ಬೆಂಗಳೂರು: ಗಣರಾಜ್ಯ ದಿನದಂದು ನೌಕಾಪಡೆಯ ದಳವನ್ನು ಮುನ್ನಡೆಸಲಿರುವ ಲೆಫ್ಟಿನೆಂಟ್ ಕಮಾಂಡರ್ ದಿಶಾ ಅಮೃತ್ ಅವರು ಬೆಂಗಳೂರಿನಲ್ಲಿ ಶಿಕ್ಷಣ ಪಡೆದವರು.
ಲೆ.ಕ. ದಿಶಾ ಅಮೃತ್ (29), ಬೆಂಗಳೂರಿನ ಬಸವನಗುಡಿಯ ಬಿಎಂಎಸ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. 2008ರಲ್ಲಿ ಯುವ ಎನ್‌ಸಿಸಿ ಕೆಡೆಟ್ ಆಗಿದ್ದ ದಿಶಾ ಅಮೃತ್, ಮುಂದೊಂದು ದಿನ ಕರ್ತವ್ಯಪಥದ ಗಣರಾಜ್ಯ ಪರೇಡ್‌ನಲ್ಲಿ ಭಾಗವಹಿಸುವ ಕನಸು ಹೊತ್ತಿದ್ದರು. ಇದೇ ಜನವರಿ 26ರಂದು ಅವರ ಈ ಕನಸು ನನಸಾಗುತ್ತಿದೆ. ಭಾರತೀಯ ನೌಕಾಪಡೆಯ ಲೆಫ್ಟಿನೆಂಟ್ ಕಮಾಂಡರ್ ಆಗಿ ಅವರು ತಮ್ಮ ದಳವನ್ನು ಮುನ್ನಡೆಸಲಿದ್ದಾರೆ.
ಇದೀಗ ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ನಿಯೋಜಿತರಾಗಿರುವ ನೌಕಾಪಡೆಯ ವೈಮಾನಿಕ ಕಾರ್ಯಾಚರಣೆ ಆಫೀಸರ್. 144 ಯುವ ಯೋಧರು ತುಂಬಿರುವ ಕಂಟಿಜೆಂಟ್ ಅನ್ನು ಅವರು ನಾಡಿದ್ದು ಕರ್ತವ್ಯಪಥದಲ್ಲಿ ಮುನ್ನಡೆಸಲಿದ್ದಾರೆ. ಇದರಲ್ಲಿ ಮೂವರು ಮಹಿಳಾ ಹಾಗೂ ಐವರು ಪುರುಷ ಅಗ್ನಿವೀರರು ಇದ್ದಾರೆ. ಮೂವರು ಪ್ಲಟೂನ್ ಕಮಾಂಡರ್‌ಗಳಲ್ಲಿ ಒಬ್ಬರು ಮಹಿಳೆ- ಸಬ್ ಲೆಫ್ಟಿನೆಂಟ್ ವಲ್ಲಿ ಮೀನಾ.
ಇದನ್ನೂ ಓದಿ | ವಿಸ್ತಾರ ಸಂಪಾದಕೀಯ | ಪ್ರಜೆಯೇ ಪ್ರಭು, ಇದೇ ಗಣರಾಜ್ಯೋತ್ಸವದ ಸಂದೇಶ
ನೌಕಾಪಡೆ ಟ್ಯಾಬ್ಲೋ ಕೂಡ ʼನಾರಿಶಕ್ತಿʼ ಥೀಮ್ ಹೊಂದಿದೆ. ನೌಕಾಪಡೆಯ ಬಹುಆಯಾಮದ ಸಾಮರ್ಥ್ಯಗಳು, ಸ್ಕಾರ್ಪೀನ್- ಕಲ್ವಾರಿ ಸಬ್‌ಮರೀನ್‌ಗಳಂಥ ಮೇಕ್ ಇನ್ ಇಂಡಿಯಾ ಯೋಜನೆಗಳನ್ನು ಪ್ರದರ್ಶಿಸಲಿದೆ.
ನೌಕಾಪಡೆಯ ಮುಂಚೂಣಿಯ ಯುದ್ಧನೌಕೆಗಳಲ್ಲಿ ಇದೀಗ ಮೂವತ್ತು ಮಹಿಳಾ ಅಧಿಕಾರಿಗಳಿದ್ದಾರೆ. ಇವರನ್ನು ಪೈಲಟ್‌ಗಳಾಗಿ, ಏರ್ ಆಪರೇಶನ್ಸ್ ಆಫೀಸರ್ಸ್ ಆಗಿದ್ದಾರೆ. ಲೆ.ಕ. ದಿಶಾ ಅಮೃತ್ ಅವರು ʼಮಹಿಳಾ ಆಫೀಸರ್ʼ ಎಂದು ಕರೆಸಿಕೊಳ್ಳುವುದಕ್ಕಿಂತ ʼಆಫೀಸರ್ʼ ಎಂದೇ ಕರೆಸಿಕೊಳ್ಳುವುದಕ್ಕೆ ಇಷ್ಟಪಡುತ್ತಾರೆ. ʼʼನನ್ನ ಪುರುಷ ಸಹೋದ್ಯೋಗಿಗಳಿಗೆ ನಾನು ಸರಿಸಮಾನಳಾಗಿದ್ದೇನೆ. ನಾನು ಅದನ್ನು ಸಾಬೀತು ಮಾಡಿದ್ದೇನೆʼʼ ಎನ್ನುತ್ತಾರೆ ಅವರು. ʼʼಇದು ನನಗೆ ಸಿಕ್ಕಿದ ಜೀವಿತಾವಧಿ ಗೌರವʼʼ ಎಂದೂ ನುಡಿಯುತ್ತಾರೆ.
ಇದನ್ನೂ ಓದಿ | Republic Day 2023 | ಪರೇಡ್ ವೀಕ್ಷಣೆಗೆ ಮುಂದಿನ ಆಸನಗಳು ವಿಐಪಿಗಳಿಗಲ್ಲ ಕಾರ್ಮಿಕರು, ರಿಕ್ಷಾವಾಲಾಗಳು, ತರಕಾರಿ ಮಾರುವವರಿಗೆ ಮೀಸಲು!