Site icon Vistara News

ಮುಸ್ಲಿಂ ಹೆಣ್ಣು ಮಕ್ಕಳ ದನಿ, ಖ್ಯಾತ ಲೇಖಕಿ ಸಾರಾ ಅಬೂಬಕ್ಕರ್ ಇನ್ನಿಲ್ಲ

Sara Aboobacker

ಬೆಂಗಳೂರು: ಕನ್ನಡದ ಪ್ರಮುಖ ಕಥೆಗಾರ್ತಿ, ಕಾದಂಬರಿಗಾರ್ತಿ ಸಾರಾ ಅಬೂಬಕ್ಕರ್‌ (86) ಅವರು ನಿಧನರಾಗಿದ್ದಾರೆ.

ಕನ್ನಡ ನಾಡಿನ, ಅದರಲ್ಲೂ ದಕ್ಷಿಣ ಕನ್ನಡ ಕರಾವಳಿಯ ಜನಜೀವನದ ಚಿತ್ರಣಗಳು ಅವರ ಕೃತಿಗಳಾಗಿದ್ದವು. ಮುಸ್ಲಿಂ ಜನಜೀವನ ಹಾಗೂ ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳ ಬದುಕು ಬವಣೆಗಳನ್ನು ಚಿತ್ರಿಸುವ ಧೈರ್ಯ ತೋರಿದ ಮೊದಲ ಲೇಖಕರಲ್ಲಿ ಅವರು ಪ್ರಮುಖರಾಗಿದ್ದರು. ಹೀಗಾಗಿ ಅವರ ಕೃತಿಗಳು ಕೆಲವೊಮ್ಮೆ ಸಂಪ್ರದಾಯವಾದಿಗಳ ಕೆಂಗಣ್ಣಿಗೂ ಗುರಿಯಾಗಿದ್ದವು. ಇತ್ತೀಚೆಗೆ ಹಿಜಾಬ್‌ ವಿವಾದದ ಬಗೆಗೂ ಅವರು ಮುಕ್ತವಾಗಿ ಮಾತನಾಡಿದ್ದರು.

ಸಾರಾ ಅಬೂಬಕ್ಕರ್ ಅವರು ಜೂನ್ ೩೦, ೧೯೩೬ರಂದು ಕಾಸರಗೋಡಿನ ಚಂದ್ರಗಿರಿ ನದಿ ತೀರದ ಕುಗ್ರಾಮವೊಂದರಲ್ಲಿ ಜನಿಸಿದವರು. ತಂದೆ ನ್ಯಾಯವಾದಿ ಪಿ. ಅಹಮದ್ ಮತ್ತು ತಾಯಿ ಚೈನಾಬಿ. ಕಾಸರಗೋಡಿನಲ್ಲಿ ಹೈಸ್ಕೂಲ್‌ವರೆಗೆ ಕಲಿತ ಅವರಲ್ಲಿ ಬಾಲ್ಯದಲ್ಲೇ ಸಾಹಿತ್ಯದ ಪ್ರೇಮ ಮೊಳೆಯಿತು. ಅರೇಬಿಕ್ ಕಲಿತಿದ್ದ ಅಜ್ಜಿ ಹೇಳುತ್ತಿದ್ದ ಕಥೆಗಳಿಂದ ಆಕರ್ಷಿತರಾಗಿ ಸಾಹಿತ್ಯದಲ್ಲಿ ಏನಾದರೂ ಸಾಧಿಸಬೇಕೆಂಬ ತುಡಿತ ಹೊಂದಿದ್ದರು. ನಲುವತ್ತು ವರ್ಷ ದಾಟಿದ ನಂತರ ಸಾರಾ ಅಬೂಬಕ್ಕರ್ ಬರೆಯಲು ಪ್ರಾರಂಭಿಸಿದರು. ಹೀಗೆ ಅವರು ಬರೆದ ಮೊದಲ ಕಾದಂಬರಿ ‘ಚಂದ್ರಗಿರಿಯ ತೀರದಲ್ಲಿ’ ಲಂಕೇಶ್ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತು. ಈ ಕಥೆಯಲ್ಲಿ ಹೊರಹೊಮ್ಮಿದ ವಾಸ್ತವಿಕ ಬದುಕಿನ ಚಿತ್ರಣ ಮತ್ತು ಧರ್ಮದ ಕಟ್ಟುಪಾಡುಗಳಲ್ಲಿ ಶೋಷಿತಗೊಂಡ ಮಹಿಳೆಯರ ಧ್ವನಿಗಳು ಅಸಂಖ್ಯಾತ ಓದುಗರ ಹೃದಯವನ್ನು ತಟ್ಟಿ ಈ ಕಾದಂಬರಿ ಮೆಚ್ಚುಗೆ ಪಡೆಯಿತು.

ಚಂದ್ರಗಿರಿಯ ತೀರದಲ್ಲಿ, ಸಹನಾ, ವಜ್ರಗಳು, ಕದನ ವಿರಾಮ, ಸುಳಿಯಲ್ಲಿ ಸಿಕ್ಕವರು, ಪ್ರವಾಹ, ತಳ ಒಡೆದ ದೋಣಿ, ಪಂಜರ, ಇಳಿಜಾರು, ಕಾಣಿಕೆ ಅವರ ಕಾದಂಬರಿಗಳು. ಚಪ್ಪಲಿಗಳು, ಪಯಣ ಮತ್ತು ಇತರ ಕಥೆಗಳು, ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು, ಖೆಡ್ಡಾ, ಸುಮಯ್ಯಾ, ಗಗನ ಸಖಿ, ಕಮರಿದ ಕನಸು, ಮಗಳು ಹುಟ್ಟಿದಳು, ತೇಲಾಡುವ ಮೋಡಗಳು, ತಾಳ ಮುಂತಾದವು ಕಥಾ ಸಂಕಲನಗಳು. ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಬಿ. ಸರೋಜಾದೇವಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ನೃಪತುಂಗ ಪ್ರಶಸ್ತಿಗಳು ಅವರಿಗೆ ಸಂದಿವೆ.

ಇದನ್ನೂ ಓದಿ | Kaamaroopi | ʼಕುದುರೆಮೊಟ್ಟೆʼ ಖ್ಯಾತಿಯ ಸಾಹಿತಿ ಕಾಮರೂಪಿ ಇನ್ನಿಲ್ಲ

Exit mobile version