ಯಾದಗಿರಿ: ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಪಕ್ಷದ ಎಲ್ಲ ಕಾರ್ಯಕರ್ತರು, ನಾಯಕರು ಒಟ್ಟಾಗಿ ಶ್ರಮಿಸಬೇಕು. ಯಾರಿಗೇ ಟಿಕೆಟ್ ನೀಡಿದರೂ ಗೆಲ್ಲಿಸಬೇಕು, ಉಳಿದವರಿಗೆ ಎಂಎಲ್‌ಸಿ ಹಾಗೂ ನಿಗಮ ಮಂಡಳಿ ನೇಮಕ ಮಾಡಲಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಯಾದಗಿರಿಯಲ್ಲಿ ಆಯೋಜಿಸಿದ್ದ ಪ್ರಜಾಧ್ವನಿ (Prajadhwani) ಯಾತ್ರೆ ಸಮಾವೇಶದಲ್ಲಿ ಡಿ.ಕೆ. ಶಿವಕುಮಾರ್ ಮಾತನಾಡಿದರು.
ಈ ಕಾರ್ಯಕ್ರಮ ಯಾದಗಿರಿಗೆ ಶಕ್ತಿ ನೀಡುವ ಕಾರ್ಯಕ್ರಮ. ಕಾಂಗ್ರೆಸ್ ಪಕ್ಷಕ್ಕೆ ಮಹಾತ್ಮಾ ಗಾಂಧಿ, ಸುಭಾಷ್ ಚಂದ್ರ ಬೋಸ್, ಬಾಬು ಜಗಜೀವನ್ ರಾಮ್, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಅಧ್ಯಕ್ಷರಾಗಿದ್ದಾರು. ಇಂತಹ ಮಹನೀಯರು ಅಲಂಕರಿಸಿದ ಸ್ಥಾನಕ್ಕೆ ನಿಮ್ಮ ಮಣ್ಣಿನ ಮಗ, ಧೀಮಂತ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಆಯ್ಕೆಯಾಗಿದ್ದಾರೆ.
ಧರಂ ಸಿಂಗ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ಭಾಗದ ಜನರಿಗೆ ಶಿಕ್ಷಣ, ಆಹಾರ, ಉದ್ಯೋಗ, ಆರೋಗ್ಯಕ್ಕೆ ತೊಂದರೆಯಾಗುತ್ತಿದೆ ಎಂದು ಚರ್ಚೆ ಮಾಡಿ ಈ ಭಾಗಕ್ಕೆ 371 ಜೆ ಮೂಲಕ ಸಂವಿಧಾನಕ್ಕೆ ತಿಂದ್ದುಪಡಿ ತಂದು ವಿಶೇಷ ಸ್ಥಾನಮಾನ ನೀಡಬೇಕು ಎಂದು ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಆಗ ಉಪಪ್ರಧಾನಿಯಾಗಿದ್ದ ಆಡ್ವಾಣಿ ಅವರು ಈ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದು ಪತ್ರ ಬರೆದರು. ಆದರೆ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಹೋರಾಟ ಮುಂದುವರಿಸಿ ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಎಲ್ಲ ವಿರೋಧ ಪಕ್ಷಗಳ ಜತೆ ಮಾತನಾಡಿ, 371ಜೆ ತಿದ್ದುಪಡಿ ಮಾಡುವ ಮೂಲಕ ಈ ಭಾಗದ ಜನರಿಗೆ ಅನುಕೂಲ ಮಾಡಿಕೊಟ್ಟರು. ಬಿಜೆಪಿ ಸರ್ಕಾರ ಇಂತಹ ಯಾವುದಾದರೂ ಒಂದು ಕಾರ್ಯಕ್ರಮ ಮಾಡಿದ್ದಾರಾ?
