Site icon Vistara News

Illicit liquor : ಕಲಘಟಗಿ ಭಾಗದಲ್ಲಿ ಅಕ್ರಮ ಮದ್ಯದ ಹಾವಳಿ, ಸಾರಾಯಿ ವಿರುದ್ಧ ಸಮರ ಸಾರಿದ ಮಹಿಳೆಯರು

Illicit liqour

#image_title

ಪರಶುರಾಮ ತಹಶೀಲ್ದಾರ್‌ ವಿಸ್ತಾರ ನ್ಯೂಸ್‌ ಹುಬ್ಬಳ್ಳಿ

ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಅನಧಿಕೃತ ಸಾರಾಯಿ ಮಾರಾಟ ದಂಧೆ ಜೋರಾಗಿ ನಡೆಯುತ್ತಿದೆ. ಅಕ್ರಮ ಮದ್ಯ ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ.

ತುಮರಿಕೊಪ್ಪ ಮತ್ತು ರಂಗಾಪುರ ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಜನಜಾಗೃತಿ ಮೂಡಿಸಿದ್ದಾರೆ. ಸಾರಾಯಿ ದಂಧೆಕೋರರ ವಿರುದ್ಧ ಸಮರ ಸಾರುವುದಾಗಿ ಧ್ವನಿವರ್ಧಕದ ಮೂಲಕ ಘೋಷಣೆ ಮಾಡಿದ್ದಾರೆ.

ಕಲಘಟಗಿಯ ಕೆಲವು ಬಾರ್‌ ಮಾಲಿಕರು ಕಾರುಗಳಲ್ಲಿ ಹಳ್ಳಿಗಳಿಗೆ ಸಾರಾಯಿ ಸಾಗಿಸುತ್ತಾರೆ. ಪ್ರತಿ ಹಳ್ಳಿಯಲ್ಲೂ ಕೆಲವು ಅನಧಿಕೃತ ಮಾರಾಟಗಾರರಿದ್ದು ಅವರಿಗೆ ಸಾರಾಯಿ ತಲುಪಿಸುತ್ತಾರೆ. ಅವರು ಗ್ರಾಮಗಳಲ್ಲಿ‌ನ ಪಾನ್‌ಶಾಪ್, ಕಿರಾಣಿ ಅಂಗಡಿ ಹಾಗೂ ಮನೆಗಳಲ್ಲಿ ಸಾರಾಯಿ ಮಾರಾಟ ಮಾಡುತ್ತಾರೆ. ಇದರಿಂದ ಹಳ್ಳಿಗಳಲ್ಲಿ ಕುಡುಕರ ಹಾವಳಿ ಹೆಚ್ಚಾಗಿದೆ. ಅನೇಕ ಬಾರಿ ಅಧಿಕಾರಿಗಳಿಗೆ ಮನವಿ ನೀಡಿದರೂ ಕ್ರಮ ಕೈಗೊಂಡಿಲ್ಲ ಎನ್ನುವುದು ಮಹಿಳೆಯರ ಆಕ್ರೋಶ.

ʻʻಕೆಲವೊಂದು ಪಟ್ಟಭದ್ರ ಹಿತಾಸಕ್ತಿಗಳು ಗ್ರಾಮದಲ್ಲಿ ಮದ್ಯ ಸರಬರಾಜು ಮಾಡುತ್ತಿವೆ. ಚುನಾವಣಾ ಸಂದರ್ಭದಲ್ಲಿ ಈ ಹಾವಳಿ ಮತ್ತಷ್ಟು ಜೆಚ್ಚಾಗಿದೆ. ಯುವಕರು, ಮಧ್ಯವಯಸ್ಕರು ಸಾರಾಯಿ ಚಟಕ್ಕೆ ಬಲಿಯಾಗುತ್ತಿದ್ದಾರೆ. ವ್ಯಾಜ್ಯ ಹೊಡೆದಾಟ ಕುಟುಂಬ ಕಲಹಗಳು ಬೀದಿಗೆ ಬರುತ್ತಿವೆ. ಮರ್ಯಾದಸ್ಥರು ಸಾಯಂಕಾಲ ಹೊರಗಡೆ ಬರದಂತ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಮಹಿಳೆಯರು ಆರೋಪಿಸಿದರು.

ಮದ್ಯ ರಾತ್ರಿ ಮತ್ತು ನಸುಕಿನ ಜಾವ ಕಾರುಗಳ ಮುಖಾಂತರ ಸಾರಾಯಿ ಬಾಕ್ಸ್‌ಗಳು ಗ್ರಾಮಕ್ಕೆ ಸರಬರಾಜು ಆಗುತ್ತಿದ್ದು ಅಬಕಾರಿ ಅಧಿಕಾರಿಗಳು ಇವರ ಮೇಲೆ ಕ್ರಮಕೈಗೊಳ್ಳೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಮಹಿಳೆಯರು ಅಬಕಾರಿ ಮತ್ತು ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಎಲ್ಲ ಭಾಗಗಳಲ್ಲೂ ಈಗ ಅಕ್ರಮ ಮದ್ಯ ಮತ್ತು ಮದ್ಯದ ಅಕ್ರಮ ಪೂರೈಕೆ ಒಂದೇ ಸಮನೆ ಹೆಚ್ಚುತ್ತಿದೆ. ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಎಲ್ಲ ಕಡೆ ನಡೆಯುತ್ತಿರುವ ಶೋಧ ಕಾರ್ಯಾಚರಣೆ ವೇಳೆ ಸಾಕಷ್ಟು ಪ್ರಮಾಣದಲ್ಲಿ ಮದ್ಯ ದೊರೆಯುತ್ತಿದೆ. ಇದು ಕೂಡಾ ದೊಡ್ಡ ಸಮಸ್ಯೆ ಸೃಷ್ಟಿಸಲಿದ್ದು, ಚುನಾವಣೆಯ ಸಂದರ್ಭದಲ್ಲಿ ಕುಡುಕರ ಹಾವಳಿ ವಿಪರೀತವಾಗಲಿದೆ.

ಇದನ್ನೂ ಓದಿ : Karnataka Election: ಮತದಾರರಿಗೆ ಹಂಚಲು ತಂದ ಕೋಟಿಗೂ ಅಧಿಕ ಮೌಲ್ಯದ ಆಭರಣ ಜಪ್ತಿ

Exit mobile version