ಬೆಂಗಳೂರು: ನಾಯಂಡಹಳ್ಳಿ ಬಳಿ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಲಾರಿಯೊಂದು ಡಿಕ್ಕಿ ಹೊಡೆದ (Road Accident) ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮಗು ಮತ್ತು ಅಜ್ಜಿ ಬಚಾವ್ ಆಗಿದ್ದಾರೆ. ಲಾರಿ ಟಯರ್ ತಲೆ ಮೇಲೆ ಹತ್ತಿದ್ದರಿಂದ ಮಹಿಳೆ ತಲೆ ಛಿದ್ರವಾಗಿದೆ. ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು ಲಾರಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಅನುಷಾ ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಇವರು ಖಾಸಗಿ ಕಂಪನಿ ಉದ್ಯೋಗಿಯಾಗಿದ್ದು ಶನಿವಾರ ರಜೆ ಇದ್ದರಿಂದ ವಸ್ತುಗಳ ಖರೀದಿಗಾಗಿ ಕುಟುಂಬದವರ ಜತೆ ಹೊರಗೆ ಬಂದಿದ್ದರು ಎಂದು ಹೇಳಲಾಗಿದೆ. ನಾಯಂಡಹಳ್ಳಿ ಬಳಿ ಮಹಿಳೆಯು ತಮ್ಮ ಮಗು ಹಾಗೂ ತಾಯಿಯನ್ನು ಕೂರಿಸಿಕೊಂಡು ಹೋಗುತ್ತಿದ್ದರು. ಈ ವೇಳೆ ಲಾರಿಯು ಡಿಕ್ಕಿ ಹೊಡೆದಿದ್ದರಿಂದ ಎಲ್ಲರೂ ಕೆಳಕ್ಕೆ ಬಿದ್ದಿದ್ದಾರೆ. ಆದರೆ, ಅಷ್ಟರಲ್ಲಿ ಲಾರಿ ಚಕ್ರವು ಮಹಿಳೆಯ ತಲೆ ಮೇಲೆ ಹರಿದಿದ್ದರಿಂದ ತಲೆಯು ಅಲ್ಲಿಯೂ ಒಡೆದು ಚೂರಾಗಿದೆ. ಮಗಳು ಕಣ್ಣೆದುರಿಗೇ ಮೃತಪಟ್ಟಿರುವ ಹಿನ್ನೆಲೆಯಲ್ಲಿ ತಾಯಿಯ ಆಕ್ರಂದನ ಮುಗಿಲುಮುಟ್ಟಿದೆ.
ಕೆಎಸ್‌ಆರ್‌ಟಿಸಿ ಬಸ್ ಗುದ್ದಿ ನಿಂತ ಲಾರಿ
ಅತಿ ವೇಗವಾಗಿ ಲಾರಿಯನ್ನು ಓಡಿಸಲಾಗುತ್ತಿತ್ತು ಎಂದು ಹೇಳಲಾಗಿದ್ದು, ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಬಳಿಕ ಹಾಗೇ ಮುಂದೆ ಹೋಗಿದ್ದು ಬಸ್‌ಗೆ ಡಿಕ್ಕಿ ಹೊಡೆದು ನಿಂತಿದೆ ಎಂದು ತಿಳಿದು ಬಂದಿದೆ. ಇದನ್ನು ನೋಡಿದ ಸ್ಥಳೀಯರು ತೀವ್ರ ಆಕ್ರೋಶಗೊಂಡಿದ್ದಾರೆ. ಲಾರಿ ಚಾಲಕನ ಅಜಾಗರೂಕ ಚಾಲನೆಯೇ ಘಟನೆಗೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಲಾರಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೆ, ಸ್ಥಳದಲ್ಲಿಯೇ ಪ್ರತಿಭಟನೆ ನಡೆಸಿದ್ದಾರೆ. ಕೆಲವರು ರಸ್ತೆ ಮಧ್ಯೆಯೇ ಮಲಗಿ ಆಕ್ರೋಶ ವ್ಯಕ್ತಪಡಿಸಿದ್ದು, ಭಾರಿ ಗಾತ್ರದ ವಾಹನಗಳಿಗೆ ನಿಯಮ ರೂಪಿಸುವಂತೆ ಆಗ್ರಹಿಸಿದ್ದಾರೆ. ಈ ವೇಳೆ ಟ್ರಾಫಿಕ್ ಪೊಲೀಸರು ಬಂದಿದ್ದು, ಅವರ ಜತೆ ನಾಗರಿಕರು ವಾಗ್ವಾದವನ್ನು ನಡೆಸಿದ್ದಾರೆ.
