Site icon Vistara News

Bangalore Airport | ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಯುವತಿ ಶರ್ಟ್‌ ಬಿಚ್ಚಿಸಿದ ಆರೋಪ: ಸಿಐಎಸ್‌ಎಫ್‌ ನಿರಾಕರಣೆ

airport checking

ಬೆಂಗಳೂರು: ಭದ್ರತೆ ಮತ್ತು ಸೌಜನ್ಯಕ್ಕೆ ಹೆಸರಾದ ಬೆಂಗಳೂರು ವಿಮಾನ ನಿಲ್ದಾಣದಲ್ಲಿ (Bangalore Airport) ಮಹಿಳೆಯೊಬ್ಬರ ಶರ್ಟು ಬಿಚ್ಚಿಸಿ ಅಪಮಾನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಆದರೆ, ಭದ್ರತಾ ತಪಾಸಣೆಯ ಮೇಲ್ವಿಚಾರಣೆ ಹೊತ್ತಿರುವ ಸಿಐಎಸ್‌ಎಫ್‌ ಈ ಆರೋಪವನ್ನು ನಿರಾಕರಿಸಿದೆ.

ಕೃಷ್ಣಾನಿ ಗಾದ್ವಿ ಎಂಬ ಮಹಿಳೆಯೊಬ್ಬರು ತಮಗೆ ವಿಮಾನ ನಿಲ್ದಾಣದಲ್ಲಿ ಮುಜುಗರ ಉಂಟು ಮಾಡಲಾಯಿತು ಎಂದು ಆರೋಪಿಸಿ ಟ್ವೀಟ್‌ ಮಾಡಿದ್ದಾರೆ. ಜತೆಗೆ ಏರ್‌ಪೋರ್ಟ್‌ನ ಟ್ವಿಟರ್‌ ಖಾತೆಯನ್ನು ಕೂಡಾ ಟ್ಯಾಗ್‌ ಮಾಡಿದ್ದಾರೆ.

ಅವರು ಹೇಳಿದ್ದೇನು?
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆ ವೇಳೆ ನನ್ನ ಶರ್ಟ್‌ ತೆಗೆಯುವಂತೆ ಸೂಚಿಸಲಾಯಿತು. ಸೆಕ್ಯುರಿಟಿ ಚೆಕ್‌ ಪಾಯಿಂಟ್‌ನಲ್ಲಿ ಶರ್ಟು ತೆಗೆದು ಖಾಲಿ ಒಂದು ಟೀ ಶರ್ಟ್‌ನಂಥ ಕ್ಯಾಮಿಸೋಲ್‌ನಲ್ಲಿ ನಿಲ್ಲುವುದು ತುಂಬಾ ಮುಜುಗರದ ಸಂಗತಿ. ಒಬ್ಬ ಮಹಿಳೆ ಈ ರೀತಿ ನಾಲ್ಕು ಜನರ ಮುಂದೆ ನಿಲ್ಲಲು ಬಯಸುವುದಿಲ್ಲ. ಬೆಂಗಳೂರು ಏರ್‌ಪೋರ್ಟ್‌ ಅಧಿಕಾರಿಗಳೇ ನಿಮಗೆ ಬಟ್ಟೆ ಬಿಚ್ಚಿಸಲು ಒಬಬ್ಬ ಮಹಿಳೆಯೇ ಬೇಕಾಯಿತಾ?

ಸಿಬ್ಬಂದಿಯ ವರ್ತನೆಯಿಂದ ಬಹಳ ಮುಜುಗರ ಆಯಿತು ಎಂದು ಬೇಸರ ವ್ಯಕ್ತಪಡಿಸಿರುವ ಆಕೆ, ಭದ್ರತಾ ತಪಾಸಣೆ ವೇಳೆ ಮಹಿಳೆಯರು ಏಕೆ ಶರ್ಟ್ ತೆಗೆಯಬೇಕು ಎಂದು ಟ್ವಿಟರ್ ನಲ್ಲಿ ಪ್ರಶ್ನಿಸಿದ್ದಾರೆ. ಈ ಯುವತಿಯ ನಿಲುವನ್ನು ಹಲವರು ಸಮರ್ಥಿಸಿದ್ದಾರೆ. ಹೆಣ್ಮಕ್ಕಳಿಗೆ ಈ ರೀತಿ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

ಸಿಐಎಸ್‌ಎಫ್‌ ಅಧಿಕಾರಿಗಳು ಹೇಳುವುದೇನು?
ವಿಮಾನ ನಿಲ್ದಾಣದಲ್ಲಿ ಮಹಿಳೆಗೆ ಅಪಮಾನವಾಗುವ ಯಾವುದೇ ಘಟನೆಗಳು ನಡೆದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ʻʻಕೃಷ್ಣಾನಿ ಗಾದ್ವಿ ಬ್ಯಾಡ್ಜ್ ಗಳು ಮತ್ತು ಮಣಿಗಳನ್ನು ಹೊಂದಿರುವ ಜಾಕೆಟ್ ಧರಿಸಿದ್ದರು. ಸಿಐಎಸ್ಎಫ್ ಮಹಿಳಾ ಸಿಬ್ಬಂದಿ ಜಾಕೆಟ್ ನ್ನು ಸ್ಕ್ಯಾನರ್ ಗೆ ಹಾಕುವ ಕಾರಣಕ್ಕೆ ಆಕೆಯನ್ನು ಪರದೆಯ ಹಿಂದೆ ಕಳಿಸಿದ್ದಾರೆ‌. ಆಗ ಆಕೆ ಆರಾಮವಾಗಿ ಜಾಕೆಟ್‌ ತೆಗೆದು ತಪಾಸಣೆಗೆ ಸಹಕರಿಸಿದ್ದಾರೆʼʼ ಎಂದು ತಿಳಿಸಿದ್ದಾರೆ.

ಇದಾದ ಬಳಿಕ ಆಕೆ ಜಾಕೆಟ್‌ ತೆಗೆಯುವಂತೆ ಹೇಳಿದ್ದು ತಮಗೆ ಅಸಮಾಧಾನ, ಮುಜುಗರ ಉಂಟು ಮಾಡಿದೆ ಎಂದು ಟ್ವಿಟರ್‌ನಲ್ಲಿ ಆರೋಪಿಸಿದ್ದಾರೆ.

ಈ ನಡುವೆ, ವಿಮಾನ ನಿಲ್ದಾಣದಲ್ಲಿ ಭದ್ರತಾ ವಿಚಾರ ತುಂಬ ಸೂಕ್ಷ್ಮವಾಗಿರುವುದು ನಿಜವಾದರೂ ಪ್ರಯಾಣಿಕರು, ಅದರಲ್ಲೂ ಮಹಿಳೆಯರಿಗೆ ಮುಜುಗರವಾಗುವಂತೆ ನಡೆದುಕೊಳ್ಳದಂತೆ ಭದ್ರತಾ ಸಿಬ್ಬಂದಿಗೆ ಸೂಚಿಸುವಂತೆ ಹಲವರು ಮನವಿ ಮಾಡಿದ್ದಾರೆ.

ಇದನ್ನೂ ಓದಿ | Bangalore Airport | ವಿಮಾನ ನಿಲ್ದಾಣದಲ್ಲಿ ದಾಖಲೆ ಕೇಳಿದ CISF ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆಗೈದ ಪ್ರಯಾಣಿಕ

Exit mobile version