Site icon Vistara News

Murder Case : ಕುಡಿಯುವ ನೀರಿಗಾಗಿ ಚಿಮ್ಮಿತು ರಕ್ತ; ಚಾಕು ಇರಿದು ಯುವಕನ ಕೊಲೆ

Murder case For water dispute

ಯಾದಗಿರಿ: ಎಲ್ಲೆಡೆ ಕುಡಿಯುವ ನೀರಿಗಾಗಿ ಹಾಹಾಕರ (Water Crisis) ಶುರುವಾಗಿದೆ. ಗಂಟೆಗಟ್ಟಲೇ ಕಾಯುತ್ತಾ, ಹಗಲಿರುಳು ಎನ್ನದೇ ನಲ್ಲಿ ಮುಂದೆ ಕೂರುವಂತಾಗಿದೆ. ಬರಗಾಲವು ತೀವ್ರವಾಗಿ ಆವರಿಸಿದೆ. ಈ ಮಧ್ಯೆ ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದಲ್ಲಿ ಕುಡಿಯುವ ನೀರಿಗಾಗಿ ಸಂಬಂಧಿಕರೇ ಕಿತ್ತಾಡಿಕೊಂಡಿದ್ದು, ರಕ್ತವನ್ನೇ (Murder Case) ಹರಿಸಿದ್ದಾರೆ.

ಕುಡಿಯುವ ನೀರಿಗಾಗಿ ಶುರುವಾದ ಜಗಳವು ಕೊಲೆಯಲ್ಲಿ ಅಂತ್ಯವಾಗಿದೆ. ನಂದಕುಮಾರ ಕಟ್ಟಿಮನಿ (21)ಕೊಲೆಯಾದವನು. ಹಣಮಂತ ಹಾಗೂ ಹಣಮವ್ವ ಕೊಲೆ ಆರೋಪಿಗಳಾಗಿದ್ದಾರೆ. ನೀರಿನ ವಿಚಾರವಾಗಿ ನಂದಕುಮಾರನ ಅಜ್ಜಿ ಜತೆ ಆರೋಪಿಗಳು ಜಗಳವಾಡಿದ್ದರು.

ಹೊರಹೋಗಿ ಮನೆಗೆ ವಾಪಸ್‌ ಬಂದ ನಂದಕುಮಾರಗೆ ಗಲಾಟೆ ವಿಚಾರವನ್ನು ಅಜ್ಜಿ ತಿಳಿಸಿದ್ದರು. ಹೀಗಾಗಿ ಅಜ್ಜಿ ಜತೆ ನೀವೂ ಯಾಕೆ ಜಗಳ ಮಾಡಿದ್ದೀರಿ ಎಂದು ಮೊಮ್ಮಗ ನಂದಕುಮಾರ್‌ ಸಂಬಂಧಿಗಳಾದ ಹಣಮಂತ ಮತ್ತು ಹಣಮವ್ವರಿಗೆ ಪ್ರಶ್ನೆ ಮಾಡಿದ್ದ. ಇದೇ ವೇಳೆ ಮಾತಿಗೆ ಮಾತು ಬೆಳೆದು ಜಗಳಕ್ಕೆ ತಿರುಗಿದೆ. ಜಗಳವು ವಿಕೋಪಕ್ಕೆ ತಿರುಗಿದ್ದು, ನಂದಕುಮಾರ್‌ಗೆ ಹಾಗೂ ಈತನ ತಾಯಿಗೂ ಹಲ್ಲೆ ನಡೆಸಿದ್ದಾರೆ.

ಕೊಲೆಯಾದ ನಂದಕುಮಾರ ಕಟ್ಟಿಮನಿ

ಇಷ್ಟಕ್ಕೆ ಸುಮ್ಮನಾಗದೆ ಹಣಮಂತ ಹಾಗೂ ಹಣಮವ್ವ ಎಂಬುವವರು ನಂದಕುಮಾರಗೆ ಚಾಕು ಇರಿದು ಕೊಲೆ ಮಾಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣ ಸಂಬಂಧ ಹುಣಸಗಿ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಹಣಮಂತ ಹಾಗೂ ಹಣಮವ್ಬ ಇಬ್ಬರನ್ನು ಬಂಧಿಸಲಾಗಿದೆ.

ಇದನ್ನೂ ಓದಿ:Blast In Bengaluru: ರಾಮೇಶ್ವರಂ ಕೆಫೆ ಸ್ಫೋಟ; ಮತ್ತಿಬ್ಬರನ್ನು ಬಂಧಿಸಿದ ಎನ್‌ಐಎ!

ಮಲೆನಾಡಿನ ಗ್ರಾಮದಲ್ಲಿ ಹೆಣ್ಣು ಮಗು ಅಪಹರಣ, ಆತಂಕ

ಹಾಸನ: ಗುಡಿಸಲಿನಲ್ಲಿ ಮಲಗಿದ್ದ ಮಗುವೊಂದನ್ನು ದುರುಳರು ಅಪಹರಿಸಿದ (Child Abduction) ಆತಂಕಕಾರಿ ಘಟನೆ ಹಾಸನ ಜಿಲ್ಲೆಯ (Hasan news) ಸಕಲೇಶಪುರ ತಾಲ್ಲೂಕಿನ ಮಳಲಿ ಗ್ರಾಮದಲ್ಲಿ ನಡೆದಿದೆ.

