ಬೆಂಗಳೂರು: ನಾನು ಕೆಪಿಸಿಸಿಯ ಯಾವುದೇ ಸ್ಥಾನಮಾನದ ಆಕಾಂಕ್ಷಿ ಅಲ್ಲ. ನಾನು ಆಲ್ ಇಂಡಿಯಾ ಕಾಂಗ್ರೆಸ್ ಜನರಲ್ ಸೆಕ್ರೆಟರಿ (All India Congress General Secretary) ಆಗಿದ್ದವನು. ಈಗ ಕೆಪಿಸಿಸಿ ಉಪಾಧ್ಯಕ್ಷ, ಕಾರ್ಯಾಧ್ಯಕ್ಷನಾಗೋದಿಲ್ಲ. ಡಿ.ಕೆ. ಶಿವಕುಮಾರ್ (DK Shivakumar) ಕೆಪಿಸಿಸಿ ಅಧ್ಯಕ್ಷರಾಗಿ (KPCC president) ಕಾರ್ಯನಿರ್ವಹಿಸುತ್ತಿದ್ದಾರೆ. ನಾನು ಅವರ ಕೈಕೆಳಗೆ ಕೆಲಸ ಮಾಡೋದಿಲ್ಲ. ನಾನು ರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡಿದವನು. ಕಾರ್ಯಾಧ್ಯಕ್ಷ ಹುದ್ದೆಯನ್ನು ಬಯಸುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ (BK Hariprasad) ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಬಿ.ಕೆ. ಹರಿಪ್ರಸಾದ್, ಚುನಾವಣೆ ಬಳಿಕ ಸ್ಥಾನ ಬದಲಾವಣೆ ಬಗ್ಗೆ ಮಾತನಾಡಲು ನಾನು ಜ್ಯೋತಿಷಿ ಅಲ್ಲ. ನನಗೆ ರಾಜ್ಯಕ್ಕಿಂತ, ರಾಷ್ಟ್ರ ರಾಜಕಾರಣ ಮುಖ್ಯ. ನರೇಂದ್ರ ಮೋದಿ ಅವರನ್ನು ಪ್ರಧಾನಿ ಸ್ಥಾನದಿಂದ ಕೆಳಗಿಸಬೇಕು ಎಂದು ಹೇಳಿದರು.
ಇದನ್ನೂ ಓದಿ: DK Shivakumar : ಅಣ್ಣ ಹೇಳಿದ್ದು ತಮ್ಮ ಕೇಳಬೇಕು; ಎಚ್‌ಡಿಕೆ ವಾಮ ಮಾರ್ಗ ಹೇಳಿಕೆಗೆ ಡಿಕೆಶಿ ತಿರುಗೇಟು!
ಸಚಿವ ಸ್ಥಾನ ಕೊಡಲಿಲ್ಲ ಅಂತ ಅಸಮಾಧಾನ ಇಲ್ಲ. ನಾನು ಎಂದೂ ಸಚಿವ ಸ್ಥಾನ ಕೇಳಿಲ್ಲ. ಇರುವ ವ್ಯವಸ್ಥೆ ವಿರುದ್ಧ ಅಷ್ಟೇ ನನ್ನ ಅಸಮಾಧಾನ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ಥಾಪಿಸಿದ ಮೇಲ್ಮನೆಯನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಸರ್ಕಾರದ ಕೆಲ ವಿಚಾರದ ಬಗ್ಗೆ ಅಷ್ಟೇ ನನ್ನ ಅಸಮಾಧಾನ ಎಂದು ಹೇಳಿದರು.
ದೆಹಲಿ ಸಭೆಯು ಚೆನ್ನಾಗಿ ನಡೆಯಿತು. ಮುಂದಿನ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಹೇಗೆ ಭಾಗಿಯಾಗಬೇಕು ಎಂಬ ಬಗ್ಗೆ ಚರ್ಚೆಯಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಭೆ ನಡೆದಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸುವುದು ನಮ್ಮ ಗುರಿ ಎಂದು ಬಿ.ಕೆ. ಹರಿಪ್ರಸಾದ್ ಹೇಳಿದರು.