ಪಿಎಸ್ಐ ನೇಮಕಾತಿ ಸೇರಿದಂತೆ ಎಲ್ಲಾ ಇಲಾಖೆ ಹುದ್ದೆಗಳು ಹಾಗೂ ಸರ್ಕಾರಿ ಉದ್ಯೋಗಗಳ ನೇಮಕಾತಿಯಲ್ಲಿ ಅಕ್ರಮ ಮಾಡಿ ಯುವಕರ ಭವಿಷ್ಯಕ್ಕೆ ಕೊಳ್ಳಿ ಇಟ್ಟಿದ್ದಾರೆ. ಈ ಎಲ್ಲ ಅಕ್ರಮಗಳಿಗೆ ಮುಖ್ಯಮಂತ್ರಿಗಳು, ಮಂತ್ರಿಗಳು ಇಲಾಖೆ ಅಧಿಕಾರಿಗಳ ಸಂಪೂರ್ಣ ಬೆಂಬಲ ನೀಡಲಾಗಿದೆ. ಪರಿಣಾಮ ಐಪಿಎಸ್ ಅಧಿಕಾರಿಯಿಂದ ಕೆಲವು ಅಭ್ಯರ್ಥಿವರೆಗೂ ನೂರಾರು ಮಂದಿ ಸಿಕ್ಕಿಬಿದ್ದು ಜೈಲು ಪಾಲಾಗಿದ್ದಾರೆ. ಇದಕ್ಕೆಲ್ಲ ಕಾರಣ ಯಾರು? ಬಿಜೆಪಿ ಸರ್ಕಾರ.
ಈ ಸರ್ಕಾರ ಯುವಕ ಉದ್ಯೋಗದಿಂದ, ಸರ್ಕಾರದ ಕಾಮಗಾರಿ ಗುತ್ತಿಗೆವರೆಗೂ ಪ್ರತಿಯೊಂದರಲ್ಲೂ ಲಂಚ, ಭ್ರಷ್ಟಾಚಾರ ಮಾಡುತ್ತಿದೆ. ಅವರದೇ ಪಕ್ಷದ ಕಾರ್ಯಕರ್ತ ಸಂತೋಷ್ ಪಾಟೀಲ್ ಸಚಿವರಾಗಿದ್ದ ಈಶ್ವರಪ್ಪ ಅವರಿಗೆ 40% ಕಮಿಷನ್ ನೀಡಲಾಗದೇ ಆತ್ಮಹತ್ಯೆ ಮಾಡಿಕೊಂಡು ಸತ್ತುಹೋದ. ಜಿಲ್ಲಾ ಮಂತ್ರಿಯೇ ಆತ ಕೆಲಸ ಮಾಡಿದ್ದಾನೆ ಎಂದು ಹೇಳಿದ್ದರೂ ಆತನ ಕೆಲಸಕ್ಕೆ ಬಿಲ್ ಪಾವತಿ ಆಗಿಲ್ಲ.
ಈ ರೀತಿ ಉಚಿತ ಯೋಜನೆ ನೀಡಿದರೆ ಯಾರು ಕೆಲಸಕ್ಕೆ ಬರುವುದಿಲ್ಲ ಎಂದು ಬಿಜೆಪಿಯವರು ಅಪಪ್ರಚಾರ ಮಾಡಿದ್ದರು. ಅದಕ್ಕೆ ಸಿದ್ದರಾಮಯ್ಯನವರು ಅವರ ಬದಲು ನೀವು ಹೋಗಿ ಕೆಲಸಕ್ಕೆ ಎಂದು ಸಿದ್ದರಾಮಯ್ಯನವರು ಉತ್ತರ ನೀಡಿದ್ದರು. ನಮಗೆ ಈ ಕಲ್ಯಾಣ ಕರ್ನಾಟಕ ಭಾಗದಲ್ಲಿ ನಂಬಿಕೆ ಇದೆ. ಈ ಭಾಗದ 40 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಪಕ್ಷ ಯಾರನ್ನೇ ಅಭ್ಯರ್ಥಿ ಮಾಡಿದರೂ ನೀವೆಲ್ಲರೂ ಅವರನ್ನು ಗೆಲ್ಲಿಸಬೇಕು. ಟಿಕೆಟ್ ಸಿಗದವರಿಗೆ ಪಕ್ಷ ಮುಂದಿನ ದಿನಗಳಲ್ಲಿ ಎಂಎಲ್ಸಿ, ವಿವಿಧ ನಿಗಮ ಮಂಡಳಿ ಮುಖ್ಯಸ್ಥರನ್ನಾಗಿ ಮಾಡಿ ಅಧಿಕಾರ ನೀಡಲಾಗುವುದು. ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಈ ವಿಚಾರವಾಗಿ ನೀವೆಲ್ಲರೂ ಪ್ರತಿಜ್ಞೆ ಮಾಡಬೇಕು ಎಂದರು.
