Site icon Vistara News

Shakti Scheme: ಮೊಬೈಲ್‌ನಲ್ಲಿ ಆಧಾರ್‌ ತೋರಿಸಿ ಉಚಿತ ಬಸ್‌ ಪ್ರಯಾಣ ಮಾಡಬಹುದು

KSRTC Bus

ಬೆಂಗಳೂರು: ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಸಿಹಿ ಸುದ್ದಿ ನೀಡಿದೆ. ಇನ್ನು ಮುಂದೆ ಮೊಬೈಲ್‌ನಲ್ಲಿ ಆಧಾರ್‌ ಕಾರ್ಡ್‌ ತೋರಿಸಿ ಶಕ್ತಿ ಯೋಜನೆಯಡಿ (Shakti Scheme) ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡಬಹುದು ಎಂದು ತಿಳಿಸಿದೆ. ಉಚಿತ ಪ್ರಯಾಣಕ್ಕಾಗಿ ಮಹಿಳಾ ಪ್ರಯಾಣಿಕರು ಮೂಲ, ನಕಲು, ಡಿಜಿ ಲಾಕರ್ (Digilocker) ಪ್ರತಿ (ಹಾರ್ಡ್ ಮತ್ತು ಸಾಫ್ಟ್ ಕಾಪಿ) ತೋರಿಸಿ ಪ್ರಯಾಣ ಮಾಡಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಮಹಿಳಾ ಪ್ರಯಾಣಿಕರು ಮೊಬೈಲ್‌ನಲ್ಲಿ ಅಧಿಕೃತ ಗುರುತಿನ ಚೀಟಿ ತೋರಿಸಿದಾಗ್ಯೂ ಮೊಬೈಲ್‌ನಲ್ಲಿನ ಗುರುತಿನ ಚೀಟಿಯನ್ನು ಮಾನ್ಯ ಮಾಡುವುದಿಲ್ಲ ಎಂದು ಕೆಲವು ನಿರ್ವಾಹಕರು ಅನವಶ್ಯಕವಾಗಿ ಮಹಿಳೆಯರಿಗೆ ತೊಂದರೆಯುಂಟು ಮಾಡುತ್ತಿರುವ ಬಗ್ಗೆ ಪದೇ ಪದೇ ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಕೆಎಸ್‌ಆರ್‌ಟಿಸಿ ಸ್ಪಷ್ಟನೆ ನೀಡಿದೆ.

ಮಹಿಳಾ ಪ್ರಯಾಣಿಕರು ಮೊಬೈಲ್‌ನಲ್ಲಿ ಉಲ್ಲೇಖಿತ ಆದೇಶಗಳಲ್ಲಿ ತಿಳಿಸಿರುವಂತೆ ತೋರಿಸುವ ಯಾವುದಾದರೂ ಒಂದು ಅಧಿಕೃತ ಗುರುತಿನ ಚೀಟಿಯನ್ನು ಪರಿಗಣಿಸಿ ಶೂನ್ಯ ಮೊತ್ತದ ಮಹಿಳಾ ಟಿಕೆಟ್ ವಿತರಿಸಲು ಮತ್ತೊಮ್ಮೆ ಎಲ್ಲಾ ನಿರ್ವಾಹಕರಿಗೆ ತಿಳಿವಳಿಕೆ ನೀಡಲು ಹಾಗೂ ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣಕ್ಕೆ ಆಡಚಣೆಯಾಗದಂತೆ ಹಾಗೂ ದೂರುಗಳಿಗೆ ಆಸ್ಪದ ನೀಡದಂತೆ ಕ್ರಮ ವಹಿಸುವಂತೆ ಬೆಂಗಳೂರಿನ ಕ.ರಾ.ರ.ಸಾ. ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರು ತಿಳಿಸಿದ್ದಾರೆ.

ಇದನ್ನೂ ಓದಿ | HSRP Number Plate : ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಬೇಗ ಹಾಕಿಸಿ, ದಂಡ ತಪ್ಪಿಸಿ! 4 ದಿನ ಮಾತ್ರ ಬಾಕಿ

