Site icon Vistara News

Gadag News: ಚಲಿಸುತ್ತಿದ್ದ ಸಾರಿಗೆ ಬಸ್‌ನಿಂದ ಇಳಿಯಲು ಹೋಗಿ ಬಿದ್ದ ಮಹಿಳೆ; ತಲೆಗೆ ಗಂಭೀರ ಗಾಯ

The injured woman was rushed to the hospital in an ambulance

ಗದಗ: ಶಕ್ತಿ ಯೋಜನೆಯಲ್ಲಿ ಉಚಿತ ಪ್ರಯಾಣ ಸೌಲಭ್ಯ ನೀಡಿರುವುದರಿಂದ ಸಾರಿಗೆ ಬಸ್‌ಗಳು ಮಹಿಳಾ ಪ್ರಯಾಣಿಕರಿಂದ ತುಂಬಿ ತುಳುಕುತ್ತಿವೆ. ಈ ನಡುವೆ ಹೆಚ್ಚಿನ ಜನರು ತುಂಬಿದ್ದ ಸಾರಿಗೆ ಬಸ್‌ ಚಲಿಸುತ್ತಿದ್ದಾಗಲೇ ಇಳಿಯಲು ಹೋಗಿ ಮಹಿಳೆಯೊಬ್ಬರು ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ (Gadag News) ಹುಡ್ಕೋ ಕ್ರಾಸ್ ಬಳಿ ಸೋಮವಾರ ನಡೆದಿದೆ.

ಗದಗ ತಾಲೂಕಿನ ಮಲ್ಲಸಮುದ್ರ ಗ್ರಾಮದ ನಿವಾಸಿ ಕವಿತಾ ದತ್ತಾತ್ರೆಯ ಹೆಳವರ (35) ಗಾಯಾಳು. ಮೂಲತಃ: ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಬಳ್ಳೊಂಡಗಿ ಗ್ರಾಮದ ನಿವಾಸಿಯಾದ ಗಾಯಾಳು ಮಹಿಳೆ, ಕೂಲಿ ಕೆಲಸಕ್ಕಾಗಿ ಗದಗದ ಮಲ್ಲಸಮುದ್ರಕ್ಕೆ ಬಂದಿದ್ದರು.

ಶಿರಹಟ್ಟಿ ತಾಲೂಕು ಕಲ್ಲಾಗನೂರ ಗ್ರಾಮದಿಂದ ಗದಗಕ್ಕೆ ಸುಮಾರು 80 ಪ್ರಯಾಣಿಕರೊಂದಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕವಿತಾ ದತ್ತಾತ್ರೆಯ ಹೆಳವರ ಹತ್ತಿದ್ದರು. ಮಹಿಳೆ ಇಳಿಯಬೇಕಾದ ಸ್ಥಳದಲ್ಲಿ ಬಸ್‌ ನಿಲ್ದಾಣ ಇರಲಿಲ್ಲ. ಹೀಗಾಗಿ ಬಸ್‌ ಚಲಿಸುತ್ತಿದ್ದಾಗಲೇ ಮಹಿಳೆ ಇಳಿದಿದ್ದು, ಈ ವೇಳೆ ಆಯತಪ್ಪಿ ಬಿದ್ದು ಗಾಯಗೊಂಡಿದ್ದಾರೆ. ಮಹಿಳೆ ಇಳಿಯುವಾಗ ನಿರ್ವಾಹಕ ಕೂಡ ಸೀಟಿ ಹೊಡೆದಿಲ್ಲ ಎನ್ನಲಾಗಿದೆ. ತಲೆಗೆ ಬಲವಾದ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು, ಸದ್ಯ ಹುಬ್ಬಳ್ಳಿ ಕೆಎಂಸಿ ಆಸ್ಪತ್ರೆಯಲ್ಲಿ ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ | Tiptur News: ದೆವ್ವದ ಹೆಸರಿನಲ್ಲಿ ಕುಚೇಷ್ಟೆಗೆ ಕಂಗಾಲಾದ ಜನ; ರಾತ್ರಿ ವೇಳೆ ಕಲ್ಲು ಎಸೆಯುತ್ತೆ, ಶಿಳ್ಳೆ ಹಾಕುತ್ತೆ!

