ಬೆಂಗಳೂರು: “ಕರ್ನಾಟಕದಲ್ಲಿ ಬಿಜೆಪಿಗೆ ಬಹುಮತ ಲಭಿಸಬೇಕು ಎಂದರೆ 1.5 ಕೋಟಿ ಮತಗಳ ಅಗತ್ಯವಿದೆ. ಇಷ್ಟು ಮತಗಳನ್ನು ಪಕ್ಷವು ಗಳಿಸಬೇಕು ಎಂದರೆ ಪಕ್ಷದ ಕಾರ್ಯಕರ್ತರು ಅವಿರತವಾಗಿ ಶ್ರಮಿಸಬೇಕು” ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ (BL Santosh) ಕರೆ ನೀಡಿದ್ದಾರೆ.
ಮೈಸೂರಿನಲ್ಲಿ ಆಯೋಜಿಸಿದ್ದ ಡಿಜಿಟಲ್ ಕಾರ್ಯಕರ್ತರ ಸಮ್ಮೇಳನದಲ್ಲಿ ಮಾತನಾಡಿದ ಅವರು, “ಒಂದೂವರೆ ಕೋಟಿ ಮತಗಳನ್ನು ಪ್ರಧಾನಿ ನರೇಂದ್ರ ಮೋದಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಅಭ್ಯರ್ಥಿಗಳೇ ತರಲು ಆಗುವುದಿಲ್ಲ. ಇದಕ್ಕಾಗಿ ಕಾರ್ಯಕರ್ತರ ಶ್ರಮ ಅತ್ಯಗತ್ಯ” ಎಂದು ಸೂಚಿಸಿದರು.
ರಾಜ್ಯದಲ್ಲಿ ಬಿಜೆಪಿಯು 133 ಕ್ಷೇತ್ರಗಳಲ್ಲಿ ಗೆಲ್ಲಲು ಕಾರ್ಯಕರ್ತರು ಶ್ರಮಿಸಬೇಕು. ಇದಕ್ಕಾಗಿ ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಇದಕ್ಕಾಗಿ ಮೈಸೂರು ಭಾಗದಲ್ಲಿ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕು. ಸರ್ಕಾರ ರಚನೆಗೆ ನಾವೂ ಕಾರಣರಾಗುತ್ತೇವೆ ಎಂಬ ಭಾವನೆ ನಿಮ್ಮಲ್ಲಿ ಬರಬೇಕು. ಮೇ 13ರಂದು ನೀವೆಲ್ಲ ಸಂತೋಷಪಡಬೇಕು ಎಂದರೆ ಮೇ 10ರವರೆಗೆ ಅವಿರತವಾಗಿ ಶ್ರಮಿಸಿ ಎಂದು ಕರೆ ನೀಡಿದರು.
ಮಾತನಾಡಲು ನಾನು ಪ್ರತಿಸ್ಪರ್ಧಿ ಅಲ್ಲ
ʻನಮ್ಮಲ್ಲಿ ಸಿಕ್ಕಾಪಟ್ಟೆ ಲೀಡರ್‌ಗಳಾಗಿದ್ದಾರೆ. ನಾನು ಯಾರಿಗೂ ಪ್ರತಿಸ್ಪರ್ಧಿ ಆಗಲು ಬಯಸುವುದಿಲ್ಲʼ ಎಂದು ಬಿ.ಎಲ್.ಸಂತೋಷ್ ಮಾರ್ಮಿಕವಾಗಿ ಹೇಳಿದರು. ಶುಕ್ರವಾರ ಅವರು ಮೈಸೂರು ವಿಭಾಗದ ಡಿಜಿಟಲ್ ಕಾರ್ಯಕರ್ತರ ಸಮ್ಮೇಳನಕ್ಕಾಗಿ ಮೈಸೂರಿಗೆ ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳಿಗೆ ಎದುರಾದ ಅವರು, ಇತ್ತೀಚಿನ ವಿದ್ಯಮಾನಗಳಿಗೆ ಸ್ಪಷ್ಟೀಕರಣ ಕೊಡಲು ನಿರಾಕರಿಸಿ ಮಾರ್ಮಿಕವಾಗಿ ಮಾತನಾಡಿ ಸುಮ್ಮನಾದರು.
ʻʻಮಾಧ್ಯಮದವರು ನನ್ನನ್ನು 100 ಬಾರಿ ಮಾತಾಡಿಸಲು ಯತ್ನಿಸಿದ್ದಾರೆ. ನಾನು ಮಾತಾಡಿಲ್ಲ. ನಮ್ಮಲ್ಲಿ ಮಾತಾಡಲು ಪ್ರತಾಪ್ ಸಿಂಹ ಥರದವರು ಇದ್ದಾರೆ. ಅವರೇ ಮಾತಾಡಲಿ. ನಾನು ಮಾತಾಡಿ ಯಾರಿಗೆ ಯಾಕೆ ಪ್ರತಿ ಸ್ಪರ್ಧಿಯಾಗಲಿʼʼ ಎಂದರು.