Site icon Vistara News

Wood Smuggling: ರಾಜಕೀಯ ಷಡ್ಯಂತ್ರದಿಂದ ನನ್ನ ಬಂಧನ; ಟೈಂ ಬರಲಿ ಎಲ್ಲವನ್ನೂ ಹೇಳುತ್ತೇನೆಂದ ವಿಕ್ರಮ್‌ ಸಿಂಹ

vikram sihma MP Pratap Sihma brother

ಹಾಸನ: ಮರಗಳ್ಳತನ (Wood Smuggling) ಆರೋಪದ ಮೇಲೆ ನನ್ನನ್ನು ಬಂಧನ ಮಾಡಿರುವುದರ ಹಿಂದೆ ತುಂಬಾ ವಿಷಯಗಿಳಿವೆ. ಕಾಲ ಬರಲಿ ಎಲ್ಲವನ್ನೂ ಹೇಳುತ್ತೇನೆ. ಎಷ್ಟು ಪಿತೂರಿ ಮಾಡುತ್ತಿದ್ದಾರೆ ಎಂಬುದನ್ನು ಬಹಿರಂಗವಾಗಿಯೇ ಹೇಳುತ್ತೇನೆ. ಇದರ ಹಿಂದೆ ಯಾರ ಯಾರ ಕೈವಾಡ ಇದೆ ಎಂಬುದು ಸೇರಿದಂತೆ ಎಲ್ಲವನ್ನೂ ಹೇಳುತ್ತೇನೆ ಎಂದು ಮೈಸೂರು ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ (MP Pratap Simha) ಸಹೋದರ ವಿಕ್ರಮ್ ಸಿಂಹ (Vikram Simha) ಹೇಳಿದ್ದಾರೆ.

ಹಾಸನದ ಹಿಮ್ಸ್‌ನಲ್ಲಿ ಆರೋಗ್ಯ ತಪಾಸಣೆಗೆ ಬಂದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ವಿಕ್ರಮ್‌ ಸಿಂಹ, ನನ್ನ ಬಂಧನ ಹಿಂದೆ ವ್ಯವಸ್ಥಿತ ಪಿತೂರಿ ನಡೆದಿದೆ. ಸಮಯ ಬಂದಾಗ ಎಲ್ಲವನ್ನೂ ಹೇಳುತ್ತೇನೆ ಎಂದು ಹೇಳಿದರು.

ರಾಜಕೀಯಕ್ಕೆ ಬರಲು ನನ್ನ ವಿರುದ್ಧ ಪಿತೂರಿ ಮಾಡುತ್ತಿರುವವರ ಬಗ್ಗೆ ಬಹಿರಂಗವಾಗಿಯೇ ಹೇಳುತ್ತೇನೆ. ನಿಷ್ಠಾವಂತ ಅಧಿಕಾರಿಗಳು ಎಂದು ಹೇಳುವವರನ್ನು ಮುಂದೆ ಬಿಟ್ಟು ಇದರಲ್ಲಿ ಯಾರು ಯಾರು ಶಾಮೀಲಾಗಿದ್ದಾರೆ ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ ಎಂದು ವಿಕ್ರಮ್‌ ಸಿಂಹ ಹೇಳಿದರು.

ಯಾರನ್ನು ನೀವು ನಿಷ್ಠಾವಂತ ಅಧಿಕಾರಿ ಎನ್ನುತ್ತಿದ್ದೀರೋ ಅವರ ನಿಷ್ಠೆ ಯಾರಿಗೆ ಎಂಬುದನ್ನು ಹೇಳುತ್ತೇನೆ. ನಮ್ಮನ್ನು ರಾಜಕೀಯವಾಗಿ ಮುಗಿಸಲು ವ್ಯವಸ್ಥಿತ ಪಿತೂರಿ ನಡೆಸುತ್ತಿದ್ದಾರೆ. ನಮ್ಮ ಅಣ್ಣನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಇದೆಲ್ಲವೂ ವ್ಯವಸ್ಥಿತವಾಗಿಯೇ ಆಗುತ್ತಲಿದೆ. ಯಾರು ನಿಷ್ಠಾವಂತ ಅಧಿಕಾರಿ ಎನ್ನುತ್ತಿದ್ದೀರೋ ಅವರ ಬಗ್ಗೆ ಹೇಳುತ್ತೇನೆ ಎಂದು ವಿಕ್ರಮ್‌ ಸಿಂಹ ಹೇಳಿದರು.

ಅಚ್ಚರಿಗೆ ಕಾರಣವಾದ ಸರ್ಕಾರದ ನಡೆ!

ಕೋಟ್ಯಂತರ ಮೌಲ್ಯದ ಮರಗಳ ಮಾರಣ ಹೋಮ ಪ್ರಕರಣದಲ್ಲಿ ಸರ್ಕಾರದ ನಡೆ ಅಚ್ಚರಿಗೆ ಕಾರಣವಾಗಿದೆ. ಅಧಿಕಾರಿಗಳ ಅಮಾನತು ಮಾಡಿ ಆದೇಶ ಹೊರಡಿಸಿದರೂ ಅಧಿಕಾರಿಗಳಿಗೆ ಅಮಾನತು ಆಗಿರುವ ಬಗ್ಗೆ ಇನ್ನೂ ಆದೇಶವೇ ತಲುಪಿಲ್ಲ ಎಂಬ ಸಂಗತಿ ಗೊತ್ತಾಗಿದೆ. ಅಲ್ಲದೆ, ಅಧಿಕೃತವಾಗಿ ಯಾವುದೇ ಅಧಿಕಾರಿ ಮತ್ತು ಸಿಬ್ಬಂದಿಗೆ ಅಮಾನತು ಆದೇಶ ತಲುಪದ ಕಾರಣ ಅವರುಗಳು ಇನ್ನೂ ಕರ್ತವ್ಯದಲ್ಲಿಯೇ ಇದ್ದಾರೆ.

