ಬೆಂಗಳೂರು: ಡೈವೋರ್ಸ್ ಪ್ರಕರಣದ (Divorce case) ವಿಚಾರಣೆಗೆ ಬರಲು ಗಂಡನಿಗೆ ಪ್ರಯಾಣ ವೆಚ್ಚ ಕೊಡಬೇಕು ಎಂಬ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ (Karnataka High court) ರದ್ದುಪಡಿಸಿದೆ. ಗಂಡ ಅಮೆರಿಕದಲ್ಲಿದ್ದು, ಅವನು ವಿಚಾರಣೆಗೆ ಬರಲು ತಗಲುವ 1.65 ಲಕ್ಷ ರೂಪಾಯಿಯನ್ನು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಹೆಂಡತಿಯೇ ಭರಿಸಬೇಕು ಎಂದು ಇತ್ತೀಚೆಗೆ ಕೌಟುಂಬಿಕ ನ್ಯಾಯಾಲಯ (Family court) ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಮೇಲ್ಮನವಿ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ (Justice S Krishna dixit) ಅವರ ನೇತೃತ್ವದ ಏಕಸದಸ್ಯ ಪೀಠವು ಅವನಲ್ಲೇನು ದುಡ್ಡಿಲ್ವ? ದುಡಿಯಲ್ವಾ? ಖರ್ಚು ಮಾಡಿಕೊಂಡು ಬರಲಿ ಎಂದಿದೆ!
ಏನಿದು ಪ್ರಕರಣ? ಯಾಕೆ ಡೈವೋರ್ಸ್?
ಅವರಿಬ್ಬರು ಗಂಡ-ಹೆಂಡತಿ. 2014ರ ಜೂನ್‌ನಲ್ಲಿ ಮದುವೆಯಾಗಿದ್ದರು. ಸದ್ಯ ಹೊಂದಾಣಿಕೆ ಕೊರತೆಯಿಂದ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ. ನನಗೆ ಡೈವೋರ್ಸ್ ಕೊಡಿ ಆತ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಗಂಡ ಈಗ ವಾಸವಾಗಿರುವುದು ಅಮೆರಿಕಾದಲ್ಲಿ. ಅವರನ್ನು ಪಾಟೀ ಸವಾಲಿಗೆ ಒಳಪಡಿಸಬೇಕು ಎಂದು ಪತ್ನಿ ಕೋರಿದ್ದರು. ಆ ಮನವಿಗೆ ಒಪ್ಪಿದ ಬೆಂಗಳೂರಿನ 6ನೇ ಹೆಚ್ಚುವರಿ ಪ್ರಧಾನ ಕೌಟುಂಬಿಕ ನ್ಯಾಯಾಲಯವು ಒಂದು ಕಂಡಿಷನ್ ಹಾಕಿತ್ತು. ಅದೇನೆಂದರೆ, ಗಂಡ ಅಮೆರಿಕದಿಂದ ಬಂದು ಹೋಗಲು ಪ್ರಯಾಣ ವೆಚ್ಚ ಭರಿಸಬೇಕು. 2022ರ ನವೆಂಬರ್ 16ರಂದು ಕೋರ್ಟ್ ನೀಡಿದ ಆದೇಶವನ್ನು ಪ್ರಶ್ನಿಸಿ ಪತ್ನಿಯು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅಲ್ಲಿ ವಿಚಾರಣೆ ನಡೆದಾಗ ಕೌಟುಂಬಿಕ ನ್ಯಾಯಾಲಯದ ಈ ಆದೇಶಕ್ಕೆ ಹೈಕೋರ್ಟ್ ಅಚ್ಚರಿ ವ್ಯಕ್ತಪಡಿಸಿತು. ಅಂತಿಮವಾಗಿ ದಂಪತಿಗೆ ಅನುಕೂಲವಿರುವಂತೆ ಪಾಟೀ ಸವಾಲು ವ್ಯವಸ್ಥೆ ಮಾಡಬೇಕು. ಮುಂದಿನ ನಾಲ್ಕು ತಿಂಗಳಲ್ಲಿ ವಿಚ್ಛೇದನ ಕೋರಿಕೆ ಅರ್ಜಿ ಇತ್ಯರ್ಥಪಡಿಸಬೇಕು ಎಂದು ಕೌಟುಂಬಿಕ ನ್ಯಾಯಾಲಯಕ್ಕೆ ನಿರ್ದೇಶಿಸಿತು.
