Site icon Vistara News

Suicide case | ಕೌಟುಂಬಿಕ ಕಲಹದ ಯಾತನೆ: ಇಬ್ಬರು ಪುಟ್ಟ ಹೆಣ್ಣು ಮಕ್ಕಳೊಂದಿಗೆ ಕಾಲುವೆಗೆ ಹಾರಿ ತಾಯಿ ಆತ್ಮಹತ್ಯೆ

thayi makkalu death

ವಿಜಯಪುರ: ಕೌಟುಂಬಿಕ ಕಲಹದಿಂದ ನೊಂದ ಮಹಿಳೆಯೊಬ್ಬಳು ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಕಾಲುವೆಗೆ ಹಾರಿ ಆತ್ಮಹತ್ಯೆ (Suicide case) ಮಾಡಿಕೊಂಡಿದ್ದಾರೆ. ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ಘಟನೆ ನಡೆದಿದೆ.

ರೇಣುಕಾ ಅಮೀನಪ್ಪ ಕೋನಿನ್ (26 ) ಎಂಬಾಕೆ ತನ್ನ ಇಬ್ಬರು ಮಕ್ಕಳಾದ ಯಲ್ಲವ್ವ (2) ಅಮೃತಾ (1) ಅವರೊಂದಿಗೆ ಕಾಲುವೆಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ. ಈಕೆ ಗ್ರಾಮದ ಹೊರ ಭಾಗದಲ್ಲಿರುವ ಮುಳವಾಡ ಏತ ನೀರಾವರಿ ಯೋಜನೆಯ ಕಾಲುವೆಗೆ ಎರಡು ದಿನಗಳ ಹಿಂದೆ ಹಾರಿದ್ದು, ಮಂಗಳವಾರ ತಾಯಿ ಮತ್ತು ಒಂದು ಮಗುವಿನ ಶವ ಸಿಕ್ಕಿದೆ. ಕಾಲುವೆ ತುಂಬಿ ಹರಿಯುತ್ತಿದ್ದುದರಿಂದ ನೀರಿಗೆ ಹಾರಿದ ಕೆಲವೇ ನಿಮಿಷಗಳಲ್ಲಿ ಉಸಿರುಕಟ್ಟಿ ಪ್ರಾಣ ಕಳೆದುಕೊಂಡಿರಬಹುದು ಎಂದು ಹೇಳಲಾಗಿದೆ.

ಜಗಳವಾಡಿ ಮನೆ ಬಿಟ್ಟು ಹೋಗಿದ್ದರು
ರೇಣುಕಾ ಅವರು ಎರಡು ದಿನಗಳ ಹಿಂದೆ ಗಂಡನ ಮನೆಯಲ್ಲಿ ಜಗಳವಾಡಿ ಮನೆ ಬಿಟ್ಟು ಹೋಗಿದ್ದರು. ಜತೆಗೆ ಇಬ್ಬರು ಪುಟ್ಟ ಹೆಣ್ಮಕ್ಕಳನ್ನೂ ಕರೆದುಕೊಂಡು ಹೋಗಿದ್ದರು. ಎರಡು ದಿನಗಳಿಂದ ಹುಡುಕಾಡಿದ್ದ ಗಂಡನ ಮನೆಯವರು ಕಾಣೆಯಾಗಿದ್ದರ ಕುರಿತು ಸೋಮವಾರ ಮನಗೂಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಮಂಗಳವಾರ ಉಕ್ಕಲಿ ಗ್ರಾಮದ ಕಾಲುವೆಯಲ್ಲಿ ರೇಣುಕಾ ಹಾಗೂ ಒಂದು ಹೆಣ್ಣು ಮಗುವಿನ ಶವ ಪತ್ತೆಯಾಗಿದೆ. ಮತ್ತೊಬ್ಬ ಹೆಣ್ಣು ಮಗುವಿನ ಶವಕ್ಕಾಗಿ ಸ್ಥಳಿಯರು ಹಾಗೂ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಸ್ಥಳಕ್ಕೆ ಮನಗೂಳಿ ಪೊಲೀಸ್ ಠಾಣೆಯ ಪಿಎಸ್ಐ ಪರಶುರಾಮ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | Mass suicide | ಮೂರು ಪುಟ್ಟ ಮಕ್ಕಳ ಜತೆ ಮಹಿಳೆ ಆತ್ಮಹತ್ಯೆ: ಗಂಡನ ಪರಸ್ತ್ರೀ ವ್ಯಾಮೋಹವೇ ಕಾರಣ

Exit mobile version