ಯಾದಗಿರಿ: ಕೆರೆಯಲ್ಲಿ ಮುಳುಗಿ ವ್ಯಕ್ತಿಯೊಬ್ಬರು (Drowned in water) ಮೃತಪಟ್ಟಿದ್ದಾರೆ. ಯಾದಗಿರಿಯ ಸುರಪುರ ತಾಲೂಕಿನ ಮಲ್ಲಾ ಗ್ರಾಮದಲ್ಲಿ ಘಟನೆ ನಡೆದಿದೆ. ಮಲ್ಲಾ ಗ್ರಾಮದ ದತ್ತಪ್ಪ (40) ನೀರಿನಲ್ಲಿ ಮುಳುಗಿ ಮೃತಪಟ್ಟವರು. ನಿನ್ನೆ ಭಾನುವಾರದಿಂದ ಹುಡುಕಾಡಿದರೂ ಮೃತದೇಹ ಪತ್ತೆಯಾಗಿಲ್ಲ. ಹೀಗಾಗಿ ಗ್ರಾಮಸ್ಥರು ಕೆರೆಯ ನೀರನ್ನೇ ಖಾಲಿ ಮಾಡಿ ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮಾಹಿತಿ ನೀಡಿದರೂ ಸ್ಥಳಕ್ಕೆ ಬಾರದ ಅಧಿಕಾರಿಗಳು, ಅಗ್ನಿಶಾಮಕ ಸಿಬ್ಬಂದಿ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಬಳ್ಳಾರಿಯ ತುಂಗಭದ್ರಾ ನದಿಯಲ್ಲಿ ಮುಳುಗಿ ರೈತ ಸಾವು
ತುಂಗಭದ್ರಾ ನದಿಯಲ್ಲಿ ಪಂಪ್ ಸೆಟ್ ತೆಗೆಯಲು ಹೋದಾಗ ರೈತರೊಬ್ಬರು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ನಂದಿಪುರ ಕ್ಯಾಂಪ್ ಗಡ್ಡೆ ಮಾರಮ್ಮ ದೇವಸ್ಥಾನದ ಬಳಿ ಘಟನೆ ನಡೆದಿದೆ. ಬಾಗೇವಾಡಿ ಗ್ರಾಮದ ಹೀರನಾಗಪ್ಪ (35) ನದಿಯಲ್ಲಿ ಮುಳುಗಿ ಮೃತಪಟ್ಟವರು.
ರೈತ ಹೀರನಾಗಪ್ಪ ನದಿ ದಡದ ಜಮೀನಿಗೆ ನೀರು ಹರಿಸಲು ಪಂಪ್ ಸೆಟ್ ಹಾಕಿದ್ದರು. ಪಂಪ್ ಸೆಟ್‌ಗೆ ತ್ಯಾಜ್ಯ ಅಡ್ಡ ಇದ್ದಿದ್ದರಿಂದ ತೆರವು ಮಾಡಲು ನದಿಗೆ ಇಳಿದಿದ್ದರು. ನೀರಿನ ಆಳದ ಅರಿವಿಲ್ಲದೇ ನದಿಗೆ ಇಳಿದಾಗ, ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ. ನದಿಯಲ್ಲಿ ಮೃತದೇಹ ಹೊರತೆಗೆದಿದ್ದಾರೆ. ಸಿರಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಕೈಗೊಂಡಿದ್ದಾರೆ.
ಇದನ್ನೂ ಓದಿ: Road Accident : ಅಡ್ಡ ಬಂದ ನಾಯಿ ಮರಿ ಮೇಲೆ ಬೈಕ್ ಹತ್ತಿಸಿದ ಸವಾರ
ಆಟವಾಡುತ್ತಾ ಕಾಲುವೆಗೆ ಕಾಲು ಜಾರಿ ಬಿದ್ದು 4 ವರ್ಷದ ಬಾಲಕ ಸಾವು
ಚಿಕ್ಕೋಡಿ: ಕಾಲುವೆಯಲ್ಲಿ ಕಾಲು ಜಾರಿ ಬಿದ್ದು ಬಾಲಕನೊರ್ವ ಮೃತಪಟ್ಟಿರುವ ದಾರುಣ (Drowned in water) ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಜೋಡಕುರಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಅರುಣ ಖದ್ದಿ (4) ಮೃತ ದುರ್ದೈವಿ. ಘಟಪ್ರಭಾ ಎಡದಂಡೆ ಕಾಲುವೆಯಲ್ಲಿ ಆಟವಾಡಲು ಹೋದ ಅರುಣ ಕಾಲುಜಾರಿ ಬಿದ್ದು ಮೃತಪಟ್ಟಿದ್ದಾನೆ.
ಭಾರಿ ಮಳೆ ಹಿನ್ನೆಲೆಯಲ್ಲಿ ಕಾಲುವೆಗೆ ನೀರು ಬಿಡಲಾಗಿತ್ತು. ಕಾಲುವೆಗೆ ಬಿದ್ದಾಗ ನೀರಿನಲ್ಲಿ ಮುಳುಗಿ ಬಾಲಕ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಚಿಕ್ಕೋಡಿ ಪೊಲೀಸರು ಪ್ರಕರಣ ದಾಖಲಾಗಿದೆ.
ದಾವಣಗೆರೆಯಲ್ಲಿ ವಿದ್ಯುತ್ ತಗುಲಿ ವ್ಯಕ್ತಿ ಸಾವು
ವಿದ್ಯುತ್ ತಗುಲಿ ವ್ಯಕ್ತಿಯೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ಕಡರನಾಯಕನಹಳ್ಳಿಯ ಡಿ ಎಸ್ ಸುರೇಶ್ (40) ಮೃತ ದುರ್ದೈವಿ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕಡರನಾಯಕನಹಳ್ಳಿಯಲ್ಲಿ ಘಟನೆ ನಡೆದಿದೆ. ಜಮೀನಿನಲ್ಲಿ ಪಂಪ್ ಸೆಟ್ ಚಾಲನೆ ಮಾಡುವಾಗ ಈ ಘಟನೆ ನಡೆದಿದೆ. ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