ಮಹಿಳೆಯ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಕೆಲವೊಂದು ಪ್ರಾಥಮಿಕ ಅಂಶಗಳನ್ನು ಪರಿಗಣಿಸಿತು.
- ಕೌಟುಂಬಿಕ ನ್ಯಾಯಾಲಯವು ಡೈವೋರ್ಸ್ ನೀಡಿದರೆ ಪತ್ನಿಗೆ ಮಾಸಿಕ 20 ಸಾವಿರ ರೂಪಾಯಿ ಜೀವನಾಂಶ ಪಾವತಿಸಲು ಪತಿಗೆ ಆದೇಶ ಕೊಟ್ಟಿತ್ತು. ಈ ಮೊತ್ತ ಪಾವತಿಸಲು ನ್ಯಾಯಾಲಯ ಆದೇಶ ನೀಡಿದೆ ಎಂದರೆ, ಅರ್ಜಿದಾರರಿಗೆ ಜೀವನಾಧಾರಕ್ಕೆ ಯಾವುದೇ ಆದಾಯವಿಲ್ಲ ಎಂಬುದು ತಿಳಿಯುತ್ತದೆ.
- ಇಂತಹ ಸಂದರ್ಭದಲ್ಲಿ ಅಮೆರಿಕಾದಲ್ಲಿ ಉದ್ಯೋಗದಲ್ಲಿರುವ ಪತಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಪಾಟೀ ಸವಾಲಿಗೆ ಬಂದು ಹೋಗಲು ಪ್ರಯಾಣ ವೆಚ್ಚ ಭರಿಸುವಂತೆ ಪತ್ನಿಗೆ ಆದೇಶಿಸಿರುವುದಲ್ಲಿ ಯಾವುದೇ ತರ್ಕವಿಲ್ಲ.
- ಪತ್ನಿ ಇಷ್ಟು ದೊಡ್ಡ ಮೊತ್ತವನ್ನು ಪತಿಯ ಪ್ರಯಾಣಕ್ಕೆ ಭರಿಸಲು ಹೇಗೆ ಸಮರ್ಥರಿದ್ದಾರೆ ಎಂಬುದನ್ನು ಕೌಟುಂಬಿಕ ನ್ಯಾಯಾಲಯ ಯೋಚಿಸಬೇಕಿದೆ ಎನ್ನುವುದು ಕೋರ್ಟ್ ಅಭಿಮತವಾಗಿತ್ತು.
- ವಿವಾಹ ವಿಚ್ಛೇದನದಂಥ ಗಂಭೀರ ಪ್ರಕರಣದಲ್ಲಿ ಪತಿಯನ್ನು ಪಾಟೀ ಸವಾಲಿಗೆ ಗುರಿಪಡಿಸುವುದು ಪತ್ನಿಯ ಹಕ್ಕಾಗಿದೆ. ನ್ಯಾಯದಾನ ಮಾಡುವ ನ್ಯಾಯಾಲಯಗಳು ಅರ್ಜಿದಾರರು ಪಾಲಿಸಲಾಗದಂತಹ ಷರತ್ತನ್ನು ಅವರ ಮೇಲೆ ಹೊರಿಸಲಾಗದು.
- ಯಾವುದೇ ಸಂದರ್ಭದಲ್ಲಿಯೇ ಆಗಲಿ, ಆಕ್ಷೇಪಿಸಲಾದ ಷರತ್ತು ನ್ಯಾಯಯುತವೆನಿಸದೆ ಹೋದಲ್ಲಿ ಅದು ಊರ್ಜಿತವಾಗುವುದಿಲ್ಲ.