ಈ ಭಾಗದ ಜನರಿಗೆ ಸಂವಿಧಾನದ ಮೂಲಕ ಶಕ್ತಿ ನೀಡಿದ್ದು ಯಾರು? ಕಾಂಗ್ರೆಸ್ ಪಕ್ಷ. ಮೀಸಲಾತಿ ಕೊಟ್ಟಿದ್ದು ಯಾರು? ರಾಜಕೀಯ, ಶೈಕ್ಷಣಿಕವಾಗಿ ಮೀಸಲಾತಿ ಕಾಂಗ್ರೆಸ್ ಪಕ್ಷದ ಕೊಡುಗೆ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದ ಜನ ಅಧಿಕಾರಕ್ಕೆ ಬಂದಂತೆ. ಮೋದಿ ಅವರು ಜನ್ ಧನ್ ಅಕೌಂಟ್ ಖಾತೆ ತೆರೆಸಿ ನಿಮ್ಮ ಖಾತೆಗೆ 15 ಲಕ್ಷ ಹಾಕುವುದಾಗಿ ಹೇಳಿದ್ದರು, ಆ ಹಣ ಬಂತಾ? ಮುಂದೆ ಬಿಜೆಪಿಯವರು ನಿಮ್ಮ ಬಳಿಗೆ ಬಂದಾಗ, ಕಪ್ಪು ಹಣ ತಂದು ನಿಮ್ಮ ಖಾತಿಗೆ ಹಾಕುತ್ತೇನೆ ಎಂದಿದಲ್ಲಪ್ಪಾ, ಎಲ್ಲಿ ಎಂದು ಕೇಳಬೇಕು.
ಇದನ್ನೂ ಓದಿ : KPSC Departmental Examination : ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಯ ಪ್ರಮಾಣ ಪತ್ರ ಬಿಡುಗಡೆ
ಈ ಭಾಗದ ಮಕ್ಕಳಿಗಾಗಿ ಈ ಪ್ರದೇಶದಲ್ಲಿ 100 ಕಾಲೇಜುಗಳ ಸ್ಥಾಪನೆ ಮಾಡುವುದಾಗಿ ಮಾತು ನೀಡಿದ್ದೇವೆ. ಈ ಭಾಗದ ನಾಯಕರೆಲ್ಲರೂ ಸೇರಿ ಜನರಿಗೆ ಏನು ಮಾಡಬೇಕು, ಕಷ್ಟದಲ್ಲಿರುವ ಜನರಿಗೆ ಹೇಗೆ ಸಹಾಯ ಮಾಡಬೇಕು ಚರ್ಚೆ ಮಾಡಿ, ಮಹಾತ್ಮಾ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ನಾಯಕತ್ವ ವಹಿಸಿದ ಬೆಳಗಾವಿಯಲ್ಲಿ ಗೃಹಜ್ಯೋತಿ ಯೋಜನೆ ಘೋಷಣೆ ಮಾಡಿದೆವು. ಈ ಯೋಜನೆ ಮೂಲಕ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು. ಆ ಮೂಲಕ ಪ್ರತಿ ತಿಂಗಳಿಗೆ 1500ರಂತೆ ವರ್ಷಕ್ಕೆ 18 ಸಾವಿರದಷ್ಟು ಹಣವನ್ನು ಪ್ರತಿ ಕುಟುಂಬ ಉಳಿಸಬಹುದಾಗಿದೆ ಎಂದು ಹೇಳಿದರು.