Site icon Vistara News

Siddaramaiah: ನೀವು 2 ಸಾವಿರ ಕೊಟ್ಟಿದ್ದಕ್ಕೆ ದೇವರ ದರ್ಶನ; ಧರ್ಮಸ್ಥಳದಲ್ಲಿ ಸಿದ್ದರಾಮಯ್ಯಗೆ ಸ್ತ್ರೀಯರ ಮೆಚ್ಚುಗೆ

Siddaramaiah

Women Appreciate CM Siddaramaiah In Dharmasthala For Gruha Lakshmi Scheme

ಮಂಗಳೂರು: ಲೋಕಸಭೆ ಚುನಾವಣೆ ಪ್ರಚಾರದ ಭರಾಟೆ ಮುಗಿದು, ತುಸು ನಿರಾಳರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ (DK Shivakumar) ಅವರು ಶನಿವಾರ (ಮೇ 25) ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ (Dharmasthala) ತೆರಳಿ, ದೇವರ ಆಶೀರ್ವಾದ ಪಡೆದರು. ಅಲ್ಲದೆ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರನ್ನೂ ಭೇಟಿಯಾದರು. ಇದೇ ವೇಳೆ, ಗೃಹಲಕ್ಷ್ಮೀ ಯೋಜನೆ ಅಡಿಯಲ್ಲಿ ಗೃಹಿಣಿಯರಿಗೆ ಮಾಸಿಕ 2 ಸಾವಿರ ರೂ. ನೀಡುವ ತೀರ್ಮಾನದ ಕುರಿತು ಸಿದ್ದರಾಮಯ್ಯ ಅವರಿಗೆ ಹಲವು ಹೆಣ್ಣುಮಕ್ಕಳು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಕುರಿತು ಸಿದ್ದರಾಮಯ್ಯ ಅವರೇ ಪೋಸ್ಟ್‌ ಮಾಡಿದ್ದಾರೆ.

ಧರ್ಮಸ್ಥಳ ಭೇಟಿ, ಮಹಿಳೆಯರ ಮೆಚ್ಚುಗೆ ಕುರಿತು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಸಿದ್ದರಾಮಯ್ಯ ಅವರು ಫೋಟೊಗಳ ಸಮೇತ ಪೋಸ್ಟ್‌ ಮಾಡಿದ್ದಾರೆ. “ಇಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇವರ ದರ್ಶನಕ್ಕೆ ತೆರಳುವ ಸಂದರ್ಭದಲ್ಲಿ ಕೆಲವು ಮಹಿಳೆಯರು ನಗುಮೊಗದಲ್ಲಿ ನನ್ನ ಬಳಿ ಬಂದು ಗೃಹಲಕ್ಷ್ಮೀ ಯೋಜನೆಯ 2,000 ರೂಪಾಯಿಯಿಂದ ನಾವು ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದೇವೆ, ನೀವು ಶಕ್ತಿ ಯೋಜನೆ ಜಾರಿ ಮಾಡಿದ್ದರಿಂದ ಇಂದು ನಾವು ದೂರದ ಊರಿನಿಂದ ದೇವರ ದರ್ಶನಕ್ಕೆ ಬರಲು ಅನುಕೂಲ ಆಗಿದೆ, ನಿಮಗೆ ಮಂಜುನಾಥ ಸ್ವಾಮಿ ದೀರ್ಘ ಆಯಸ್ಸು, ಆರೋಗ್ಯ ನೀಡಲಿ, ಬಡವರಿಗೆ ಇನ್ನಷ್ಟು ಅನುಕೂಲ ಆಗುವಂತಹ ಕಾರ್ಯಕ್ರಮಗಳು ನಿಮ್ಮಿಂದ ಜಾರಿಯಾಗಲಿ ಎಂದು ಆಶೀರ್ವದಿಸಿದರು. ಈ ದಿನ ದೇವರ ದರ್ಶನ ಭಾಗ್ಯದ ಜೊತೆಗೆ ಹತ್ತಾರು ತಾಯಂದಿರ ಆಶೀರ್ವಾದ ಪಡೆದ ಧನ್ಯತಾಭಾವ ನನ್ನದು” ಎಂಬುದಾಗಿ ಅವರು ಪೋಸ್ಟ್‌ ಮಾಡಿದ್ದಾರೆ.

