ಹಾವೇರಿ: 7ನೇ ವೇತನ ಆಯೋಗದ ವರದಿ ಜಾರಿಗಾಗಿ ಬುಧವಾರ (ಮಾ.1) ಬೆಳಗ್ಗೆಯಿಂದ ರಾಜ್ಯ ಸರ್ಕಾರಿ ನೌಕಕರು ಮುಷ್ಕರ (Govt Employees Strike) ಕೈಗೊಂಡ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ತುರ್ತು ಸೇವೆಗಳನ್ನು ಹೊರತುಪಡಿಸಿದರೆ ಉಳಿದ ಸೇವೆಗಳು ಲಭ್ಯವಿರಲಿಲ್ಲ. ಇದೇ ವೇಳೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಮಹಿಳೆಯೊಬ್ಬರು ತೀವ್ರ ಜ್ವರದಿಂದ ಬಳಲುತ್ತಿದ್ದ ಮಗುವನ್ನು ಹೊತ್ತು ಜಿಲ್ಲಾಸ್ಪತ್ರೆಗೆ ಓಡೋಡಿ ಬಂದಿದ್ದು, ತುರ್ತು ಚಿಕಿತ್ಸೆಯಷ್ಟೇ ಲಭ್ಯವಾಗಿದೆ.
ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಮೆಳಾಗಟ್ಟಿ ಗ್ರಾಮದ ನಿವಾಸಿಯಾಗಿರುವ ಮಹಿಳೆಯು ರಾತ್ರಿಯಿಂದ ತೀವ್ರ ಜ್ವರದಿಂದ ಬಳಲುತ್ತಿರುವ ಮಗುವನ್ನು ಹೊತ್ತು ತಂದಿದ್ದಾರೆ. ಎಲ್ಲಿ ಬಂದರೂ ಚಿಕಿತ್ಸೆ ಇಲ್ಲ ಎನ್ನುವಂತಹ ಪರಿಸ್ಥಿತಿ ಕಂಡು ಕಂಗಾಲಾಗಿದ್ದಾರೆ.
ಇದನ್ನೂ ಓದಿ: Govt Employees Strike: ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆ ಬಂದ್; ರೋಗಿಗಳು ಹೈರಾಣ: ಇಲ್ಲಿದೆ ರಾಜ್ಯದ ಚಿತ್ರಣ
ಜಿಲ್ಲಾಸ್ಪತ್ರೆಯಲ್ಲಿಯೂ ಎಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬುದು ಅರಿಯದೇ ಅತ್ತಿಂದಿತ್ತ, ಇತ್ತಿಂದತ್ತ ಓಡಾಡಿದ್ದಾರೆ. ಬಳಿಕ ಜಿಲ್ಲಾಸ್ಪತ್ರೆಯ ತುರ್ತು ಘಟಕದಲ್ಲಿ ಜ್ವರದಿಂದ ಬಳಲುತ್ತಿದ್ದ ಮಗುವಿಗೆ ಚಿಕಿತ್ಸೆ ನೀಡಲಾಗಿದೆ. ತುರ್ತು ಚಿಕಿತ್ಸೆ ನೀಡಿದ ಬಳಿಕ ವೈದ್ಯರು ಮಗುವನ್ನು ಆಸ್ಪತ್ರೆಯಲ್ಲಿ ಉಳಿಸಿಕೊಳ್ಳದೆ ವಾಪಸ್ ಕಳಿಸಿದ್ದಾರೆ. ಇದರಿಂದ ಕಣ್ಣೀರು ಹಾಕುತ್ತಾ ವೈದ್ಯರ ಬಳಿ ಮಗುವಿನ ಪೋಷಕರು ದುಃಖ ತೋಡಿಕೊಂಡಿದ್ದಾರೆ. ಆದರೂ, ಪ್ರತಿಭಟನೆಯ ಹಿನ್ನೆಲೆಯಲ್ಲಿ ಆಸ್ಪತ್ರೆ ವೈದ್ಯರು ಒಪ್ಪದೇ ವಾಪಸ್ ಕಳುಹಿಸಿದ್ದಾರೆ. ಇದೀಗ ಪ್ರತಿಭಟನೆ ವಾಪಸ್ ಆಗಿರುವ ಹಿನ್ನೆಲೆಯಲ್ಲಿ ಎಂದಿನಂತೆ ಎಲ್ಲ ಸೇವೆಗಳೂ ಲಭ್ಯವಾಗುವ ನಿರೀಕ್ಷೆ ಇದೆ.