನ್ನು ಬಂಧಿಸಲಾಗಿದೆ.
ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಕಣ್ಣೇ ಇಲ್ಲದಿದ್ದರೂ ಜಗತ್ತು ಕಣ್ ಕಣ್ ಬಿಟ್ಟು ನೋಡುವ ಉದ್ಯಮ ಸಾಮ್ರಾಜ್ಯ ಕಟ್ಟಿದ ಶ್ರೀಕಾಂತ್ ಬೊಳ್ಳ!