ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಯಲ್ಲಿ (Congress Guarantee scheme) ಒಂದಾಗಿರುವ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ “ಶಕ್ತಿ” ಯೋಜನೆಗೆ (Shakti Scheme) ರಾಜ್ಯಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಈವರೆಗೆ ಮಹಿಳೆಯರು ತಮ್ಮ ಆಧಾರ್ ಕಾರ್ಡ್ (Aadhaar Card) ಸಹಿತ ಗುರುತಿನ ಚೀಟಿಯನ್ನು ತೋರಿಸಿ ಪ್ರಯಾಣಿಸಬಹುದಿತ್ತು. ಆದರೆ, ಸರ್ಕಾರ ಈಗ ಸ್ಮಾರ್ಟ್ ಕಾರ್ಡ್ ಮಾಡಿಸಲು ಮುಂದಾಗಿದ್ದು, ಸಮಯದ ಗಡುವನ್ನೂ ನೀಡಿದೆ. ಇನ್ನು ಈ ಸ್ಮಾರ್ಟ್ ಕಾರ್ಡ್‌ಗೆ ಮಹಿಳೆಯರೇ ಹಣ ಪಾವತಿ ಮಾಡಬೇಕು ಎಂದು ಸರ್ಕಾರ ತೀರ್ಮಾನಿಸಿದೆ. ಗುರುವಾರ (ಸೆಪ್ಟೆಂಬರ್ 7) ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.
ಜನರೇ ದುಡ್ಡು ಕೊಡಬೇಕು!
ಶಕ್ತಿ ಯೋಜನೆಯಡಿ ಪ್ರಯಾಣಿಕರಿಗೆ ಸ್ಮಾರ್ಟ್ ಕಾರ್ಡ್ ಸೇವಾ ಶುಲ್ಕ 14.15 ರೂ. ನಿಗದಿ ಮಾಡಿ ಅನುಮೋದನೆ ನೀಡಲಾಗಿದೆ. ಈ ಮೊತ್ತವನ್ನು ಸಾರ್ವಜನಿಕರೇ ಭರಿಸಬೇಕು ಎಂದು ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದಾರೆ.
ಇದನ್ನೂ ಓದಿ: Cabinet Meeting : ಮುಂದಿನ ವಾರ ಕ್ಯಾಬಿನೆಟ್‌ನಲ್ಲಿ ʻಬರ ತಾಲೂಕುʻ ಘೋಷಣೆ
ಆರು ತಿಂಗಳು ಮಾತ್ರವೇ ಗಡುವು!
ಮಹಿಳೆಯರು ಈ ಸ್ಮಾರ್ಟ್ ಕಾರ್ಡ್ ಮಾಡಿಸಿಕೊಳ್ಳಲು ರಾಜ್ಯ ಸರ್ಕಾರ 6 ತಿಂಗಳ ಗಡುವನ್ನು ನಿಗದಿಪಡಿಸಿದೆ. ಈ ಆರು ತಿಂಗಳಲ್ಲಿ ಮಹಿಳೆಯರು ನಿಗದಿತ ಕೇಂದ್ರಕ್ಕೆ ಹೋಗಿ ಸ್ಮಾರ್ಟ್ ಕಾರ್ಡ್ ಅನ್ನು ಮಾಡಿಸಿಕೊಳ್ಳಬೇಕು. ಒಂದು ವೇಳೆ ಈ ಗಡುವು ಮುಗಿದರೂ ಮಾಡಿಸಿಕೊಂಡಿಲ್ಲ ಎಂದಾದರೆ ಉಚಿತ ಪ್ರಯಾಣದ ಭಾಗ್ಯ ಮಹಿಳೆಯರಿಗೆ ಸಿಗುವುದಿಲ್ಲ. ಅಂಥವರು ದುಡ್ಡು ಕೊಟ್ಟು ಪ್ರಯಾಣ ಮಾಡಬೇಕಾಗುತ್ತದೆ.
ಕೆಎಸ್‌ಆರ್‌ಟಿಸಿ ಬಸ್ ಖರೀದಿ
ಕೆಎಸ್‌ಆರ್‌ಟಿಸಿಯಲ್ಲಿ 100 ಕೋಟಿ ರೂ. ವೆಚ್ಚದಲ್ಲಿ 250 ಹೊಸ ಬಸ್, ವಾಯವ್ಯ ಸಾರಿಗೆಯಲ್ಲಿ 150 ಕೋಟಿ ರೂ. ವೆಚ್ಚದಲ್ಲಿ 375 ಹೊಸ ಬಸ್, ಬಿಎಂಟಿಸಿಯಲ್ಲಿ 150 ಕೋಟಿ ರೂ. ವೆಚ್ಚದಲ್ಲಿ ಎಸಿ ಎಲೆಕ್ಟ್ರಿಕ್ ಬಸ್, ಕಲ್ಯಾಣ ಕರ್ನಾಟಕ ಸಾರಿಗೆಯಲ್ಲಿ 100 ಕೋಟಿ ರೂ. ವೆಚ್ಚದಲ್ಲಿ 250 ಹೊಸ ಬಸ್‌ಗಳನ್ನು ಖರೀದಿ ಮಾಡಲು ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಇದನ್ನೂ ಓದಿ: Cabinet Meeting : ಸಮವಸ್ತ್ರ ಪೂರೈಸಿದ್ದ ಕೇಂದ್ರೀಯ ಭಂಡಾರದ ವಿರುದ್ಧ ತನಿಖೆ; ಬಿಜೆಪಿ ವಿರುದ್ಧ ಮತ್ತೊಂದು ಅಸ್ತ್ರ
ಹೊಸ ಬಸ್ ಖರೀದಿ ಮಾಡುವ ಮೂಲಕ ಹೆಚ್ಚುವರಿ ಬಸ್ ಸೌಕರ್ಯ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದಂತಿದೆ. ಇದರಿಂದಾಗಿ ಈಗ ಶಕ್ತಿ ಯೋಜನೆಯಿಂದ ಉಂಟಾಗಿರುವ ರಶ್ ಸಮಸ್ಯೆ ಸ್ವಲ್ಪವಾದರೂ ತಗ್ಗಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.