ಸಚಿವರೋ, ಮಾಜಿ ಸಚಿವರ ಸ್ಪರ್ಧೆಯೋ?
ಸಚಿವರನ್ನು ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆದಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಬಿ.ಕೆ. ಹರಿಪ್ರಸಾದ್, ಲೋಕಸಭೆ ಚುನಾವಣೆ ಗೆಲ್ಲುವ ಜವಾಬ್ದಾರಿ ನೀಡಲಾಗಿದೆ. ಈ ವಿಚಾರವಾಗಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗೆ 28 ಕ್ಷೇತ್ರವನ್ನೂ ಗೆಲ್ಲಿಸುವ ಟಾರ್ಗೆಟ್ ನೀಡಲಾಗಿದೆ. ಮಂತ್ರಿಗಳನ್ನು ನಿಲ್ಲಿಸುತ್ತಾರೋ, ಮಾಜಿ ಮಂತ್ರಿಗಳನ್ನು ನಿಲ್ಲಿಸುತ್ತಾರೋ? ಎಲ್ಲವನ್ನೂ ಕಾದು ನೋಡೋಣ ಎಂದು ಬಿ.ಕೆ. ಹರಿಪ್ರಸಾದ್ ಹೇಳಿದರು.
ಇದನ್ನೂ ಓದಿ: BPL Card : ಸ್ವಂತ ಕಾರಿದೆಯಾ? ನಿಮಗೆ BPL ಕಾರ್ಡ್ ಇಲ್ಲ; ಯೆಲ್ಲೋ ಬೋರ್ಡ್ ಇದ್ದೋರು ಅಪ್ಲೈ ಮಾಡಿ!
ಸತ್ಯಕ್ಕೆ ಜಯ
ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೋಲಾರದಲ್ಲಿ ಕಾಂಗ್ರೆಸ್ ನಾಯಕರ ರಾಹುಲ್ ಗಾಂಧಿ ಭಾಷಣ ಮಾಡುವಾಗ “ಮೋದಿ” ಬಗ್ಗೆ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಗುಜರಾತ್ ಕೋರ್ಟ್ ತೀರ್ಪು ಕೊಟ್ಟಿತ್ತು. ಅದಕ್ಕೆ ಈಗ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಭಾರತ್ ಜೋಡೋ ಯಾತ್ರೆ ಸತ್ಯದ ಮೇಲೆ ನಿಂತಿದೆ ಎಂಬುದು ಈಗ ಸಾಬೀತಾಗಿದೆ. ಅಲ್ಲದೆ, ಅವರ ಸುಳ್ಳು ಮತ್ತು ಅಸತ್ಯದ ಸಿದ್ಧಾಂತವನ್ನು ಈ ಮೂಲಕ ಮಣಿಸಲಾಗಿದೆ. ಸುಪ್ರೀಂ ಕೋರ್ಟ್ ತಡೆಯಾಜ್ಞೆ ಅರ್ಥ, ಸುಳ್ಳು ತುಂಬಾ ದಿನ ಇರಲ್ಲ ಅಂತ. ಸುಪ್ರೀಂ ಕೋರ್ಟ್ ತೀರ್ಪನ್ನು ಇಟ್ಟುಕೊಂಡು ಅವರ ಸದಸ್ಯತ್ವ ಸ್ಥಾಪನೆ ಮಾಡಲು ಕಾಂಗ್ರೆಸ್ ಮುಂದಾಗಲಿದೆ. ಈಗ ಲೋಕಸಭೆ ಸ್ಪೀಕರ್ ಯಾವ ರೀತಿ ಕ್ರಮ ತೆಗೆದುಕೊಳ್ಳಲಿದ್ದಾರೆ ನೋಡೋಣ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಪೀಕರ್ ಒಳ್ಳೆಯ ಕ್ರಮ ವಹಿಸಲಿದ್ದಾರೆ ಎಂದು ನಂಬಿದ್ದೇನೆ ಎಂದು ಬಿ.ಕೆ. ಹರಿಪ್ರಸಾದ್ ಹೇಳಿದರು.