ಬೆಂಗಳೂರು: ಡೆಲಿವರಿ ಕೊಡಲು ಬಂದಿದ್ದವನು ೨ ವಸ್ತುಗಳನ್ನು ತಂದು ಕೊಟ್ಟಿಲ್ಲ ಎಂದು ಕ್ಯಾತೆ ತೆಗೆದ ಮಹಿಳೆಯೊಬ್ಬಳು ಆತನಿಗೆ ಚಪ್ಪಲಿಯಿಂದ ಹೊಡೆದಿರುವ ಪ್ರಕರಣವು ಹೆಬ್ಬುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರೆಸ್ಟೀಜ್ ಸನ್‌ರೈಸ್ ಪಾರ್ಕ್ ನಾರ್ವುಡ್ ಅಪಾರ್ಟ್ಮೆಂಟ್‌ನಲ್ಲಿ ನಡೆದಿದೆ. ಇದೀಗ ಈ ಪ್ರಕರಣವು ಕನ್ನಡ-ಹಿಂದಿ ಸಂಘರ್ಷಕ್ಕೂ ಕಾರಣವಾಗಿದೆ. ಉತ್ತರ ಭಾರತದ ಮಹಿಳೆ ಅವಾಚ್ಯವಾಗಿ ನಿಂದಿಸಿದ್ದಾಳೆ ಎಂದು ಆರೋಪ ಕೇಳಿಬಂದಿದ್ದು, ಪೊಲೀಸ್ ಠಾಣೆ ಮುಂದೆ ಪ್ರತಿಭಟನೆಯೂ ನಡೆದಿದೆ.
ವೀರೇಶ್ ಎಂಬಾತನ ಮೇಲೆ ಹಲ್ಲೆ ನಡೆದಿದೆ. ಹಲ್ಲೆ ನಡೆಸಿದ ಮಹಿಳೆ ಶ್ರೀನಿ ಎಂಬಾಕೆ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಡೆಲಿವರಿ ಬಾಯ್‌ಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮಹಿಳೆ ಕ್ಷಮೆ ಕೋರಬೇಕೆಂದು ಆಗ್ರಹಿಸಿ, ಅಪಾರ್ಟ್ಮೆಂಟ್ ಮುಂದೆ ಪ್ರತಿಭಟನೆ ನಡೆಸಲಾಗಿದೆ. ಇದರಿಂದ ಹೆದರಿದ ಮಹಿಳೆ ಅಪಾರ್ಟ್ಮೆಂಟ್‌ನಿಂದ ಕಾಲ್ಕಿತ್ತಿದ್ದಾರೆ.
ಹಲ್ಲೆಗೊಳಗಾದ ಡೆಲಿವರಿ ಬಾಯ್ ದೂರು ದಾಖಲಿಸಲು ಹೋದರೆ ಹೆಬ್ಬುಗೋಡಿ ಪೊಲೀಸರು ಹಿಂದೇಟು ಹಾಕಿದ್ದಾರೆಂಬ ಆರೋಪ ಕೇಳಿಬಂದಿದೆ. ಅಲ್ಲದೆ, ಡೆಲಿವರಿ ಬಾಯ್‌ಗೆ ಹೆದರಿಸಿ, ಸಂಧಾನ ಮಾಡಿ ಕಳಿಸಿದ್ದಾರೆಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಗುರುವಾರ (ಫೆ.೨) ಪೊಲೀಸ್ ಠಾಣೆಯ ಮುಂದೆ ಕನ್ನಡ ಸಂಘಟನೆಗಳಿಂದ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ನೀಡಲಾಗಿದೆ.
ವೀರೇಶ್ ಬ್ಲಿಂಕಿಟ್ ಆ್ಯಪ್ ಡೆಲಿವರಿ ಬಾಯ್ ಆಗಿದ್ದು, ಪ್ರೆಸ್ಟೀಜ್ ಸನ್‌ರೈಸ್ ಪಾರ್ಕ್ ನಾರ್ವುಡ್ ಅಪಾರ್ಟ್ಮೆಂಟ್‌ಗೆ ಬುಕ್ ಮಾಡಲಾಗಿದ್ದ ೮ ಸಾಮಗ್ರಿಗಳನ್ನು ತಲುಪಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಆದರೆ, ಆರ್ಡರ್ ಮಾಡಿದ ೮ರಲ್ಲಿ ಆರು ಸಾಮಗ್ರಿಗಳು ಮಾತ್ರವೇ ಬಂದಿದೆ ಎಂದು ಮಹಿಳೆ ತಗಾದೆ ತೆಗೆದಿದ್ದು, ಅವಾಚ್ಯವಾಗಿ ನಿಂದಿಸಿ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.