- ಪಾಟೀ ಸವಾಲಿಗೆ ಒಳಪಡಲು ಅಮೆರಿಕಾದಿಂದ ಭಾರತಕ್ಕೆ ಬಂದು ಹೋಗಲು ಪ್ರಯಾಣ ವೆಚ್ಚ ಭರಿಸಲಾಗದ ಬಡತನದಲ್ಲಿ ಅವರಿಗಿಲ್ಲ.
- ಪ್ರಕರಣದಲ್ಲಿ ಪತಿಯೇ ವಿವಾಹ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಒಂದು ವೇಳೆ ಪತ್ನಿ ವಿವಾಹ ವಿಚ್ಛೇದನ ಅರ್ಜಿ ಸಲ್ಲಿಸಿದ್ದರೆ, ಆಗ ವಿಭಿನ್ನ ಪರಿಗಣನೆಯ ಅಂಶ ಉದ್ಭವಿಸುತ್ತಿತ್ತು ಎಂದು ಪೀಠ ಅಭಿಪ್ರಾಯಪಟ್ಟಿತು.
ಅಮೆರಿಕದಿಂದ ಇಲ್ಲಿಗೆ ಬರಲೇಬೇಕು ಎಂದೇನಿಲ್ಲ!
ಪತಿ ಬೆಂಗಳೂರಿನಲ್ಲಿ ಇರುವಾಗ ಪಾಟೀ ಸವಾಲಿಗೆ ಗುರಿಪಡಿಸದಿರುವುದರಲ್ಲಿ ಪತ್ನಿಯ ತಪ್ಪು ಕೊಂಚ ಇದೆ ಎಂದು ಹೇಳಬಹುದು. ಆದರೆ, ಅದಕ್ಕೆ ಒಂದು ಸಮರ್ಥನೀಯ ಕಾರಣ ನೀಡಲಾಗಿದೆ. ವಿಡಿಯೋ ಕಾನ್ಫೆರೆನ್ಸ್ ಮೂಲಕ ಪ್ರತಿವಾದಿಯನ್ನು ಪಾಟೀ ಸವಾಲಿಗೆ ಒಳಪಡಿಸಲು ಅರ್ಜಿದಾರೆಯು ಒಪ್ಪುತ್ತಿಲ್ಲ ಎಂದೇನೂ ಇಲ್ಲ. ಪ್ರತಿವಾದಿಗೂ ಕೂಡ ಇದು ಅನುಕೂಲಕರವಾಗಿದೆ ಎಂದು ನ್ಯಾಯಾಲಯ ಹೇಳಿತು. ಇದಕ್ಕೂ ಮೊದಲು ಪತ್ನಿಯ ಪರ ವಕೀಲರು, ಅರ್ಜಿದಾರೆಗೆ ಪತಿಯು ಮಾಸಿಕ 20 ಸಾವಿರ ರೂಪಾಯಿ ಜೀವನಾಂಶ ಪಾವತಿಸುತ್ತಿದ್ದಾರೆ. ಕೆಲವು ತಿಂಗಳ ಜೀವನಾಂಶವು ಪಾವತಿಸುವುದು ಬಾಕಿಯಿದೆ. ಇಂತಹ ಪರಿಸ್ಥಿತಿಯಲ್ಲಿ ಪತಿಯ ಪ್ರಯಾಣ ವೆಚ್ಚ 1.65 ಲಕ್ಷ ರೂಪಾಯಿಯಷ್ಟು ದೊಡ್ಡ ಮೊತ್ತ ಪಾವತಿಸುವಂತೆ ಕೌಟುಂಬಿಕ ನ್ಯಾಯಾಲಯವು ನಿರ್ದೇಶಿಸಿರುವುದು ಸೂಕ್ತವಲ್ಲ ಎಂದಿದ್ದರು. ಆದರೆ, ಪತಿ ಪರ ವಕೀಲರು ಆದೇಶ ಸರಿ ಇದ ಎಂದಿದ್ದರು.
ಇದನ್ನೂ ಓದಿ: Sexual rejection : ಮದುವೆ ಆದ್ಮೇಲೆ ಸೆಕ್ಸ್‌ಗೆ ನಿರಾಕರಿಸುವುದು ಕ್ರೌರ್ಯ ಎಂದ ಹೈಕೋರ್ಟ್