ಸರ್ಕಾರದ ಅಮಾನತು ಆದೇಶ ಪ್ರತಿಯು ವಾಟ್ಸಾಪ್ ಮೂಲಕ ಹರಿದಾಡಿತ್ತು. ಡಿಸೆಂಬರ್ 28ಕ್ಕೆ ಎಸಿಎಫ್‌ ಪ್ರಭುಗೌಡ, ಆರ್‌ಎಫ್‌ಒ ವಿನಯ್ ಕುಮಾರ್, ಡಿಆರ್‌ಎಫ್‌ಒ ಗುರುರಾಜ್ ಹಾಗೂ ಸಿಬ್ಬಂದಿ ರಘುರಾಜ್ ಅವರನ್ನು ಅಮಾನತು ಮಾಡಿ ಆದೇಶ ಮಾಡಲಾಗಿತ್ತು. ಈ ಅಮಾನತು ಆದೇಶದ ಪ್ರತಿ ವಾಟ್ಸಾಪ್‌ಗಳಲ್ಲಿ ಹರಿದಾಡಿತ್ತು. ಆದರೆ, ಅಮಾನತು ಆದೇಶ ಆಗಿ ನಾಲ್ಕು ದಿನ ಕಳೆದರೂ ಅಧಿಕಾರಿಗಳು ಮಾತ್ರ ಕರ್ತವ್ಯದಲ್ಲಿದ್ದಾರೆ.

ಕಣ್ಣೊರೆಸುವ ತಂತ್ರ?

ಮೇಲ್ನೋಟಕ್ಕೆ ಅಮಾನತು ಮಾಡಿ ಅಧಿಕಾರಿಗಳಿಗೆ ಆದೇಶ ಜಾರಿ ಮಾಡದೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳಿಂದ ಕಣ್ಣೊರೆಸುವ ತಂತ್ರ ನಡೆದಿದೆಯೇ ಎಂಬ ಅನುಮಾನ ಶುರುವಾಗಿದೆ. ಆದೇಶ ಹೊರಡಿಸಿ ಈ ಬಗ್ಗೆ ಆದೇಶ ಜಾರಿ ಮಾಡದೆ ನಿರ್ಲಕ್ಷ್ಯ ವಹಿಸಿದ್ದಾರೆಂಬ ಆರೋಪ ಕೇಳಿಬಂದಿದೆ.

ಅಮಾನತು ಆದೇಶ ಕೈ ಸೇರದ ಹಿನ್ನೆಲೆಯಲ್ಲಿ ಶನಿವಾರ ತಾವೇ ತೆರಳಿ ವಿಕ್ರಂ ಸಿಂಹ ಅವರನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಪ್ರಕರಣದಲ್ಲಿ ತನಿಖಾಧಿಯಾಗಿರುವ ಆರ್‌ಎಫ್‌ಒ ವಿನಯ್ ಕುಮಾರ್ ಅವರನ್ನು ಅಮಾನತು ಮಾಡಿ ಆದೇಶವನ್ನು ಹೊರಡಿಸಲಾಗಿತ್ತು. ಆದರೆ, ಅವರಿಗೆ ಇನ್ನೂ ಆದೇಶ ತಲುಪದ ಹಿನ್ನೆಲೆಯಲ್ಲಿ ಅವರು ಕರ್ತವ್ಯದಲ್ಲಿದ್ದಾರೆ. ಸರ್ಕಾರದ ಈ ನಡೆಗೆ ಈಗ ತೀವ್ರ ಅನುಮಾನವನ್ನು ಹುಟ್ಟುಹಾಕಿದೆ.

ಇದನ್ನೂ ಓದಿ: BY Vijayendra: ಶೀಘ್ರ ಬಿಜೆಪಿ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳ ನೇಮಕ: ಬಿ.ವೈ. ವಿಜಯೇಂದ್ರ

ಏನಿದು ಪ್ರಕರಣ?

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ನಂದಗೊಂಡನಹಳ್ಳಿಯಲ್ಲಿ ಮರಗಳ ಮಾರಣಹೋಮ ಆರೋಪದಲ್ಲಿ ವಿಕ್ರಮ್ ಸಿಂಹ ಅವರನ್ನು ಬಂಧಿಸಲಾಗಿದೆ. ಸದ್ಯ ಕೋಟ್ಯಂತರ ರೂಪಾಯಿ ಮೌಲ್ಯದ 126 ಮರಗಳನ್ನು ಕಡಿದು ಸಾಗಿಸಿದ ಆರೋಪ ವಿಕ್ರಮ್ ಸಿಂಹ ಅವರ ಮೇಲಿದೆ. ಹೀಗಾಗಿ ವಿಕ್ರಮ್ ಸಿಂಹ ವಿರುದ್ಧ ಕೇಸ್ ದಾಖಲಾಗಿದೆ. ಬೆಂಗಳೂರಿನ ಮಲ್ಲೇಶ್ವರಂನ ಅರಣ್ಯ ಭವನದಲ್ಲಿ ವಿಕ್ರಮ ವಿಚಾರಣೆ ಮಾಡಲಾಗುತ್ತಿದೆ. ಈ ಪ್ರಕರಣವೀಗ ರಾಜಕೀಯ ಬಣ್ಣವನ್ನು ಪಡೆದುಕೊಂಡಿದೆ.

Exit mobile version