ಬೆಂಗಳೂರು: ಇತ್ತೀಚೆಗೆ ವಿವಿಧ ಲೋನ್ ಆ್ಯಪ್‌ಗಳ (fraud loan app) ಮೂಲಕ ಆನ್ಲೈನ್ ಸಾಲ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಫೈನಾನ್ಸ್ ಸಂಸ್ಥೆ ಬಗ್ಗೆ ತಿಳಿಯದೆ ಸಿಕ್ಕ ಸಿಕ್ಕ ಆ್ಯಪ್‌ಗಳ ಮೂಲಕ ಲೋನ್ ತೆಗೆದುಕೊಳ್ಳುವವರು ಎಚ್ಚರಿಕೆ ವಹಿಸಲೇಬೇಕು. ಯಾಕೆಂದರೆ, ಆಕಸ್ಮಿಕವಾಗಿ ಲೋನ್ ಆ್ಯಪ್ ಡೌನ್‌ಲೋಡ್ ಮಾಡಿದ್ದಕ್ಕೆ ಯುವತಿಯೊಬ್ಬರಿಗೆ ಬಡ್ಡಿ ಸಮೇತ ಹಣ ಮರುಪಾವತಿ ಮಾಡುವಂತೆ ಕಿರುಕುಳ ನೀಡಿ, ಮಾರ್ಫಿಂಗ್ ಮಾಡಿದ ಆಕೆಯ ಬೆತ್ತಲೆ ಫೋಟೊಗಳನ್ನು ಕುಟುಂಬಸ್ಥರು, ಸ್ನೇಹಿತರಿಗೆ ಕಳುಹಿಸಿ ಬ್ಲ್ಯಾಕ್ ಮೇಲ್ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ಹೊರ ವಲಯದ ನಾಗವಾರ ಸಮೀಪದ ನಿವಾಸಿಯಾದ 22 ವರ್ಷದ ಯುವತಿಗೆ ಕಿರುಕುಳ (loan app harassment) ನೀಡಲಾಗಿದೆ. ಈ ಬಗ್ಗೆ ಗೋವಿಂದಪುರ ಠಾಣೆಗೆ ಯುವತಿ ದೂರು ನೀಡಿದ್ದಾಳೆ. ಖಾಸಗಿ ಕಂಪನಿಯ ಉದ್ಯೋಗಿಯಾದ ಯುವತಿ, ಇನ್‌ಸ್ಟಾಗ್ರಾಂ ಬಳಸುತ್ತಿದ್ದಾಗ ಆಕಸ್ಮಿಕವಾಗಿ ಲೋನ್ ಆ್ಯಪ್ ಡೌನ್‌ಲೋಡ್ ಆಗಿದೆ. ನಂತರ ಕೆಲ ಖದೀಮರು ಆಕೆಗೆ ಫೋನ್ ಮಾಡಿ, ನೀವು ತೆಗೆದುಕೊಂಡಿರುವ ಸಾಲವನ್ನು ಬಡ್ಡಿ ಸಮೇತ ಪಾವತಿಸಿ ಎಂದು ಒತ್ತಾಯಿಸಿದ್ದಾರೆ. ಆದರೆ, ತಾನು ಯಾವುದೇ ಲೋನ್ ತೆಗೆದುಕೊಂಡಿಲ್ಲ ಎಂದು ಯುವತಿ ಹೇಳಿದ್ದಾಳೆ. ಇದರಿಂದ ಪದೇಪದೆ ಯುವತಿಗೆ ಅಪರಿಚಿತರು ಕರೆ ಮಾಡಿ ಕಿರುಕುಳ ನೀಡಿದ್ದಾರೆ.
