Site icon Vistara News

Gangadhar Murthy Death | ಲೇಖಕ, ಹಿರಿಯ ಚಿಂತಕ ಪ್ರೊ.ಬಿ. ಗಂಗಾಧರ ಮೂರ್ತಿ ಹೃದಯಾಘಾತದಿಂದ ನಿಧನ

ಗಂಗಾಧರಮೂರ್ತಿ

ಚಿಕ್ಕಬಳ್ಳಾಪುರ: ಖ್ಯಾತ ಲೇಖಕರು ಹಾಗೂ ಹಿರಿಯ ಚಿಂತಕರಾದ ಪ್ರೊ.ಬಿ.ಗಂಗಾಧರಮೂರ್ತಿ (Gangadhar Murthy Death) ಶನಿವಾರ (ಸೆಪ್ಟೆಂಬರ್‌ 10) ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರನ್ನು ಚಿಕ್ಕಬಳ್ಳಾಪುರದ ಜೈನ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ.

ಹಾಸನ ಜಿಲ್ಲೆಯ ಹೊಳೆನರಸೀಪುರ ಮೂಲದ ಗಂಗಾಧರಮೂರ್ತಿಯವರು ಗೌರಿಬಿದನೂರಿನ ನ್ಯಾಷನಲ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರೊಫೆಸರ್ ಆಗಿ ನಿವೃತ್ತರಾದವರು. ಅವರು ಕಳೆದ ನಾಲ್ಕು ದಶಕಗಳಿಂದ ಬಂಡಾಯ ಸಾಹಿತ್ಯ, ದಲಿತ ಚಳವಳಿ, ಜನವಿಜ್ಞಾನ ಚಳವಳಿ, ವಿಚಾರವಾದಿ ಚಳವಳಿ ಸೇರಿದಂತೆ ನಾಡಿನ ಬಹುತೇಕ ಪ್ರಗತಿಪರ ಚಳವಳಿಗಳಲ್ಲಿ ಭಾಗಿಯಾದವರು. ಸಂಸ್ಕೃತಿ ಚಿಂತಕರಾಗಿ, ಬರಹಗಾರರಾಗಿ, ಅನುವಾದಕರಾಗಿ ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಒಂದು ದಶಕಕ್ಕೂ ಹೆಚ್ಚಿನ ಅಧಿಕ ಅವಧಿಯಿಂದ ಕರ್ನಾಟಕ ಜ್ಞಾನ-ವಿಜ್ಞಾನ ಸಮಿತಿಯ ಟೀಚರ್ ಮಾಸಪತ್ರಿಕೆಯ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಗಂಗಾಧರ ಮೂರ್ತಿಯವರ ಸಾಧನೆಗಳು:

ವಿದುರಾಶ್ವತ್ಥದ ಸ್ವಾತಂತ್ರ್ಯ ಸ್ಮಾರಕವನ್ನು ರೂಪಿಸಿದ ಹಿರಿಮೆ ಪ್ರೊ.ಬಿ.ಗಂಗಾಧರ ಮೂರ್ತಿಯವರ ಹೆಸರಿಗಿದೆ. 1938ರಲ್ಲಿ ಧ್ವಜ ಸತ್ಯಾಗ್ರಹದ ಹತ್ಯಾಕಾಂಡ ನಡೆದಿತ್ತು. ಆ ಬಳಿಕ ವಿದುರಾಶ್ವತ್ಥವನ್ನು ಕರ್ನಾಟಕದ ಜಲಿಯನ್ ವಾಲಾಬಾಗ್ ಎಂದು ಕರೆಯಲಾಗಿತ್ತು. ಆ ಸ್ಥಳದಲ್ಲಿ ಸ್ವಾತಂತ್ರ್ಯ ಸ್ಮಾರಕ ಸಂಕೀರ್ಣವನ್ನು ಅಪಾರ ಶ್ರಮ ಹಾಗೂ ಬದ್ಧತೆಯಿಂದ ವಿಶಿಷ್ಟವಾಗಿ ರೂಪಿಸಿ, ನಿರ್ಮಿಸಿದ್ದರು. ಅಲ್ಲದೆ, ಭಾರತದ ಸ್ವಾತಂತ್ರ್ಯ ಹೋರಾಟವನ್ನು ಬಿಂಬಿಸುವ ಚಿತ್ರಪಟ ಗ್ಯಾಲರಿ ಮತ್ತು ಥೀಮ್ ಗ್ರಂಥಾಲಯ ರೂಪಿಸಿದ್ದರು.

ಗೌರಿಬಿದನೂರಿನ ನೂತನ ತಹಸೀಲ್ದಾರ್ ಕಚೇರಿಯ ಪಕ್ಕದಲ್ಲಿ ಅಂಬೇಡ್ಕರ್ ನೆನಪಿನಲ್ಲಿ ‘ಸಮಾನತಾ ಸೌಧ’ವನ್ನು ರೂಪಿಸಿದ್ದು ಅವರ ಮತ್ತೊಂದು ಅವಿಸ್ಮರಣೀಯ ಕೆಲಸವಾಗಿದೆ. ಪ್ರೊ. ಬಿ. ಗಂಗಾಧರಮೂರ್ತಿಯವರು ಅತ್ಯಂತ ಜನಪ್ರಿಯ ಅಧ್ಯಾಪಕರಾಗಿದ್ದರು.

ಗಂಗಾಧರಮೂರ್ತಿಯವರ ಸಾಹಿತ್ಯ ಕೊಡುಗೆ:

ಹೂ ಅರಳುವಂಥ ಮಣ್ಣು (ಕವನ ಸಂಕಲನ), ನಾಗಸಂದ್ರ ಭೂ ಆಕ್ರಮಣ ಚಳವಳಿ, ಭಾರತದ ಬೌದ್ಧಿಕ ದಾರಿದ್ರ್ಯ(ಅನುವಾದ), ಭಾರತೀಯ ಸಮಾಜದ ಜಾತಿ ಲಕ್ಷಣ (ಅನುವಾದ), ಅಂಬೇಡ್ಕರ್ ಮತ್ತು ಮುಸ್ಲಿಮರು (ಅನುವಾದ), ವಸಾಹತುಪೂರ್ವ ಕಾಲದ ಜಾತಿಹೋರಾಟಗಳು, ಹಿಂದುತ್ವ ಮತ್ತು ದಲಿತರು, ಸೂಫಿ ಕಥಾಲೋಕ, ಭಾರತದ ಸ್ವಾತಂತ್ರ್ಯ ಚಳವಳಿಯ ಪ್ರಧಾನೇತರ ಹೋರಾಟಗಳು ಮುಂತಾದ ಹಲವು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ಇದನ್ನೂ ಓದಿ: Queen Elizabeth II | ಸುದೀರ್ಘ ಆಡಳಿತ ಇತಿಹಾಸದ ಬ್ರಿಟನ್‌ ರಾಣಿ ಎಲಿಜಬೆತ್‌ ಇನ್ನಿಲ್ಲ

Exit mobile version