ಬೆಂಗಳೂರು: ವಿಶ್ವ ಪರಿಸರ ದಿನದ ಹಿನ್ನೆಲೆಯಲ್ಲಿ ವಿಸ್ತಾರ ನ್ಯೂಸ್ “ಸಸಿ ನೆಡಿ, ಫೋಟೊ ಕಳುಹಿಸಿʼ ಅಭಿಯಾನ ಆಯೋಜಿಸಿದೆ. ಈ ಅಭಿಯಾನದಲ್ಲಿ ನೀವೆಲ್ಲ ಸಕ್ರಿಯವಾಗಿ ಭಾಗವಹಿಸಿ, ಪರಿಸರಕ್ಕೆ ನಿಮ್ಮ ಅಮೂಲ್ಯ ಕೊಡುಗೆ ನೀಡಿ. ನೆನಪಿರಲಿ: ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ.
ನೀವೇನು ಮಾಡಬೇಕು?
ಜೂ.5ರ ʼಪರಿಸರ ದಿನʼದಂದು ಬೆಳಗ್ಗೆ ಎಲ್ಲಾದರು ಒಂದು ಕಡೆ ಸಸಿ ನೆಡಿ. ಇಷ್ಟೇ ಅಲ್ಲ, ಆ ಸಸಿಯನ್ನು ಪೋಷಿಸಿ ಬೆಳೆಸುವ ನಿರ್ಧಾರ ಮಾಡಿ. ಬಳಿಕ ಸಸಿ ನೆಡುವ ಫೋಟೊ ತೆಗೆದು ನಮಗೆ ಕಳುಹಿಸಿ. ವಿಸ್ತಾರ ನ್ಯೂಸ್ ಟಿವಿ ಚಾನೆಲ್, ಯುಟ್ಯೂಬ್ ಮತ್ತು ವೆಬ್‌ಸೈಟ್‌ನಲ್ಲಿ ನಿಮ್ಮ ಫೋಟೊ ಪ್ರಕಟಿಸಲಾಗುವುದು. ನೀವು ವೈಯಕ್ತಿಕವಾಗಿಯೂ ಗಿಡ ನೆಟ್ಟು ಫೋಟೊ ಕಳುಹಿಸಬಹುದು. ಅಥವಾ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಗ್ರೂಪ್ ಫೋಟೊ ತೆಗೆದೂ ಕಳುಹಿಸಬಹುದು. ರೋಟರಿ, ಲಯನ್ಸ್ ಇತ್ಯಾದಿ ಸಂಘ ಸಂಸ್ಥೆಗಳು; ಪರಿಸರ ಸಂಘಟನೆಗಳು ಈ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂಬುದು ನಮ್ಮ ಕಳಕಳಿ.
ಫೋಟೊ ಕಳುಹಿಸುವುದು ಎಲ್ಲಿ?
ವಾಟ್ಸ್ ಆಪ್ ಸಂಖ್ಯೆ: 9481024181
ಈ ಸಂಖ್ಯೆಗೆ ಫೋಟೊ ಕಳುಹಿಸಿ. ನಿಮ್ಮ ಹೆಸರು, ಸಂಘಟನೆಯ ಹೆಸರು ಮತ್ತು ಊರಿನ ಹೆಸರನ್ನು ನಮೂದಿಸಿ.
ಸಸಿ ನೆಡುವುದು ಏಕೆ ಮುಖ್ಯ?
ದೇಶದ ಬಹುತೇಕ ಕಡೆ ಬೇಸಿಗೆ ಅಬ್ಬರ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಇದರ ಬೆನ್ನಲ್ಲೇ, 2023-2027ರವರೆಗೆ ಇತಿಹಾಸದಲ್ಲಿ ಕಂಡು ಕೇಳರಿಯದಷ್ಟು ಹೆಚ್ಚಿನ ತಾಪಮಾನ ಇರಲಿದೆ ಎಂದು ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ.
