Site icon Vistara News

Congress Guarantee: ಗ್ಯಾರಂಟಿ ಈಡೇರಿಸದಿದ್ದರೆ ಮಹಿಳೆಯರು ಬೀದಿಗೆ ಬರೋದು ಗ್ಯಾರಂಟಿ ಎಂದ ಬೊಮ್ಮಾಯಿ

womens-will-come-to-street-if-congress-fulfils-guarantees-given-during-election

womens-will-come-to-street-if-congress-fulfils-guarantees-given-during-election

ಶಿಗ್ಗಾಂವಿ (ಹಾವೇರಿ): ಕಾಂಗ್ರೆಸ್‌ ಚುನಾವಣೆಗೆ ಮೊದಲು ನೀಡಿದ ಐದು ಗ್ಯಾರಂಟಿಗಳನ್ನು (Congress Guarantee) ಈಡೇರಿಸದೆ ಹೋದರೆ ಮಹಿಳೆಯರು ಗ್ಯಾರಂಟಿ ಕಾರ್ಡ್‌ ಹಿಡಿದುಕೊಂಡು ಬೀದಿಗೆ ಇಳಿಯುವುದು ಗ್ಯಾರಂಟಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಅವರು ಹೇಳಿದ್ದಾರೆ.

ಶಿಗ್ಗಾಂವ ಪಟ್ಟಣದಲ್ಲಿ ಗುರುವಾರ ನಡೆದ ಮತದಾರರಿಗೆ ಕೃತಜ್ಞತಾ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಮತ್ತು ಮಾಧ್ಯಮಗಳ ಜತೆ ಮಾತನಾಡುತ್ತಾ ಈ ವಿಚಾರವನ್ನು ಹೇಳಿದರು.

ʻಅಕ್ಕಿ, ಕರೆಂಟು ನನಗೂ ಸಿಗುತ್ತದೆ, ನಿಮಗೂ ಸಿಗುತ್ತದೆ ಎಂದಿದ್ದರು. ಈಗ ಕಂಡಿಷನ್ ಹಾಕಲು ಮುಂದಾಗಿದ್ದಾರೆ. ಈಗ ಅವರ ಬಣ್ಣ ಏನು ಎಂದು ಗೊತ್ತಾಗುತ್ತಿದೆ. ಅದಕ್ಕೆ ಅಂದೇ ನಾನು ಹೇಳಿದ್ದೆ. ಮೇ ಹತ್ತರ ವರೆಗೂ ಗ್ಯಾರಂಟಿ, ಆಮೇಲೆ ಗಳಗಂಟಿ ಅಂತ. ಆದರೆ, ಕಾಂಗ್ರೆಸ್‌ ನಾಯಕರು ಇದರಿಂದ ತಪ್ಪಿಸಿಕೊಳ್ಳುವಂತಿಲ್ಲ. ಇನ್ನು ಸ್ವಲ್ಪ ದಿನ ಮಹಿಳೆಯರು ಕಾರ್ಡ್ ಹಿಡಿದುಕೊಂಡು ರಸ್ತೆಗೆ ಬರುತ್ತಾರೆ. ಆಮೇಲೆ ಗೊತ್ತಾಗುತ್ತದೆ ಅವರಿಗೆ ನಿಜವಾದ ಬಿಸಿʼʼ ಎಂದು ಹೇಳಿದರು ಬಸವರಾಜ ಬೊಮ್ಮಾಯಿ.

ʻʻಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮೊನ್ನೆ ಮೊದಲ ಸಚಿವ ಸಂಪುಟ ಸಭೆ ಅಯಿತು. ಮೊದಲ ಸಚಿವ ಸಂಪುಟ ಸಭೆಯಲ್ಲಿ ಕಾಂಗ್ರೆಸ್ ನೀಡಿದ್ದ ಎಲ್ಲ ಗ್ಯಾರಂಟಿಗೆ ಆದೇಶ ಮಾಡುತ್ತೇವೆ ಎಂದಿದ್ದರು. ಇವರಾದರೂ ಜನರಿಗೆ ಏನಾದರೂ ಮಾಡಲಿ ಎಂದು ನಾನು ಖುಷಿ ಆಗಿದ್ದೆ. ಆದರೆ ಸಂಪುಟ ಸಭೆಯ ಬಳಿಕ ಪತ್ರಕರ್ತರು ಪ್ರಶ್ನೆ ಕೇಳುವಾಗ ತಡಬಡಿಸಿ, ಪ್ರಶ್ನೆ ಕೇಳಿದರೆ ಹಿಂದಿನ ಇತಿಹಾಸ ಹೇಳಿ ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆʼʼ ಎಂದರು. ಹಳೆಯದ್ದು ಎಲ್ಲ ಬೇಡ, ಗ್ಯಾರಂಟಿಗಳನ್ನು ಯಾವಾಗ ಮಾಡುತ್ತೀರಿ ಅಂತ ಕೇಳಿದರೆ, ಮುಂದಿನ ಸಂಪುಟ ಸಭೆಯಲ್ಲಿ ಮಾಡುತ್ತೇವೆ ಎಂದು ಹೇಳಿದ್ದಾರೆ.