ಘಟನೆಯಲ್ಲಿ ಮೃತಪಟ್ಟ ಅನುಷಾ ಅವರ ತಾಯಿ ಕಾಲಿಗೂ ಗಂಭೀರ ಗಾಯಗಳಾಗಿದ್ದು, ಕಾಲುಗಳು ಮುರಿದಿವೆ. ಏಳು ವರ್ಷದ ಆರ್ಯ ಪವಾಡ ಸದೃಶ ರೂಪದಲ್ಲಿ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾನೆ. ಅಪಘಾತದಿಂದ ಭಯಗೊಂಡ ಲಾರಿ ಚಾಲಕನು ಲಾರಿಯನ್ನು ಬಿಟ್ಟು ಅಲ್ಲಿಂದ ಕಾಲ್ಕಿತ್ತಿದ್ದಾನೆ. ಇದರಿಂದ ರೊಚ್ಚಿಗೆದ್ದ ನಾಗರಿಕರು ಲಾರಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಸಿಸಿ ಕ್ಯಾಮೆರಾದಲ್ಲಿ ಸೆರೆ
ಅಪಘಾತವಾಗುತ್ತಿದ್ದಂತೆ ಲಾರಿ ಚಾಲಕನು ಲಾರಿಯನ್ನು ಅಲ್ಲಿಯೇ ಬಿಟ್ಟು ಕಾಲ್ಕಿತ್ತಿರುವ ವಿಡಿಯೊ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆತ ಸ್ಥಳದಿಂದ ವೇಗವಾಗಿ ಓಡಿ ತಪ್ಪಿಸಿಕೊಂಡಿದ್ದಾನೆ. ಈ ವೇಳೆ ಸಾರ್ವಜನಿಕರು ಹಿಡಿಯಲು ಪ್ರಯತ್ನಪಟ್ಟರಾದರೂ ಸಾಧ್ಯವಾಗಲಿಲ್ಲ.
ಸ್ಥಳಕ್ಕೆ ಬ್ಯಾಟರಾಯನಪುರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಿದ್ದಾರೆ. ಅಲ್ಲದೆ, ಗಾಯಗೊಂಡ ವೃದ್ಧೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಗುವಿನ ತಲೆಗೆ ಸ್ವಲ್ಪ ಏಟಾಗಿದ್ದು, ಚಿಕಿತ್ಸೆ ನೀಡಲಾಗಿದೆ.
ಇದನ್ನೂ ಓದಿ: Karnataka Election 2023: ಕಾಂಗ್ರೆಸ್‌ಗೆ ಗುಂಡಿಗೆಯೇ ಇಲ್ಲ, ಇನ್ನು ಗಂಡಸ್ತನ ಎಲ್ಲಿ ಬರುತ್ತೆ?; ಆನಂದ್ ಸಿಂಗ್
3 ಕಿ.ಮೀ. ಟ್ರಾಫಿಕ್ ಜಾಂ
ಅಪಘಾತವಾದ ಹಿನ್ನೆಲೆಯಲ್ಲಿ ಜನರು ರೊಚ್ಚಿಗೆದ್ದು ಪ್ರತಿಭಟನೆ ನಡೆಸಿದ್ದರಿಂದ 3 ಕಿಲೋ ಮೀಟರ್‌ಗೂ ಅಧಿಕ ದೂರದಲ್ಲಿ ಟ್ರಾಫಿಕ್ ಜಾಂ ಉಂಟಾಗಿದೆ. ಇದರಿಂದ ಪ್ರಯಾಣಿಕರಿಗೆ ತೀವ್ರ ಸಮಸ್ಯೆಯಾಗಿದೆ. ಜನರನ್ನು ಚದುರಿಸಲು ಪೊಲೀಸರಿಂದ ಲಘು ಲಾಠಿ ಪ್ರಹಾರ ನಡೆದಿದೆ.