ಬಡಕುಟುಂಬದ ಗಾಯಾಳು ಮಹಿಳೆಗೆ ಇಬ್ಬರು ಮಕ್ಕಳು ಹಾಗೂ ಪತಿ ಇದ್ದಾರೆ. ಗದಗ ಸಂಚಾರ ಠಾಣೆಗೆ ಕೆಎಸ್‌ಆರ್‌ಟಿಸಿ ಬಸ್ ಸಮೇತ ಚಾಲಕ, ನಿರ್ವಾಹಕನನ್ನು ಕರೆತಂದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿ ಟಾಟಾ ಏಸ್‌ ಪಲ್ಟಿ; 15ಕ್ಕೂ ಹೆಚ್ಚು ಮಂದಿಗೆ ಗಾಯ

ಚಾಮರಾಜನಗರ : ಇಲ್ಲಿನ ಗುಂಡ್ಲುಪೇಟೆ ತಾಲೂಕಿನ ಹುಂಡಿಮನೆ ರಸ್ತೆಯಲ್ಲಿ ಟಾಟಾ ಏಸ್ ವಾಹನವು (Road Accident) ಪಲ್ಟಿಯಾಗಿದೆ. ಅಪಘಾತದಲ್ಲಿ 15ಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬಾಚಹಳ್ಳಿ ಗ್ರಾಮದವರು ಭೀಮನ ಅಮಾವಾಸ್ಯೆ ಹಿನ್ನೆಲೆ ಕೋಡಹಳ್ಳಿ ಮಹದೇಶ್ವರ ಜಾತ್ರೆಗೆ ಹೋಗಿದ್ದರು. ಜಾತ್ರೆ ಮುಗಿಸಿ ಊರಿಗೆ ಹಿಂದಿರುಗಲು ಬಸ್ ಇಲ್ಲವೆಂದು ಟಾಟಾ ಏಸ್‌ ವಾಹನವನ್ನು ಹತ್ತಿದ್ದರು. ಆದರೆ ಚಲಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಟಾಟಾ ಏಸ್ ವಾಹನವು ಪಲ್ಟಿಯಾಗಿದೆ. ಮಕ್ಕಳು ಸೇರಿ 15 ಜನರಿಗೆ ಗಾಯವಾಗಿದ್ದು, ಇಬ್ಬರು ಮಹಿಳೆಯರ ಸ್ಥಿತಿ ಗಂಭೀರವಾಗಿದೆ.

ಗಂಭೀರ ಗಾಯಗೊಂಡವರನ್ನು ಚಾಮರಾಜನಗರ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಉಳಿದವರಿಗೆ ಗುಂಡ್ಲುಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ | Kidnap case : ತವರು ಮನೆ ಸೇರಿದವಳನ್ನು ಭೀಮನ ಅಮಾವಾಸ್ಯೆಯಂದೇ ಅಪಹರಿಸಿದ ಪತಿ!

ಕಾರು- ಕ್ರೂಸರ್‌ ನಡುವೆ ಅಪಘಾತ

ಕಲಬುರಗಿ ಜಿಲ್ಲೆಯ ಚಿತಾಪೂರ ತಾಲೂಕಿನ ಲಾಡ್ಲಾಪೂರ ಬಳಿ ಕಾರು ಹಾಗೂ ಕ್ರೂಸರ್ ಮಧ್ಯೆ ಡಿಕ್ಕಿಯಾಗಿ 10 ಮಂದಿ ಗಾಯಗೊಂಡಿದ್ದಾರೆ. ಕಲಬುರಗಿಯ ಖಾಜಾ ಬಂದೇನವಾಜ ದರ್ಗಾಕ್ಕೆ ವಿಜಯಪುರದಿಂದ 13 ಜನರು ಕ್ರೂಸರ್‌ನಲ್ಲಿ ಪ್ರಯಾಣ‌ ಮಾಡುತ್ತಿದ್ದರು. ಆದರೆ ಕಾರು ಹಾಗೂ ಕ್ರೂಸರ್‌ ನಡುವೆ ಡಿಕ್ಕಿಯಾಗಿದೆ. ಅಪಘಾತದಲ್ಲಿ ಕ್ರೂಸರ್‌ನ ಟೈಯರ್ ಎಕ್ಸೆಲ್ ಮುರಿದು 2 ಪಲ್ಟಿ ಹೊಡೆದಿದೆ. ಗಾಯಾಳುಗಳಿಗೆ ಕಲಬುರಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version