14 ತಿಂಗಳ ಹೆಣ್ಣು ಮಗುವನ್ನು ಕಿಡಿಗೇಡಿಗಳು ಕದ್ದೊಯ್ದಿದ್ದಾರೆ. ಕಳುವಾದ ಮಗು ಸಂಜು ಮತ್ತು ರೋಹಿತ್ ಎಂಬ ದಂಪತಿಯ ಪುತ್ರಿ. ಸಂಜು ಮತ್ತು ರೋಹಿತ್ ದಂಪತಿ ಮಧ್ಯಪ್ರದೇಶ ರಾಜ್ಯದ ಸತ್ಮ ಜಿಲ್ಲೆಯ ವೀರ್‌ಸಿಂಗ್‌ಪುರ್ ತಾಲ್ಲೂಕಿನವರಾಗಿದ್ದು, ಕಳೆದ ಮೂರು ತಿಂಗಳ ಹಿಂದೆ ಇಟ್ಟಿಗೆ ಕೆಲಸಕ್ಕಾಗಿ ಬಂದಿದ್ದರು.

ದಂಪತಿಗೆ 4 ವರ್ಷದ ಗಂಡು ಮಗುವೂ ಇದೆ. ಸಂಜೆ ಕೆಲಸ ಮುಗಿಸಿ ಬಂದು ಮನೆಯಲ್ಲಿ ಇಬ್ಬರು ಪುಟ್ಟ ಕಂದಮ್ಮಗಳನ್ನು ಮಲಗಿಸಿ ದಂಪತಿ ಸ್ನಾನಕ್ಕೆ ನದಿಗೆ ತೆರಳಿದ್ದರು. ಇಪ್ಪತ್ತು ನಿಮಿಷದ ಬಳಿಕ ದಂಪತಿ ಮನೆಗೆ ವಾಪಸ್ ಆದಾಗ ಹೆಣ್ಣು ಮಗು ಮನೆಯಲ್ಲಿ ಇರಲಿಲ್ಲ. ಮಗುವನ್ನು ಅಪಹರಿಸಿದ ಆರೋಪಿಗಳು ಗಂಡು ಮಗುವನ್ನು ಹಾಗೇ ಬಿಟ್ಟು ಹೋಗಿದ್ದಾರೆ.

ಮಗುವನ್ನು ಹುಡುಕಿ‌ ಕೊಡುವಂತೆ ಪೊಲೀಸ್ ಠಾಣೆಗೆ ದಂಪತಿ ದೂರು ಸಲ್ಲಿಸಿದ್ದಾರೆ. ಹೆಣ್ಣು ಮಗುವನ್ನು ಮಾತ್ರ ಅಪಹರಿಸಿರುವ ಹಿನ್ನೆಲೆಯಲ್ಲಿ ನಾನಾ ಬಗೆಯ ಶಂಕೆಗಳು ವ್ಯಕ್ತವಾಗಿವೆ. ದಂಪತಿ ಹಾಗೂ ಮಕ್ಕಳನ್ನು ಗಮನಿಸುತ್ತಿದ್ದ ವ್ಯಕ್ತಿಗಳು ಈ ಕೃತ್ಯ ಮಾಡಿರಬಹುದು ಎಂದು ಶಂಕಿಸಲಾಗಿದೆ. ಸಕಲೇಶಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆ

ಕೊಡಗು: ನೇಣು ಬಿಗಿದುಕೊಂಡು‌ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಸೋಮವಾರಪೇಟೆಯ ಸುವಿದ್ ಲಾಡ್ಜ್‌ನಲ್ಲಿ ನಡೆದಿದೆ. ಎರಡೂವರೆ ತಿಂಗಳಿಂದ ಲಾಡ್ಜ್‌ನಲ್ಲಿದ್ದ ದಂಪತಿ, ಬುಧವಾರ ಇದ್ದಕ್ಕಿದ್ದಂತೆ ಆತ್ಮಹತ್ಯೆಗೆ ಮಾಡಿಕೊಂಡಿರುವುದು ಕಂಡುಬಂದಿದೆ.

ತೆಲಂಗಾಣದ ರಾಜು (55) ಮತ್ತು ಸ್ವಾತಿ (53) ಮೃತ ದಂಪತಿ. ಎರಡೂವರೆ ತಿಂಗಳಿಂದ ನಿತ್ಯವೂ ಲಾಡ್ಜ್ ಬಿಲ್ ಪಾವತಿಸುತ್ತಿದ್ದ ದಂಪತಿ, ಏನೂ ಕೆಲಸ ಮಾಡದೇ ಸುತ್ತಾಡಿಕೊಂಡಿದ್ದರು ಎನ್ನಲಾಗಿದೆ. ಹಣಕಾಸಿನ ಸಮಸ್ಯೆಯಿಂದ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಸೋಮವಾರಪೇಟೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version