ಮಡಿಕೇರಿ: ಏಜೆಂಟ್ ಮೂಲಕ ಕುವೈಟ್‌ಗೆ ತೆರಳಿದ್ದ ಕೊಡಗಿನ ಮೂಲದ ಮಹಿಳೆಯೊಬ್ಬರು ಅಲ್ಲಿ ಗೃಹಬಂಧನದಲ್ಲಿದ್ದು, ಚಿತ್ರ ಹಿಂಸೆ ಅನುಭವಿಸುತ್ತಿರುವುದು (Torture in kuwait) ಬೆಳಕಿಗೆ ಬಂದಿದೆ. ೩೨ ವರ್ಷದ ಈ ಮಹಿಳೆ ತಾನು ಪಡುತ್ತಿರುವ ಹಿಂಸೆಯನ್ನು ಆಡಿಯೋ ಮೂಲಕ ವಿಸ್ತಾರ ನ್ಯೂಸ್‌ಗೆ ಕಳುಹಿಸಿದ್ದಾರೆ. ಜತೆಗೆ ವಾಟ್ಸ್ ಆಪ್ ಕಾಲ್ ಮೂಲಕ ತಮ್ಮ ಜೀವಭಯವನ್ನು ತೋಡಿಕೊಂಡಿದ್ದಾರೆ. ಇದೀಗ ಈ ವಿಚಾರವನ್ನು ಜಿಲ್ಲಾಡಳಿತದ ಗಮನಕ್ಕೆ ತರಲಾಗಿದ್ದು, ಬಂಧಮುಕ್ತಿಯ ಪ್ರಯತ್ನ ಸಾಗಿದೆ.
ನಾನು ಸೇರಿದಂತೆ ಐವರು ಮಹಿಳೆಯರನ್ನು ಒಂದು ಹಾಸ್ಟೆಲ್ ಕೊಠಡಿಯಲ್ಲಿ ಕೂಡಿ ಹಾಕಲಾಗಿದ್ದು, ಯಾರನ್ನೂ ಸಂಪರ್ಕಿಸಲು ಅವಕಾಶವಿಲ್ಲ ಎಂದು ಆಕೆ ಆಡಿಯೊ ಮೂಲಕ ತಿಳಿಸಿದ್ದಾರೆ. ತಮ್ಮನ್ನು ಕೂಡಿ ಹಾಕಿರುವ ಕಟ್ಟಡದಿಂದ ಹೊರಗೆ ಕಾಣುವ ಪರಿಸರವ ಚಿತ್ರವನ್ನೂ ಕಳುಹಿಸಿದ್ದಾರೆ. ಆಕೆಯ ಮನೆಯವರು ಕೊಡಗು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದು ಜಿಲ್ಲಾಡಳಿತ ಈಗಾಗಲೇ ಕುವೈಟ್ ಭಾರತೀಯ ರಾಯಭಾರಿ ಕಚೇರಿಗೂ ಸಂಪರ್ಕಿಸಿ ಪಾರ್ವತಿಯ ಸ್ಥಿತಿಗತಿಯ ಬಗ್ಗೆ ವಿಚಾರಿಸಲು ಮನವಿ ಮಾಡಿದೆ.
ಪಾರ್ವತಿ ಅವರ ತಾಯಿ ಚಿಕ್ಕಿ ಅವರ ಮನವಿ ಸ್ವೀಕರಿಸಿದ ಜಿಲ್ಲಾಡಳಿತ ತಕ್ಷಣ ಕಾರ್ಯಪ್ರವೃತ್ತವಾಗಿದ್ದು, ಜಿಲ್ಲಾಧಿಕಾರಿ ಬಿ.ಸಿ ಸತೀಶ ಅವರ ನಿರ್ದೇಶನದ ಮೇರೆಗೆ ಪಾರ್ವತಿಯನ್ನು ಸುರಕ್ಷಿತವಾಗಿ ಕರೆತರುವ ಜವಾಬ್ದಾರಿಯನ್ನು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ಅನನ್ಯ ವಾಸುದೇವ್ ಅವರ ಹೆಗಲಿಗೆ ವಹಿಸಿದೆ.