ಸಿಎಂಗೆ ಪೂರ್ಣಕುಂಭ ಸ್ವಾಗತ

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸುತ್ತಿದ್ದಂತೆ ಅವರಿಗೆ ಧರ್ಮಸ್ಥಳದ ಕ್ಷೇತ್ರದ ವತಿಯಿಂದ ಪೂರ್ಣಕುಂಭ ಸ್ವಾಗತವನ್ನು ಮಾಡಲಾಯಿತು. ಧರ್ಮಸ್ಥಳದ ಪ್ರವೇಶ ದ್ವಾರದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿಗೆ ಭವ್ಯ ಸ್ವಾಗತ ಸಿಕ್ಕಿತು. ವಾದ್ಯ ಘೋಷಗಳೊಂದಿಗೆ ಬರಮಾಡಿಕೊಳ್ಳಲಾಯಿತು. ಕ್ಷೇತ್ರದ ಪರವಾಗಿ ಧರ್ಮಸ್ಥಳ ಧರ್ಮದರ್ಶಿಗಳಾದ ಡಾ. ವೀರೇಂದ್ರ ಹೆಗ್ಗಡೆ ಅವರ ಸಹೋದರ ಹರ್ಷೇಂದ್ರ ಹೆಗ್ಗಡೆ ಸ್ವಾಗತಿಸಿದರು.

ವಿಶೇಷ ಪೂಜೆ, ಡಾ. ವೀರೇಂದ್ರ ಹೆಗ್ಗಡೆ ಭೇಟಿ

ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಶ್ರೀಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಆಶೀರ್ವಾದವನ್ನು ಪಡೆದುಕೊಂಡರು. ಬಳಿಕ ಕೆಲ ಹೊತ್ತು ಚರ್ಚೆ ನಡೆಸಿದರು.

ಧರ್ಮಸ್ಥಳ ಭೇಟಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್‌, “ಸರ್ಕಾರದ ಶಕ್ತಿ ಯೋಜನೆಯಿಂದ ರಾಜ್ಯದ ಮೂಲೆ ಮೂಲೆಯಿಂದ ಹೆಚ್ಚಿನ ಭಕ್ತರು ಧರ್ಮಸ್ಥಳಕ್ಕೆ ಆಗಮಿಸಿ ಮಂಜುನಾಥನ ದರ್ಶನ ಪಡೆಯುತ್ತಿದ್ದಾರೆ ಎಂದು ಧರ್ಮದರ್ಶಿ ವೀರೇಂದ್ರ ಹೆಗ್ಗಡೆಯವರು ಸಂತೋಷ ಹಂಚಿಕೊಂಡರು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು. “ನಾನು ಹಾಗೂ ಮುಖ್ಯಮಂತ್ರಿಗಳು ಮಂಜುನಾಥನ, ಅಣ್ಣಪ್ಪ ಸ್ವಾಮಿ ಹಾಗೂ ಅಮ್ಮನವರ ದರ್ಶನ ಮಾಡಿದ್ದೇವೆ. ರಾಜ್ಯದಲ್ಲಿ ಮುಂಗಾರು ಪ್ರಾರಂಭವಾಗಿದ್ದು, ಉತ್ತಮ ಮಳೆ, ಬೆಳೆಯಾಗಿ ರಾಜ್ಯದ ಜನರು ಶಾಂತಿ, ನೆಮ್ಮದಿಯಿಂದ ಇರಲಿ ಎಂದು ಪ್ರಾರ್ಥಿಸಿದ್ದೇವೆ” ಎಂದು ತಿಳಿಸಿದರು.

ಇದನ್ನೂ ಓದಿ: CM Siddaramaiah: ಸಿದ್ದು, ಡಿಕೆಶಿ ಧರ್ಮಸ್ಥಳ ದೇವಸ್ಥಾನಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಜೈಶ್ರೀರಾಮ್‌, ಮೋದಿ ಕೀ ಜೈ ಘೋಷಣೆ!

Exit mobile version