“ಹಸಿರುಮನೆ ಅನಿಲ ಪರಿಣಾಮ ಹಾಗೂ ಎಲ್‌ನಿನೋ (ಮಳೆ ಕಡಿಮೆ ಸೂಚನೆ) ಪರಿಣಾಮದಿಂದಾಗಿ ಮುಂದಿನ ಐದು ವರ್ಷ ತಾಪಮಾನ ಹೆಚ್ಚಿರಲಿದೆ. ಜಗತ್ತಿನಾದ್ಯಂತ ಐದು ವರ್ಷದಲ್ಲಿ ಒಮ್ಮೆ ಅಥವಾ ಐದು ವರ್ಷವೂ ಹಿಂದೆಂದೂ ಕಂಡು ಕೇಳರಿಯದಷ್ಟು ತಾಪಮಾನ ಹೆಚ್ಚಿರಲಿದೆ. ಜಾಗತಿಕ ತಾಪಮಾನ ನಿಯಂತ್ರಣದ ಕುರಿತು ಪ್ಯಾರಿಸ್‌ನಲ್ಲಿ ನಡೆದ ಸಭೆಯ ವೇಳೆ ನಿಗದಿಪಡಿಸಿದ ಅಂದಾಜನ್ನು ತಾಪಮಾನದ ಏರಿಕೆಯು ಮೀರಿಸಲಿದೆ” ಎಂದು ವಿಶ್ವಸಂಸ್ಥೆ ಹವಾಮಾನ ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ : Meri LiFE App: ‘ಮೇರಿ ಲೈಫ್’ ಆ್ಯಪ್ ಬಿಡುಗಡೆಗೊಳಿಸಿದ ಕೇಂದ್ರ; ಪರಿಸರ ರಕ್ಷಣೆಗಾಗಿ ಯುವಕರಿಗೆ ಹೇಗಿದು ಸಹಕಾರಿ?
ಕಳೆದ ಏಳು ವರ್ಷಗಳಲ್ಲಿ 2015 ಹಾಗೂ 2022ಅನ್ನು ಗರಿಷ್ಠ ತಾಪಮಾನ ದಾಖಲಾದ ವರ್ಷ ಎಂದು ಗುರುತಿಸಲಾಗಿದೆ. ಈ ವರ್ಷವೂ ಹೆಚ್ಚಿನ ತಾಪಮಾನ ಇದೆ. ಇದರ ಬೆನ್ನಲ್ಲೇ ಮುಂದಿನ ಐದು ವರ್ಷವೂ ಗರಿಷ್ಠ ತಾಪಮಾನ ಇರುವುದು ಜನರಿಗೆ ಆತಂಕ ಮೂಡಿಸಿದೆ.
ವಿಶ್ವಸಂಸ್ಥೆ ಹವಾಮಾನ ಇಲಾಖೆ ಪ್ರಕಾರ, ಜಾಗತಿಕವಾಗಿ ವಾರ್ಷಿಕ 1.5 ಡಿಗ್ರಿ ಸೆಲ್ಸಿಯಸ್ ತಾಪಮಾನ ಏರಿಕೆಯ ಸಾಧ್ಯತೆ ಶೇ.66ರಷ್ಟಿದೆ. ಮುಂದಿನ ಐದು ವರ್ಷದಲ್ಲಿ 1.1 ಡಿಗ್ರಿ ಸೆಲ್ಸಿಯಸ್‌ನಿಂದ 1.8 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಈ ಎಲ್ಲ ಕಾರಣಗಳಿಂದ ನಾವು ಪರಿಸರ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಸಾಧ್ಯವಾದಷ್ಟು ಹೆಚ್ಚು ಗಿಡಗಳನ್ನು ನೆಟ್ಟು ಪೋಷಿಸಬೇಕಿದೆ.
ಬನ್ನಿ…ವಿಸ್ತಾರ ನ್ಯೂಸ್‌ನ ಸಸಿ ನೆಡಿ, ಫೋಟೊ ಕಳುಹಿಸಿ ಅಭಿಯಾನದಲ್ಲಿ ಭಾಗಿಯಾಗಿ.