ಮಂಡ್ಯ: ತಾಲೂಕಿನ ಬಸರಾಳು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಹುಳು ಮಿಶ್ರಿತ ಬಿಸಿಯೂಟವನ್ನು ನೀಡುತ್ತಿದ್ದ ಪ್ರಕರಣ ಸಂಬಂಧ ಶಾಲೆಯ ಮುಖ್ಯ ಶಿಕ್ಷಕರನ್ನೊಳಗೊಂಡಂತೆ ನಾಲ್ವರು ಅಡುಗೆ ಸಿಬ್ಬಂದಿಯನ್ನು ಅಮಾನತುಗೊಳಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಈ ಶಾಲೆಯಲ್ಲಿ 1 ರಿಂದ 10ನೇ ತರಗತಿವರೆಗೆ ಇದ್ದು, ಸುಮಾರು 500ಕ್ಕೂ ಹೆಚ್ಚು ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಪ್ರೌಢಶಾಲೆ ಮತ್ತು ಪ್ರಾಥಮಿಕ ವಿಭಾಗಕ್ಕೆ ಪ್ರತ್ಯೇಕವಾಗಿ ಬಿಸಿಯೂಟವನ್ನು ತಯಾರು ಮಾಡಲಾಗುತ್ತಿತ್ತು. ಈಗ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಅಡುಗೆ ಮಾಡುತ್ತಿದ್ದ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಈ ಅಡುಗೆ ಸಿಬ್ಬಂದಿ ಕಳೆದ 15 ವರ್ಷಗಳಿಂದ ಕಾರ್ಯನಿರ್ವಹಣೆ ಮಾಡುತ್ತಿದ್ದರು ಎನ್ನಲಾಗಿದೆ.
ಏನಿದು ಪ್ರಕರಣ?
ಸುಮಾರು 500 ಮಕ್ಕಳು ಕಲಿಯುತ್ತಿರುವ ಬಸರಾಳು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಹುಳು ಮಿಶ್ರಿತ ಬಿಸಿಯೂಟವನ್ನು ನೀಡಲಾಗುತ್ತಿದೆ. ಇದನ್ನು ಮಕ್ಕಳು ಸೇವಿಸುತ್ತಿರುವುದರಿಂದ ಆರೋಗ್ಯ ಕೆಡುತ್ತಿದೆ ಎಂದು ಗ್ರಾಮಸ್ಥರು ಶಿಕ್ಷಣ ಇಲಾಖೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು ಮತ್ತು ಶಿಕ್ಷಣ ಸಂಯೋಜಕರನ್ನೊಳಗೊಂಡ ಅಧಿಕಾರಿಗಳ ತಂಡ ದಿಡೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿತ್ತು.
ಇದನ್ನೂ ಓದಿ | ಡಾ. ರಾಜಕುಮಾರ್ ಪಾಠಕ್ಕೆ ಕತ್ತರಿ: ದೇವನೂರು ಸೇರಿ ಏಳು ಸಾಹಿತಿಗಳ ಪಠ್ಯ ಬೋಧಿಸದಂತೆ ಶಿಕ್ಷಣ ಇಲಾಖೆ ತಡೆ
ಆ ವೇಳೆ ಮಕ್ಕಳ ಬಿಸಿಯೂಟದ ಅನ್ನ ಮತ್ತು ಸಾಂಬಾರಿನಲ್ಲಿ ಹುಳುಗಳು ಇರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಆಹಾರ ಸಾಮಗ್ರಿಗಳ ದಾಸ್ತಾನು ಕೊಠಡಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಅಲ್ಲಿ ಗುಣಮಟ್ಟ ಇರುವ (ಹುಳು ಇಲ್ಲದ) ಅಕ್ಕಿ-ಬೇಳೆಗಳಿರುವುದು ಕಂಡುಬಂದಿದೆ. ಅಲ್ಲದೆ, ಅಡುಗೆ ತಯಾರಿ ಕೊಠಡಿಯಲ್ಲಿ ಸ್ವಚ್ಛತೆ ಇರಲಿಲ್ಲ. ಜತೆಗೆ ಪಾತ್ರೆಗಳು ಮತ್ತು ಮಿಕ್ಸಿಯ ಶುಭ್ರತೆಯನ್ನು ಕಾಪಾಡಿಕೊಂಡಿಲ್ಲ ಎಂಬ ವಿಷಯವೂ ಗೊತ್ತಾಗಿದೆ.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮುಖ್ಯ ಶಿಕ್ಷಕರ ಕರ್ತವ್ಯ ನಿಷ್ಠೆ ಹಾಗೂ ಜವಾಬ್ದಾರಿತನವನ್ನು ಅನುಸರಿಸದೇ ಇರುವುದು ಕಂಡುಬಂದಿದ್ದರಿಂದ ಮುಖ್ಯ ಶಿಕ್ಷಕ ಎಚ್.ಟಿ. ಗಿರೀಶ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಜತೆಗೆ ನಾಲ್ವರು ಅಡುಗೆ ಸಿಬ್ಬಂದಿಯನ್ನೂ ಅಮಾನತುಗೊಳಿಸಿ ಆದೇಶ ನೀಡಲಾಗಿದೆ.
ಮಕ್ಕಳಿಗೆ ಇಲ್ಲ ಬಿಸಿಯೂಟ
ಈಗ ಪ್ರಾಥಮಿಕ ಶಾಲೆ ವಿಭಾಗದ ಬಿಸಿಯೂಟ ಸಿಬ್ಬಂದಿಯನ್ನು ಅಮಾನತು ಮಾಡಲಾಗಿರುವ ಹಿನ್ನೆಲೆಯಲ್ಲಿ ಮಕ್ಕಳಿಗೆ ಬಿಸಿಯೂಟ ಲಭ್ಯವಾಗುತ್ತಿಲ್ಲ. ಈ ಕಾರಣದಿಂದ ಮಕ್ಕಳು ಮನೆಯಿಂದ ಊಟ ತಂದು ಮಾಡುವಂತಾಗಿದೆ. ಬೆಳಗಿನ ತಿಂಡಿಯನ್ನೋ ಅಥವಾ ಇದ್ದಿದ್ದನ್ನು ತಂದು ತಿನ್ನುವಂತಾಗಿದೆ. ಇದರಿಂದ ಮಕ್ಕಳಿಗೆ ಬಹಳ ಕಷ್ಟವಾಗುತ್ತಿದೆ. ತಕ್ಷಣವೇ ಬದಲಿ ವ್ಯವಸ್ಥೆಯನ್ನು ಮಾಡುವಂತೆ ಪೋಷಕರು ಒತ್ತಾಯ ಮಾಡಿದ್ದಾರೆ.
ಇದನ್ನೂ ಓದಿ | School timings | ಬೇಕಾಬಿಟ್ಟಿ ತರಗತಿಗೆ ಶಿಕ್ಷಣ ಇಲಾಖೆ ಬ್ರೇಕ್, ವೇಳಾಪಟ್ಟಿ ಪಾಲಿಸಲು ಖಡಕ್ ಸೂಚನೆ