ಬೆಂಗಳೂರು: ಖ್ಯಾತ ಅನುವಾದಕ ಭಾಲಚಂದ್ರ ಜಯಶೆಟ್ಟಿ (83) ಭಾನುವಾರ ಮಧ್ಯಾಹ್ನ ಬೆಂಗಳೂರಲ್ಲಿ ನಿಧನ ಹೊಂದಿದ್ದಾರೆ. ಮೃತರಿಗೆ ಪತ್ನಿ, ಮೂವರು ಪುತ್ರಿಯರು, ಒಬ್ಬ ಪುತ್ರ ಇದ್ದಾರೆ.
ಇವರು ಕನ್ನಡದಿಂದ ಹಿಂದಿಗೆ, ಹಿಂದಿಯಿಂದ ಕನ್ನಡಕ್ಕೆ, ಮರಾಠಿಯಿಂದ ಕನ್ನಡಕ್ಕೆ ಹಲವಾರು ಕೃತಿಗಳನ್ನು ಅನುವಾದಿಸಿ ಹೊರತಂದಿದ್ದಾರೆ. 1998ರಲ್ಲಿ ಬೀದರ್ ಜಿಲ್ಲಾ ಮಟ್ಟದ 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಅವರು ಆಯ್ಕೆಯಾಗಿದ್ದರು. 11 ಸೃಜನಶೀಲ ಕೃತಿಗಳು, 10ಕ್ಕೂ ಹೆಚ್ಚು ಅನುವಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಕಲ್ಬುರ್ಗಿಯ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನ ಸಂಸ್ಥೆಯ ಬೆಳ್ಳಿ ಹಬ್ಬದ “ಬೆಳ್ಳಿ ಸಿದ್ದ” ಮಾಲಿಕೆಯ 26 ಕೃತಿಗಳ ಸಂಪಾದನೆಯನ್ನು ನಿರ್ವಹಿಸಿದ್ದರು. ರಾಷ್ಟ್ರದ ವಿವಿಧ ಬಾನುಲಿ ಕೇಂದ್ರಗಳಲ್ಲಿ ಇವರ ಚಿಂತನೆಗಳು, ಭಾಷಣಗಳು, ಕವಿತೆಗಳು ಪ್ರಸಾರವಾಗಿವೆ. ದೇಶದಾದ್ಯಂತ ಅನೇಕ ಭಾರತೀಯ ಲೇಖಕರ ಸಮ್ಮೇಳನ, ಕಮ್ಮಟ, ಶಿಬಿರ, ಆಧುನಿಕ ಕನ್ನಡ ಹಿಂದಿ ಸಾಹಿತ್ಯದ ಕುರಿತ ವಿಶೇಷ ಸಭೆಗಳಲ್ಲಿ ಭಾಗವಹಿಸಿದ್ದರು. ಉಪನ್ಯಾಸಕರಾಗಿದ್ದ ಇವರು 1997ರಲ್ಲಿ ಕಲ್ಬುರ್ಗಿ ಸರ್ಕಾರಿ ಪದವಿ ಕಾಲೇಜು ಪ್ರಾಚಾರ್ಯರಾಗಿ ನಿವೃತ್ತರಾಗಿದ್ದರು.
ಬೀದರ್ ಜಿಲ್ಲೆ ರಾಜೇಶ್ವರ ಗ್ರಾಮದಲ್ಲಿ ಜನಿಸಿದ ಭಾಲಚಂದ್ರ ಜಯಶೆಟ್ಟಿ ಅವರು, 1994ರಲ್ಲಿ ಭಾರತೀಯ ಕಾವ್ಯ ಮೀಮಾಂಸೆ ಅನುವಾದಕ್ಕಾಗಿ ರಾಷ್ಟ್ರಪತಿಗಳಿಂದ ರಾಷ್ಟ್ರ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಕೇಂದ್ರೀಯ ಹಿಂದಿ ನಿರ್ದೇಶನಾಲಯ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದಾರೆ. ಇವರ ಬಗ್ಗೆ ಲೇಖಕ ಸಂಗಮನಾಥ ರೇವತಗಾಂವ್ ಬರೆದ ʻಭಾಲಚಂದ್ರ ಜಯಶೆಟ್ಟಿ- ಬದುಕು ಬರಹʼ ಕೃತಿ ಹೊರಬಂದಿದೆ. ಇಂದು ಸೋಮವಾಋ (ಡಿ.19) ಬೆಳಗ್ಗೆ 11ಕ್ಕೆ ಬೆಂಗಳೂರಿನ ಚಿತಾಗಾರದಲ್ಲಿ ಮೃತರ ಅಂತ್ಯಕ್ರಿಯೆ ನೆರವೇರಲಿದೆ.
ಇದನ್ನೂ ಓದಿ | 2 ಯುದ್ಧಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ, ಲೆಫ್ಟಿನೆಂಟ್ ಜನರಲ್ ವಿ.ಎಂ.ಪಾಟೀಲ್ ಬೆಂಗಳೂರಿನಲ್ಲಿ ನಿಧನ