ಕಲಬುರಗಿ: ವಿವಾಹ ನಿಶ್ಚಯವಾಗಿದ್ದ (Marriage engagement) ಯುವತಿಯೊಬ್ಬರನ್ನು ಧೂರ್ತನೊಬ್ಬ ಅತ್ಯಾಚಾರ ಮಾಡಿದ್ದಲ್ಲದೆ, ಕೊನೆಗೆ ಚಾಕುವಿನಿಂದ ಇರಿದು ಕೊಲೆ (woman raped and murdered) ಮಾಡಿದ ಭೀಕರ ಘಟನೆ ನಡೆದಿದೆ. ಯಾದಗಿರಿ ತಾಲೂಕಿನ ಮುದ್ನಾಳ್ ತಾಂಡದ ನಿವಾಸಿ ಸವಿತಾ ರಾಠೋಡ್ (35) ಎಂಬವರೇ ಹೀಗೆ ಜೀವ ಕಳೆದುಕೊಂಡ ನತದೃಷ್ಟೆ. ಯಾದಗಿರಿ ತಾಲೂಕಿನ (Yadagiri news) ಕಂಚಗಾರಹಳ್ಳಿ ಕ್ರಾಸ್ ಬಳಿ ಈ ಘಟನೆ (Murder Case) ನಡೆದಿದೆ.
ಸವಿತಾ ಅವರು ಜಮೀನಿಗೆ ಕೆಲಸ ಮಾಡಲು ಹೋದಾಗ ಈ ಘಟನೆ ನಡೆದಿದ್ದು, ಆಕೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ. ಯುವತಿಯ ಕುತ್ತಿಗೆ ಹಾಗೂ ಕಿವಿಗೆ ಚಾಕುವಿನಿಂದ ಇರಿಯಲಾಗಿದೆ. ಇದು ಸಚಿನ್ ಎಂಬಾತನ ಕೃತ್ಯವೆಂದು ಪೊಲೀಸರು ಮೇಲ್ನೋಟಕ್ಕೆ ಪತ್ತೆ ಹಚ್ಚಲಾಗಿದೆ. ಆದರೆ, ಇದರಲ್ಲಿ ಇನ್ನಷ್ಟು ಮಂದಿ ಸೇರಿಕೊಂಡಿರುವ ಸಾಧ್ಯತೆಗಳೂ ಇವೆ ಎಂಬ ಸಂಶಯವಿದೆ.
ಸವಿತಾ ಅವರಿಗೆ ಹೆತ್ತವರಿಲ್ಲ. ಹೀಗಾಗಿ ಆಕೆ ತನ್ನ ವಿಕಲಚೇತನ ಸಹೋದರನ ಜತೆಗೆ ವಾಸವಾಗಿದ್ದರು. 35 ವರ್ಷವಾದರೂ ಮದುವೆಯಾಗಿಲ್ಲ. ಇನ್ನೂ ಎಷ್ಟು ದಿನ ವಿಕಲಚೇತನ ಅಣ್ಣನಿಗೆ ಹೊರೆಯಾಗಿರಬೇಕು ಎಂದು ನೋವು ಅನುಭವಿಸುತ್ತಿದ್ದ ಸವಿತಾಗೆ ಇತ್ತೀಚೆಗೆ ಮದುವೆ ಪ್ರಸ್ತಾಪವೊಂದು ಕೂಡಿಬಂದಿತ್ತು. ಕೇವಲ ನಾಲ್ಕೈದು ದಿನಗಳ ಹಿಂದೆ ಆಕೆಯ ವಿವಾಹ ನಿಶ್ಚಯವಾಗಿತ್ತು. ಈ ಸಂಭ್ರಮವನ್ನೆಲ್ಲ ಮುಗಿಸಿಕೊಂಡು ಆಕೆ ಕಳೆದ ಶನಿವಾರ ಎಂದಿನಂತೆ ಜಮೀನಿಗೆ ತೆರಳಿದ್ದರು.
ಆಗ ಆಕೆಯನ್ನು ಹಿಂಬಾಲಿಸಿ ಬಂದ ದುಷ್ಕರ್ಮಿಗಳು ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಲ್ಲದೆ, ಚೂರಿಯಿಂದ ಇರಿದು ಕೊಲೆ ಮಾಡಿದ್ದಾರೆ. ಚಾಕುವಿನಿಂದ ಇರಿದ ದುಷ್ಕರ್ಮಿಗಳು ಆಕೆಯನ್ನು ಜಮೀನಿನಲ್ಲೇ ಬಿಟ್ಟು ಹೋಗಿದ್ದರು. ವಿಷಯ ತಿಳಿದ ಗ್ರಾಮಸ್ಥರು ಆಕೆಯನ್ನು ಕಲಬುರರಗಿ ಆಸ್ಪತ್ರೆಗೆ ದಾಖಲಿಸಿದ್ದರು. ಇದೀಗ ಸೋಮವಾರ ಮುಂಜಾನೆ ಆಕೆ ಚಿಕಿತ್ಸೆ ಫಲಿಸದೆ ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ : Self Harming: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ; ಗಂಡನಿಂದಲೇ ಕೊಲೆ ಆರೋಪ
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಂತಕ ಸಚಿನ್ ಸವಿತಾಳನ್ನು ಯಾಕೆ ಕೊಂದ. ಆತ ಅವಳನ್ನು ಮದುವೆಯಾಗಲು ಬಯಸಿದ್ದನೇ? ಬೇರೆಯವರು ಮದುವೆಯಾಗುತ್ತಿರುವುದನ್ನು ಸಹಿಸಲಾಗದೆ ಕೊಂದನೇ? ಇನ್ನು ಈಕೆ ತನಗೆ ಸಿಗುವುದಿಲ್ಲ ಎಂಬ ಹತಾಶೆಯಿಂದ ಕೊಂದನೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಘಟನೆ ಪ್ರದೇಶದಲ್ಲಿ ಭಾರಿ ಸಂಕಟವನ್ನು ಉಂಟು ಮಾಡಿದೆ. ಅದರಲ್ಲೂ ವಿಕಲಚೇತನ ಅಣ್ಣನ ಸಂಕಟ ಹೇಳತೀರದಾಗಿದೆ. ಎಷ್ಟು ಕಷ್ಟವಿದ್ದರೂ ಯಾವುದನ್ನೂ ತೋರಿಸದೆ ಸೋದರಿಯನ್ನು ಸಾಕಿದೆ. ಈಗ ಮದುವೆ ಮಾಡಿಕೊಡುವ ಹಂತದಲ್ಲಿ ಈ ರೀತಿಯ ದುಷ್ಟರು ಕೊಲೆ ಮಾಡಿದ್ದನ್ನು ಸಹಿಸಲಾಗದೆ ಆತ ಆಸ್ಪತ್ರೆಯಲ್ಲಿ ಕಣ್ಣೀರು ಹಾಕುತ್ತಿದ್ದರು.
ದುಷ್ಕರ್ಮಿಗಳನ್ನು ಹಿಡಿದು ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ ವಿಕಲ ಚೇತನ ಅಣ್ಣ. ಈಗ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.