ಬಸ್‌ನಲ್ಲಿ ಪ್ರಯಾಣಿಸುವಾಗ ಒರಿಜಿನಲ್ ದಾಖಲೆ ಕಡ್ಡಾಯ ಎಂದು ಈ ಹಿಂದೆ ಹೊರಡಿಸಿದ್ದ ಆದೇಶದಲ್ಲಿ ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಇದನ್ನು ಪಾಲಿಸುವುದು ಸಾರಿಗೆ ಸಿಬ್ಬಂದಿಗೆ ಅನಿವಾರ್ಯವೂ ಆಗಿತ್ತು. ಅದಕ್ಕಾಗಿ ಒರಿಜನಲ್‌ ದಾಖಲೆಯನ್ನು ತಾರದೇ ಇರುವವರಿಗೆ ಉಚಿತ ಟಿಕೆಟ್‌ ನೀಡಲು ನಿರಾಕರಣೆ ಮಾಡಲಾಗುತ್ತಿತ್ತು. ಜತೆಗೆ ಅವರಿಗೆ ದುಡ್ಡು ಕೊಟ್ಟು ಪ್ರಯಾಣ ಮಾಡುವಂತೆ ಸೂಚನೆ ನೀಡಲಾಗುತ್ತಿತ್ತು. ಇದರಿಂದ ಮಹಿಳಾ ಪ್ರಯಾಣಿಕರು ಆಕ್ರೋಶ ಹೊರಹಾಕುತ್ತಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೂನ್‌ 11ರಂದು ಅಧಿಕೃತವಾಗಿ ಶಕ್ತಿ ಯೋಜನೆಗೆ ಚಾಲನೆ ನೀಡಿದ್ದರು. ಆದರೆ, ರಾಜ್ಯಾದ್ಯಂತ ಹಲವು ಗೊಂದಲಗಳು ಮಾತ್ರ ಮುಂದುವರಿದಿದ್ದವು. ಬಸ್‌ನಲ್ಲಿ ಮುದ್ರಿತ ಒರಿಜಿನಲ್‌ ಡಾಕ್ಯುಮೆಂಟ್‌ (Original Document) ಇದ್ದರೆ ಮಾತ್ರ ಉಚಿತ ಟಿಕೆಟ್‌ ಕೊಡುವುದಾಗಿ ಸಾರಿಗೆ ಸಿಬ್ಬಂದಿ ಹೇಳುತ್ತಿರುವುದು ಸಾರ್ವಜನಿಕವಾಗಿ ವ್ಯಾಪಕ ಟೀಕೆಗೂ ಗುರಿಯಾಗಿತ್ತು. ಆದರೆ, ಈ ಬಗ್ಗೆ ಎಚ್ಚೆತ್ತಿರುವ ಸಾರಿಗೆ ನಿಗಮಗಳು, ಮೊಬೈಲ್‌ನಲ್ಲಿ ಗುರುತಿನ ಚೀಟಿ ತೋರಿಸಿದರೂ ಮಾನ್ಯ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿವೆ.

ಇದನ್ನೂ ಓದಿ | Fight in Bus : ಶಕ್ತಿ ಯೋಜನೆ ಎಫೆಕ್ಟ್‌; ಬಸ್‌ ಸೀಟ್‌ಗಾಗಿ ಬಿಗ್‌ ಕಿತ್ತಾಟ; ಚಪ್ಪಲಿಯಿಂದ ಹೊಡೆದಾಟ

ಸದ್ಯ ಪ್ರಯಾಣಕ್ಕೆ ಏನು ದಾಖಲೆ ಬೇಕು?

ಮಹಿಳೆಯರು ಈ ಉಚಿತ ಪ್ರಯಾಣಕ್ಕಾಗಿ ಆಧಾರ್‌ ಕಾರ್ಡ್‌, ವೋಟರ್‌ ಐಡಿ, ಚಾಲನಾ ಪರವಾನಗಿ, ವಾಸಸ್ಥಳ ನಮೂದಾಗಿರುವ ಗುರುತಿನ ಚೀಟಿ, ವಿಶೇಷಚೇತನ, ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ನೀಡಿರುವ ಗುರುತಿನ ಪತ್ರ ಇಲ್ಲವೇ ಇವುಗಳಲ್ಲಿ ಯಾವುದಾದರೂ ಒಂದು ಗುರುತಿನ ಪತ್ರವನ್ನು ಭೌತಿಕವಾಗಿ ಅಥವಾ ಡಿಜಿಲಾಕರ್‌ನಲ್ಲಿ ಇಟ್ಟುಕೊಂಡು ಹೋಗಬೇಕು. ನೀವು ತೋರಿಸುವ ಗುರುತಿನ ಚೀಟಿಗಳಲ್ಲಿ ನಿಮ್ಮ ಫೋಟೋ ಮತ್ತು ವಾಸಸ್ಥಳವು ಕಡ್ಡಾಯವಾಗಿ ನಮೂದಾಗಿರಬೇಕು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version