ಮದುವೆಯಾದ ಸೊಸೆ ಕೈಲಿ ಕೀಲಿ ಇರಲಿಲ್ಲವಂತೆ!

ʻʻಕಾಂಗ್ರೆಸ್‌ ನಾಯಕರೆಲ್ಲ ಮುಖ್ಯಮಂತ್ರಿ ಆಗುವುದಕ್ಕೆ, ಮಂತ್ರಿ ಆಗುವುದಕ್ಕೆ ಬಡಿದಾಡುತ್ತಿದ್ದಾರೆ. ಆದರೆ ಮಂತ್ರಿ ಆದವರಿಗೇ ಇನ್ನೂ ಜವಾಬ್ದಾರಿ ಕೊಟ್ಟಿಲ್ಲ. ಹೊಸದಾಗಿ ಮದುವೆಯಾದ ಸೊಸೆ ಕೈಯಲ್ಲಿ ಕೀಲಿ ಇರಲ್ಲವಂತೆ ಅನ್ನೋ ಹಾಗೆ, ಸೊಸೆ ಕೈಯಲ್ಲಿ ಕೀಲಿನು ಇಲ್ಲ, ಜವಾಬ್ದಾರಿನೂ ಇಲ್ಲʼʼ ಎಂದು ಬೊಮ್ಮಾಯಿ ವ್ಯಂಗ್ಯವಾಡಿದರು.

ʻʻಮೊನ್ನೆ ನಡೆದ ಅಸೆಂಬ್ಲಿಯಲ್ಲಿ ನಾನು ಸಿದ್ದರಾಮಯ್ಯನವರ ಜತೆ ಮಾತನಾಡುತ್ತಾ ಮಂತ್ರಿಗಳಿಗೆ ಖಾತೆ ನೀಡಿ ಕೇಳಿದೆ. ನೀವು ಚಿಂತೆ ಮಾಡಬೇಡಿ ಅಂತ ಹೇಳಿದರು. ನನಗೆ ಚಿಂತೆ ಇಲ್ಲ. ನಿಮ್ಮ ಸಚಿವರು ಮಾತನಾಡಿ ಅಂತ ಹೇಳಿದರು, ಅದಕ್ಕೆ ಕೇಳಿದೆ ಎಂದಿದ್ದೆ. ಸಚಿವರನ್ನಾಗಿ ಸುಮ್ಮನೆ ಕೂರಿಸಿದ್ದಾರೆʼʼ ಎಂದರು.

ರಾಜ್ಯ ಸರ್ಕಾರ ಈಗ ಆಸ್ಪತ್ರೆ, ರಸ್ತೆ, ನೀರಿನ ಅಭಿವೃದ್ಧಿ ಕೆಲಸವನ್ನು ನಿಲ್ಲಿಸಿದೆ. ಯಾಕೆಂದರೆ ಗ್ಯಾರಂಟಿಗಳಿಗೆ ದುಡ್ಡು ಕೊಡಲು ಹಣ ಹೊಂದಿಸಬೇಕಾಗಿದೆ ಎಂದು ಬೊಮ್ಮಾಯಿ ಗೇಲಿ ಮಾಡಿದರು.