ಇದನ್ನೂ ಓದಿ | Self Harming : ಹಾಸನದಲ್ಲಿ ನೇಣು ಬಿಗಿದುಕೊಂಡು ದ್ವಿತೀಯ ದರ್ಜೆ ಸಹಾಯಕ ಆತ್ಮಹತ್ಯೆ
ಬೆತ್ತಲೆ ಚಿತ್ರ ಕಳುಹಿಸಿ ಬ್ಲ್ಯಾಕ್ ಮೇಲ್
ಯುವತಿ ತಾನು ಯಾವುದೇ ಲೋನ್ ತೆಗೆದುಕೊಂಡಿಲ್ಲ ಎಂದು ಹೇಳಿದರೂ ಕೇಳದ ಖದೀಮರು ಯುವತಿಗೆ ಕಿರುಕುಳ ಮುಂದುವರಿಸಿದ್ದಾರೆ. ಮಾರ್ಫಿಂಗ್ ಮಾಡಿದ ಆಕೆಯ ಬೆತ್ತಲೆ ಚಿತ್ರಗಳನ್ನು ಪಾಲಕರು ಹಾಗೂ ಸ್ನೇಹಿತರಿಗೆ ಕಳುಹಿಸಿ ಸಾಲ ಪಾವತಿಸುವಂತೆ ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ಯುವತಿಗೆ ಎಷ್ಟು ಹಣ ವಾಪಸ್ ನೀಡುವಂತೆ ಕೇಳಲಾಗಿದೆ ಎಂಬ ಬಗ್ಗೆ ತಿಳಿದುಬಂದಿಲ್ಲ.
ಇದನ್ನೂ ಓದಿ | Murder Case : ತಾಯಿಗಿತ್ತು ಅನೈತಿಕ ಸಂಬಂಧ; ಅಪ್ಪನಿಗಾಗಿ ಕೊಲೆಗಾರನಾದ ಮಗ!
ಪ್ರಕರಣದ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಲೋನ್ ಆ್ಯಪ್ ಡಿಲೀಟ್ ಮಾಡಿರುವುದಾಗಿ ಯುವತಿ ಹೇಳಿದ್ದಾಳೆ. ಆದರೆ, ಆ್ಯಪ್ ಡೌನ್‌ಲೋಡ್ ಮಾಡಿದ ವೇಳೆ ಕಾಂಟ್ಯಾಕ್ಟ್ ಲಿಸ್ಟ್, ಗ್ಯಾಲರಿ, ಮೆಸೇಜ್‌ಗಳು, ಲೊಕೇಶನ್ ಬಳಕೆಗೆ ಅನುಮತಿ ನೀಡಿ, ನಂತರ ಆ್ಯಪ್ ಡಿಲೀಟ್ ಅನ್ ಇನ್‌ಸ್ಟಾಲ್ ಮಾಡಿರಬಹುದು. ಹೀಗಾಗಿ ಆಕೆಗೆ ಕರೆಗಳು ಎಲ್ಲಿಂದ, ಯಾರಿಂದ ಬಂದಿವೆ ಎಂದು ಪರಿಶೀಲನೆ ನಡೆಸುತ್ತಿದ್ದೇವೆ. ಯುವತಿ ಲೋನ್ ಪಡೆದಿದ್ದರೋ, ಇಲ್ಲವೋ ಎಂಬ ಬಗ್ಗೆಯೂ ತನಿಖೆ ನಡೆಸುತ್ತಿದ್ದೇವೆ. ಯುವತಿಯ ಮಾರ್ಫಿಂಗ್ ಮಾಡಿದ ಅಶ್ಲೀಲ ಚಿತ್ರಗಳನ್ನು ಹರಿಬಿಟ್ಟಿರುವುದು ಶಿಕ್ಷಾರ್ಹ ಅಪರಾಧ. ಆರೋಪಿಗಳ ಪತ್ತೆಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಅಪರಿಚಿತ ಕರೆಗಳನ್ನು ಬ್ಲಾಕ್ ಮಾಡುವಂತೆ ಹಾಗೂ ಪ್ರಕರಣದ ಬಗ್ಗೆ ಸ್ನೇಹಿತರು, ಕುಟುಂಬಸ್ಥರಿಗೆ ತಿಳಿಸಿ, ಫೊಟೊಗಳನ್ನು ಡಿಲೀಟ್ ಮಾಡಿಸುವಂತೆ ಯುವತಿಗೆ ಪೊಲೀಸರು ಸಲಹೆ ನೀಡಿದ್ದಾರೆ.