ವಿಷಯದ ಬಗ್ಗೆ ಕುವೈಟ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಮಾಹಿತಿ ನೀಡಿರುವ ಅನನ್ಯ ವಾಸುದೇವ್ ಸಂತ್ರಸ್ತೆಯೊಂದಿಗೆ ಸಂಪರ್ಕದಲ್ಲಿದ್ದು ಧೈರ್ಯ ತುಂಬಿದ್ದಾರೆ. ಅಲ್ಲದೇ ತಾಂತ್ರಿಕ ಕ್ರಮಗಳನ್ನು ಕೈಗೊಂಡಿದ್ದು, ಸಂತ್ರಸ್ತೆಯನ್ನು ಸುರಕ್ಷಿತವಾಗಿ ಕರೆತರುವ ಪ್ರಯತ್ನದಲ್ಲಿದ್ದಾರೆ.
ಯಾರು ಈ ಮಹಿಳೆ? ಯಾವಾಗ ಅಲ್ಲಿಗೆ ಹೋಗಿದ್ದು?
ಕೊಡಗು ಜಿಲ್ಲೆ ಕುಶಾಲನಗರ ತಾಲೂಕು ನೆಲ್ಲಿಹುದಿಕೇರಿ ಗ್ರಾಮದ ಕರಡಿಗೋಡು ನಿವಾಸಿ ಚಿಕ್ಕಿ ಎಂಬುವವರ ಪುತ್ರಿ ಪಾರ್ವತಿ ಕೇರಳದ ಕಣ್ಣೂರು ಜಿಲ್ಲೆಯ ತಲಚೇರಿಯಲ್ಲಿ ಮನೆ ಕೆಲಸಕ್ಕೆ ಸೇರಿದ್ದರು. ಅಲ್ಲಿ ತಮಿಳುನಾಡು ಏಜೆಂಟ್ ಹನೀಫ್ ಮೂಲಕ ವಿದೇಶದಲ್ಲಿ ಮನೆ ಕೆಲಸ ಮಾಡಲು ಕಳೆದ ಸೆಪ್ಟೆಂಬರ್ ೩ರಂದು ಕರಡಿಗೋಡಿನಿಂದ ಹೊರಟು ಸೆಪ್ಟೆಂಬರ್ ೪ಕ್ಕೆ ಕುವೈಟ್‌ಗೆ ಬಂದಿದ್ದರು ಪಾರ್ವತಿ. ಅಲ್ಲಿ ಭಾರತದ ಏಜೆಂಟ್ ಮೂಲಕ ಕುವೈಟ್‌ನ ಶ್ರೀಲಂಕಾದ ಏಜೆಂಟ್ ಸಮೀರ್ ಎಂಬಾತನನ್ನು ಸಂಪರ್ಕಿಸಿ ಕೆಲಸಕ್ಕೆ ಸೇರಿದ್ದರು.