ತಾಕತ್ತಿದ್ದರೆ ಮೊದಲು ಎಸ್‌ಡಿಪಿಐ ಬ್ಯಾನ್‌ ಮಾಡಲಿ

ʻʻಮುಂದಿನ 5 ತಿಂಗಳಲ್ಲಿ ರಾಜ್ಯ ರಾಜ್ಯಕಾರಣದ ಚಿತ್ರಣ ಬದಲಾಗಲಿದೆ, ಸರ್ಕಾರ ಹೋಗುತ್ತಿರುವ ರೀತಿ ನೋಡಿದರೆ ದ್ವೇಷ ರಾಜಕಾರಣಕ್ಕೆ ಮುನ್ನುಡಿ ಬರೆದಂತಿದೆ. ನಮ್ಮ ಕಾರ್ಯಕರ್ತರ ಮೇಲೆ ಕೇಸ್ ಹಾಕಲು ಈಗಲೇ ಶುರು ಮಾಡಿದ್ದಾರೆʼʼ ಎಂದರು. ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆತೆ ಧಕ್ಕೆ ಬರುವಂತಹ ಸಂಘಟನೆಗಳಿಗೆ ಬ್ಯಾನ್ ಮಾಡುವ ವಿಚಾರದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು. ʻʻಮೊದಲು SDPI ಬ್ಯಾನ್ ಮಾಡಲಿ ಆಮೇಲೆ ಉಳಿದಿದ್ದನ್ನು ಮಾತನಾಡುತ್ತೇನೆʼʼ ಎಂದು ಉತ್ತರಿಸಿದರು.

ಲೋಕಸಭಾ ಚುನಾವಣೆಯಲ್ಲಿ 25ಕ್ಕೂ ಹೆಚ್ಚು ಸೀಟು ಗೆಲ್ಲುವ ವಿಶ್ವಾಸ

ವಿಧಾಸಭಾ ಫಲಿತಾಂಶದ ನಂತರ ಸುಮ್ಮನೆ ಕುಳಿತಿಲ್ಲ, ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ಮುಂಬರುವ ಲೋಕಸಭಾ ಚುನಾವಣೆಯಲ್ಲಿ 25ಕ್ಕೂ ಹೆಚ್ಚು ಸೀಟುಗಳನ್ನು ಕರ್ನಾಟಕದಲ್ಲಿ ಗೆಲ್ಲುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಈ ದೇಶದ ಪ್ರಧಾನಿ ಆಗಬೇಕಿದೆ ಎಂದು ಬೊಮ್ಮಾಯಿ ಹೇಳಿದರು.

ಜೀವನದ ಕೊನೆವರೆಗೂ ಶಿಗ್ಗಾಂವಿ ಜನರ ಸೇವೆ

ʻʻನನ್ನ ಉಸಿರು ಇರುವವರೆಗೂ ಶಿಗ್ಗಾವಿ ಕೇತ್ರದ ಜನರೊಂದಿಗೆ ಇರುತ್ತೇನೆ, ನನ್ನ ಜೀವನದ ಕೊನೆ ಉಸಿರಿನವರೆಗೂ ಕ್ಷೇತ್ರದ ಸೇವೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕ್ಷೇತ್ರದ ಜನರ ಜೊತೆ ಕಳೆಯಲು ಅವಕಾಶ ಸಿಕ್ಕಿದೆ. ನಿಮ್ಮ ಜೊತೆ ಕಾಲ ಕಳೆಯುವುದಕ್ಕೆ ಆಗಿರಲಿಲ್ಲ. ಅದಕ್ಕೆ ದೇವರು ಸ್ವಲ್ಪ ವಿಶ್ರಾಂತಿ ಕೊಟ್ಟಿದ್ದಾನೆ. ಅಂತಹ ಶಕ್ತಿ ನಿಮ್ಮಲ್ಲಿ ಇದೆ. ಅಲ್ಲಿ ಬೇಡ, ಇಲ್ಲಿಗೆ ಬನ್ನಿ ಎಂದು ಕರೆಯಿಸಿಕೊಂಡಿದ್ದೀರಿ. ನಿಮಗೆ ಬೇಸರ ಆಗುವ ಹಾಗೆಯೇ ನಿಮ್ಮ ಊರು, ಕೆರೆಗಳಲ್ಲಿ ಓಡಾಡುತ್ತೇನೆ. ನಿಮ್ಮನ್ನು ನೀವು ಈ ಚುನಾವಣೆಯಲ್ಲಿ ಗೆಲ್ಲಿಸಿಕೊಂಡಿದ್ದೀರಿ ಎಂದು ಭಾವುಕವಾಗಿ ಬೊಮ್ಮಾಯಿ‌ ನುಡಿದರು.

ಇದನ್ನೂ ಓದಿ: Congress Guarantee: ಗ್ಯಾರಂಟಿ ಕಾರ್ಡ್‌ಗೆ ಕಂಡೀಷನ್ ಹಾಕಿದ್ರೆ ಹುಷಾರ್‌; ಜೂನ್‌ 1ರಿಂದ ಹೋರಾಟವೆಂದ ಪ್ರತಾಪ್‌ ಸಿಂಹ


Exit mobile version