ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರವು ಮಹಿಳೆಯರ ಸಬಲೀಕರಣಕ್ಕಾಗಿ ಶಕ್ತಿ ಯೋಜನೆ, ಗೃಹಲಕ್ಷ್ಮಿ ಯೋಜನೆಯನ್ನು ಜಾರಿ ಮಾಡಿದೆ. ಆದರೆ ನೊಂದ ಮಹಿಳೆಯರಿಗೆ ಧೈರ್ಯ ತುಂಬುವ, ಸಹಾಯ ಮಾಡುವ ನೂರಾರು ಮಹಿಳೆಯರ ಉದ್ಯೋಗವನ್ನು ಕಸಿದುಕೊಳ್ಳಲು ಮುಂದಾಗಿದೆ. ಸೇಫ್ ಸಿಟಿ ಯೋಜನೆಯಡಿ ಬೆಂಗಳೂರು ನಗರದ ವಿವಿಧ ಠಾಣೆಗಳಲ್ಲಿ ಮಹಿಳಾ ಹೆಲ್ಪ್ ಡೆಸ್ಕ್‌ನಲ್ಲಿ (Womens Help Desk) ಸುಮಾರು 250 ಮಂದಿ ಸಮಾಲೋಚಕಿಯರು ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ಅವರ ಕೆಲಸವನ್ನು ಈ ವರ್ಷದ ಅಂತ್ಯಕ್ಕೆ ಅಂತಿಮಗೊಳಿಸಿ ಎಲ್ಲ ಮಹಿಳಾ ಉದ್ಯೋಗಿಗಳನ್ನು ರಿಲೀವ್ ಮಾಡಲಾಗುತ್ತಿದೆ.
ಸಂಕಷ್ಟದಲ್ಲಿರುವ ಹಾಗೂ ದೌರ್ಜನ್ಯಕ್ಕೆ ಒಳಗಾಗಿ, ನ್ಯಾಯಕ್ಕಾಗಿ ಪೊಲೀಸ್ ಠಾಣೆಗಳಿಗೆ ಬರುವ ನೊಂದ ಮಹಿಳೆಯರಿಗೆ ಮಾನಸಿಕವಾಗಿ ಧೈರ್ಯ ತುಂಬಿ ಸಾಂತ್ವನ ತುಂಬುದು ಇದರ ಉದ್ದೇಶವಾಗಿತ್ತು. ಕೇಂದ್ರ ಸರ್ಕಾರದ ನಿರ್ಭಯಾ ಯೋಜನೆಯಡಿ ಮೂರು ವರ್ಷಗಳ ಹಿಂದೆ ಬೆಂಗಳೂರಿನ ಎಲ್ಲಾ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಠಾಣೆಗಳಲ್ಲಿ ಆರಂಭಿಸಲಾಗಿತ್ತು.
ನಿರ್ಭಯ ನಿಧಿಯ ಅಡಿಯಲ್ಲಿ ಮೊದಲ ಹಂತದಲ್ಲಿ ಈ ಯೋಜನೆಯ ಅನುಷ್ಠಾನಕ್ಕಾಗಿ ಅಂದಾಜು ವೆಚ್ಚ ರೂ 2919.55 ಕೋಟಿಗಳಲ್ಲಿ 8 ನಗರಗಳನ್ನು ಗುರುತಿಸಲಾಗಿತ್ತು. ದೆಹಲಿ, ಕೊಲ್ಕತ್ತಾ, ಮುಂಬೈ, ಚೆನೈ ಸೇರಿ ಬೆಂಗಳೂರು ಈ ಪೈಕಿ ಆಯ್ಕೆ ಆಗಿತ್ತು. ಸಂಕಷ್ಟದಲ್ಲಿರುವ ಮಹಿಳೆಯರಿಗೆ ಅವರ ವೈಯಕ್ತಿಕ ವಿಚಾರ, ಗೌಪ್ಯತೆ ಮತ್ತು ಗೌರವವನ್ನು ಕಾಪಾಡಿಕೊಂಡು ಸಂಕಷ್ಟದ ಪರಿಸ್ಥಿತಿಯಲ್ಲಿ ಸಲಹೆ ನೀಡಲಾಗುತ್ತಿತ್ತು.
ಮಹಿಳಾ ದೂರುದಾರರು ಹಾಗೂ ಪೊಲೀಸರ ನಡುವೆ ಕೊಂಡಿಯಂತೆ ಕೆಲಸ ಮಾಡುತ್ತಿದ್ದ 250 ಮಹಿಳಾ ಸಮಾಲೋಚಕಿಯರನ್ನು ಮುಂದಿನ ಜನವರಿ 1ರಿಂದ ಕರ್ತವ್ಯಕ್ಕೆ ಹಾಜರಾಗದಂತೆ ನಗರ ಪೊಲೀಸ್ ಇಲಾಖೆ ಸುತ್ತೋಲೆ ಹೊರಡಿಸಿದ್ದಾರೆ.
ಕೆಲಸ ಮುಂದುವರೆಸಿಕೊಳ್ಳಲಾಗದೆ ಸ್ಥಗಿತಗೊಳಿಸುತ್ತಿರುವ ಉದ್ದೇಶ ನಿರ್ಭಯಾ ನಿಧಿಯಲ್ಲಿ ಮೀಸಲಿಟ್ಟಿದ್ದ 200 ಕೋಟಿಗೂ ಹೆಚ್ಚು ಅನುದಾನ ಖಾಲಿಯಾಗಿದೆ ಎನ್ನಲಾಗಿದೆ. ಅದರ ಜತೆಗೆ ನಿಗದಿತ ಗಡುವು ಮುಗಿದ ಹಿನ್ನೆಲೆಯಲ್ಲಿ ಎಲ್ಲಾ ಮಹಿಳಾ ಸಮಾಲೋಚಕಿಯರನ್ನು ಹುದ್ದೆಯಿಂದ ತೆರವುಗೊಳಿಸಲು ನಿರ್ಧರಿಸಲಾಗಿದೆ. ಸರ್ಕಾರದ ಈ ನಿರ್ಧಾರ ಈ ಮಹಿಳಾ ಸಮಾಲೋಚಕಿಯರ ಆರ್ಥಿಕ ಸ್ಥಿತಿ ಮೇಲೆ ದುಷ್ಪರಿಣಾಮ ಬೀರಲಿದೆ. ಆದರೆ ಈ ಯೋಜನೆಯನ್ನು ಮುಂದುವರೆಸಿಕೊಂಡು ಹೋಗಬೇಕೆಂದು ಮನವಿಗಳು ಬಂದಿವೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.