ಕುವೈಟ್‌ನ ಅರಬ್ ವ್ಯಕ್ತಿಯೊಬ್ಬರ ಮನೆಗೆ ಕೆಲಸಕ್ಕೆ ಸೇರಿದ ಪಾರ್ವತಿಗೆ ಅಲ್ಲಿ ನಿತ್ಯ ಕಿರುಕುಳ ನೀಡಲಾಗುತ್ತಿದೆ ಎಂದು ದೂರಲಾಗಿದೆ. ಅಲ್ಲಿ ತಮ್ಮನ್ನು ಕೀಳಾಗಿ ನಡೆಸಿಕೊಳ್ಳಲಾಗುತ್ತಿತ್ತು. ಹೀಗಾಗಿ ಕೆಲಸ ಮಾಡುವುದಿಲ್ಲ ಎಂದು ಇವರು ಹೇಳಿದ್ದಾರೆ. ಇದಕ್ಕೆ ಅರಬ್ಬಿ ಇವರ ವೀಸಾ ಮತ್ತು ಪಾಸ್‌ಪೋರ್ಟನ್ನು ಕಿತ್ತುಕೊಂಡಿದ್ದಾನೆ. ತಾನು ಏಜೆಂಟ್‌ಗೆ ನೀಡಿರುವ ಮೂರು ಲಕ್ಷ ರೂ. ಮರಳಿಸಿದರೆ ಮಾತ್ರ ಅದನ್ನು ನೀಡುತ್ತೇನೆ ಎಂದು ಆತ ಹೇಳಿದ್ದಾನಂತೆ. ಈ ನಡುವೆ ಮಾಲೀಕನ ಜತೆ ಕಿರಿಕ್ ಮಾಡಿಕೊಂಡ ಪಾರ್ವತಿಯನ್ನು ಬೇರೊಬ್ಬ ಭಾರತೀಯನ ಮನೆಗೆ ಕೆಲಸಕ್ಕೆ ಸೇರಿಸುವ ಭರವಸೆ ನೀಡಲಾಗಿದೆಯಾದರೂ ಅಲ್ಲಿಂದ ಕಳುಹಿಸಿದ್ದು ಒಂದು ಹಾಸ್ಟೆಲ್‌ಗೆ!
ಆ ಹಾಸ್ಟೆಲ್ ನಲ್ಲಿ ಈಗಾಗಲೇ ಶ್ರೀಲಂಕಾದ ನಾಲ್ವರು ಮಹಿಳೆಯರನ್ನು ಅಲ್ಲಿ ಕೂಡಿಡಲಾಗಿದೆಯೆಂದು, ಅಲ್ಲದೆ ಬುಧವಾರ ಕೊಠಡಿಯ ಮೂಲಕ ಶ್ರೀಲಂಕಾ ಮೂಲದ ಮಹಿಳೆ ತಪ್ಪಿಸಿಕೊಂಡು ಹೋದಳು ಎಂದು ಪಾರ್ವತಿ ಆತಂಕ ವ್ಯಕ್ತಪಡಿಸಿದ್ದಾರೆ.
ಈಗ ಕೂಡಿಟ್ಟಿರುವ ಕಡೆ ದಿನಕ್ಕೆ ಒಮ್ಮೆ ಮಾತ್ರ ಊಟ ನೀಡುತ್ತಿದ್ದು ಹಸಿವಿನಿಂದ ಬಳಲುವಂತಾಗಿದೆ ಎಂದು ಸಂತ್ರಸ್ಥೆ ನೋವು ತೋಡಿಕೊಂಡಿದ್ದಾರೆ. ಬೆಳಿಗ್ಗೆ ಒಂದು ಲೋಟ ಟೀ ನೀಡಿದರೆ ಬಳಿಕ ಮೂರು ಗಂಟೆಗೆ ಸ್ವಲ್ಪ ತಿನ್ನಲು ಏನಾದರು ನೀಡುತ್ತಾರೆ. ಇಲ್ಲಿಂದ ಹೊರಗೆ ಹೋಗಲು ಅನುಮತಿಯಿಲ್ಲ. ಎಲ್ಲಾ ಬಾಗಿಲುಗಳಿಗೂ ಬೀಗ ಹಾಕಲಾಗಿದೆ. ಇಲ್ಲಿಂದ ಎಲ್ಲಿಗೂ ಹೋಗದಂತ ಪರಿಸ್ಥಿತಿ ನಿರ್ಮಾಣವಾಗಿದ್ದು ಆದಷ್ಟು ಬೇಗ ಭಾರತಕ್ಕೆ ಮರಳುವಂತಾಗಲು ಸಹಾಯ ಮಾಡಿ ಎಂದು ಫೋನಿನ ಮೂಲಕ ಗೋಗರೆಯುತ್ತಿದ್ದಾರೆ.