ಬಳ್ಳಾರಿ: ಜಿಲ್ಲೆಯ ಸಂಜೀವರಾಯನಕೋಟೆ ಗ್ರಾಮದಲ್ಲಿ ಸಿಡಿಲು ಬಡಿದು (Karnataka Rain) ರೈತ ಮಹಿಳೆ ಮೃತಪಟ್ಟಿರುವ ಘಟನೆ ಭಾನುವಾರ ಸಂಜೆ ನಡೆದಿದೆ. ಜಮೀನಿನಿಂದ ಮನೆಗೆ ವಾಪಸ್ ತೆರಳುತ್ತಿದ್ದಾಗ ಸಿಡಿಲು ಬಡಿದಿದ್ದರಿಂದ ಮಹಿಳೆ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದೊಡ್ಡ ತಿಮ್ಮಪ್ಪ ಎಂಬುವವರ ಪತ್ನಿ ಮಂಗಮ್ಮ ಮೃತ ಮಹಿಳೆ. ಗ್ರಾಮಕ್ಕೆ ತಹಸೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಜ್ಯದ ವಿವಿಧೆಡೆ ಸುರಿದ ಭಾರಿ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಬಳ್ಳಾರಿ ಜಿಲ್ಲೆಯಲ್ಲಿ ರೈತ ಮಹಿಳೆ ಸಾವು ಸೇರಿದಂತೆ ರಾಜ್ಯದಲ್ಲಿ ಭಾನುವಾರದ ಮಳೆಗೆ ನಾಲ್ವರು ಬಲಿಯಾಗಿದ್ದಾರೆ. ಬೆಂಗಳೂರಿನಲ್ಲಿ ಮಧ್ಯಾಹ್ನ ಸುರಿದ ಧಾರಾಕಾರ ಮಳೆಗೆ ನಗರದ ಕೆ.ಆರ್.ಸರ್ಕಲ್‌ನ ಅಂಡರ್‌ಪಾಸ್‌ನಲ್ಲಿ ಕಾರು ಮುಳಗಿ ಅದರಲ್ಲಿ ಚಾಲಕ ಸೇರಿ ಏಳು ಮಂದಿ ಸಿಲುಕಿದ್ದರು. ಅವರ ಪೈಕಿ ಆಂಧ್ರ ಮೂಲದ ಬಾನುರೇಖಾ ಎಂಬ ಯುವತಿ ಕೊನೆಯುಸಿರೆಳೆದಿದ್ದರು.
ಅದೇ ರೀತಿ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನಲ್ಲಿ ಮರ ಬಿದ್ದು ವೇಣುಗೋಪಾಲ್ ಎಂಬ ಸ್ಕೂಟರ್ ಸವಾರ ಮೃತಪಟ್ಟಿದ್ದರು. ಮತ್ತೊಂದೆಡೆ ಕೊಪ್ಪಳದಲ್ಲಿ ಸಿಡಿಲು ಬಡಿದು 16 ವರ್ಷದ ಶ್ರೀಕಾಂತ ದೊಡ್ಡನಗೌಡ್ರ ಮೇಟಿ ಎಂಬ ಬಾಲಕ ಮೃತಪಟ್ಟಿದ್ದ. ಈಗ ಜಿಲ್ಲೆಯಲ್ಲಿ ಮಹಿಳೆ ಸಿಡಿಲು ಬಡಿದು ಮೃತಪಟ್ಟಿದ್ದರಿಂದ ಒಂದೇ ದಿನ ಮಳೆಗೆ ನಾಲ್ವರು ಸಾವಿಗೀಡಾದಂತಾಗಿದೆ.
ಇದನ್ನೂ ಓದಿ | Karnataka Rain: ರಾಜ್ಯದಲ್ಲಿ ಅಬ್ಬರಿಸಿದ ವರ್ಷ; ಮಳೆ ಅನಾಹುತಕ್ಕೆ ಮೂವರು ಬಲಿ
ಕಾರು-ಬೈಕ್ ಡಿಕ್ಕಿಯಾಗಿ ಸವಾರ ಸಾವು
ವಿಜಯನಗರ: ಕಾರು ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ಹೊಸಪೇಟೆಯ ಅನಂತಶಯನ ಗುಡಿ ಬಳಿ ಭಾನುವಾರ ನಡೆದಿದೆ.
ಚಪ್ಪರದಳ್ಳಿಯ ಕರಿಬಸಪ್ಪ (38) ಮೃತ ಸವಾರ. ಇವರು ವೆಂಕಟಾಪುರಕ್ಕೆ ಹೋಗಿ ವಾಪಸ್ ಹೊಸಪೇಟೆ ಬೈಕ್‌ನಲ್ಲಿ ಬರುತ್ತಿದ್ದರು. ಹೊಸಪೇಟೆ ಕಡೆಯಿಂದ ಕಮಲಾಪುರದ ಕಡೆಗೆ ಹೊರಟಿದ್ದ ಕಾರು ಹಾಗೂ ಕರಿಬಸಪ್ಪ ಬೈಕ್ ನಡುವೆ ಪರಸ್ಪರ ಡಿಕ್ಕಿಯಾಗಿದ್ದರಿಂದ ಅಪಘಾತ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡಿದ್ದರಿಂದ ಸವಾರ ಮೃತಪಟ್ಟಿದ್ದಾರೆ. ಹೊಸಪೇಟೆ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.