ಬೆಳಗಾವಿ: ಬೆಳಗಾವಿಯ ಸುವರ್ಣವಿಧಾನಸೌಧವನ್ನು ನಿರಂತರ ಕೆಲಸ ನಡೆಯುವ ಸ್ಥಳವನ್ನಾಗಿ ಮಾಡಲು ಯಾವ ರಾಜಕೀಯ ಪಕ್ಷಗಳೂ ಮನಸ್ಸು ಮಾಡಲಿಲ್ಲ. ಅನೇಕ ಇಲಾಖೆಗಳನ್ನು ಅಲ್ಲಿಗೇ ಸ್ಥಳಾಂತರ ಮಾಡುತ್ತೇವೆ ಎಂಬ ಹೇಳಿಕೆ ಕಾಗದದಲ್ಲೇ ಉಳಿಯಿತು. ವರ್ಷಕ್ಕೊಮ್ಮೆ ಅಧಿವೇಶನ ನಡೆಯುವಾಗ ಮಾತ್ರವೇ ಉಪಯೋಗಕೆಕ ಬರುವ ಸುವರ್ಣ ವಿಧಾನಸೌಧದಲ್ಲಿ ಶಾವಿಗೆ ಒಣಗಿಸಿದ ಘಟನೆ ಈಗ ಎಲ್ಲೆಡೆ ಚರ್ಚೆ ಆಗುತ್ತಿದೆ.
ಸುಮಾರು ₹450 ಕೋಟಿ ವೆಚ್ಚದಲ್ಲಿ ಸುವರ್ಣ ವಿಧಾನಸೌಧ ನಿರ್ಮಿಸಲಾಗಿದೆ. ಅಲ್ಲಿನ ಮುಖ್ಯದ್ವಾರದ ದೊಡ್ಡ ಮೆಟ್ಟಿಲುಗಳ ಮೇಲೆ ಶಾವಿಗೆ ಹಾಗೂ ಸಂಡಿಗೆ ಒಣಗಿಸಲು ಹಾಕಿರುವ ಚಿತ್ರ ಮಂಗಳವಾರ ಎಲ್ಲೆಡೆ ಹರಿದಾಡಿತ್ತು. ಸುವರ್ಣ ವಿಧಾನಸೌಧದಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬರು ಇದನ್ನು ಹಾಕಿದ್ದರು ಎಂಬುದು ತಿಳಿದುಬಂದಿತ್ತು.
ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ ವೈರಲ್ ಆಗುತ್ತಿದ್ದಂತೆಯೇ, ಸ್ವಚ್ಛತೆ ನಿರ್ವಹಣಾ ಗುತ್ತಿಗೆದಾರರಿಗೆ ಲೋಕೋಪಯೋಗಿ ಇಲಾಖೆಯಿಂದ ನೋಟಿಸ್ ನೀಡಲಾಗಿತ್ತು. ನೋಟಿಸ್‌ಗೆ ಉತ್ತರ ನೀಡಿರುವ ಗುತ್ತಿಗೆದಾರರು ದಿನಗೂಲಿ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಕೊಂಡಸಕೊಪ್ಪ ಗ್ರಾಮದ ಕಾರ್ಮಿಕ ಮಹಿಳೆ ಇಂತಹ ಕೆಲಸ ಮಾಡಿದ್ದಾಲೆ. ಆಕೆಯನ್ನು ಕೆಲಸದಿಂದ ವಜಾಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಘಟನೆ ಮರುಕಳಿಸದಂತೆ ಮೇಲಧಿಕಾರಿಗಳು ಗುತ್ತಿಗೆದಾರರಿಗೆ ಸೂಚನೆ ನೀಡಿದ್ದಾರೆ. ಈ ಬಗ್ಗೆ ಬೆಳಗಾವಿ ಸುವರ್ಣ ಸೌಧ ಉಪವಿಭಾಗದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯ ನಿರ್ವಾಹಕ ಅಧಿಕಾರಿ, ಕಾರ್ಯನಿರ್ವಾಹಕ ಇಂಜಿನಿಯರ್‌ಗೆ ಪತ್ರ ಬರೆದಿದ್ದಾರೆ.
ಸುವರ್ಣ ವಿಧಾನಸೌಧಕ್ಕೆ ಕೆಲ ವರ್ಷದ ಹಿಂದೆ ಜಿಲ್ಲಾ ಮಟ್ಟದ 23ಕಚೇರಿಗಳನ್ನು ಸ್ಥಳಾಂತರ ಮಾಡಲಾಗಿತ್ತು. ಇದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಓ ಮೂಲಕ ಸುವರ್ಣ ವಿಧಾನಸೌಧವನ್ನು ಜಿಲ್ಲಾ ಮಟ್ಟದ ಕಟ್ಟಡವನ್ನಾಗಿಸಲಾಗಿದೆ. ರಾಜ್ಯಮಟ್ಟದ ಇಲಾಖೆಗಳನ್ನು ಸ್ಥಳಾಂತರ ಮಾಡಬೇಕು ಎಂದು ಆಗ್ರಹ ಕೇಳಿಬಂದಿತ್ತು. 2021ರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅನೇಕ ಕಚೇರಿಗಳನ್ನು ಸ್ಥಳಾಂತರ ಮಾಡಿ ಸುವರ್ಣ ವಿಧಾನಸೌಧವನ್ನು ಉತ್ತರ ಕರ್ನಾಟಕದ ಶಕ್ತಿಕೇಂದ್ರ ಮಾಡಲಾಗುವುದು ಎಂದಿದ್ದರು. ಆದರೂ ಇಲ್ಲಿವರೆಗೆ ಪ್ರಮುಖ ಇಳಾಖೆಗಳ ಸ್ಥಳಾಂತರ ಪ್ರಕ್ರಿಯೆ ನಡೆದಿಲ್ಲ.
ಕೊನೆಪಕ್ಷ ಶಾವಿಗೆ, ಸಂಡಿಗೆ ಒಣಗಿಸಲಾದರೂ ಸುವರ್ಣಸೌಧ ಉಪಯೋಗಕ್ಕೆ ಬಂದಿದ್ದು ಸಂತೋಷ ಎಂದು ಸಾರ್ವಜನಿಕರು ವ್ಯಂಗ್ಯವಾಡುತ್ತಿದ್ದಾರೆ.
ಇದನ್ನೂ ಓದಿ | RS Elections 2022: ನಾಲ್ಕನೇ ಸ್ಥಾನಕ್ಕೆ ಲೇಹರ್ ಸಿಂಗ್-ಕುಪೇಂದ್ರ ರೆಡ್ಡಿ ನಡುವೆ ಪೈಪೋಟಿ?