ಸುರಪುರ (ಯಾದಗಿರಿ) : ಪ್ರತಿಯೊಂದು ಊರಿನ ಜಾತ್ರೆಯೂ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿರುತ್ತದೆ. ಒಂದು ರಥ, ಮೂರು ರಥ, ಏಳು ರಥಗಳನ್ನು ಎಳೆಯುವುದು, ನಿರ್ದಿಷ್ಟ ಜಾತಿಯವರೇ ರಥ ಕಟ್ಟಬೇಕು, ರಥ ಎಳೆಯಬೇಕು ಎಂಬ ನಿಯಮಗಳು ಇರುತ್ತವೆ. ಅದೇ ರೀತಿ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಸಮೀಪದ ಪತ್ತೆಪುರದ ಜಾತ್ರೆಯೂ (Surapura Jatre) ತನ್ನದೇ ಆದ ವಿಶೇಷತೆಯನ್ನು ಹೊಂದಿದೆ.
ಪತ್ತೆಪುರ ಗ್ರಾಮದ ಬಲಭೀಮೇಶ್ವರ ಜಾತ್ರೆಯಲ್ಲಿ (Pattepura Balabheemeshwara jatre) ಮಹಿಳೆಯರ ಮೇಲೆ ಪೂಜಾರಿ ನಡೆದುಕೊಂಡು (Poojari walking on women) ಹೋಗುವ ವಿಶಿಷ್ಟ ಆಚರಣೆ ಎಲ್ಲರ ಗಮನ ಸೆಳೆಯುತ್ತದೆ.
ಸುರಪುರ ತಾಲೂಕಿನ ಕೆಂಭಾವಿ ಸಮೀಪದ ಪತ್ತೆಪುರ ಗ್ರಾಮದ ಬಲಭೀಮೇಶ್ವರ ದೇವರ ಜಾತ್ರೆ ಪ್ರತಿ ವರ್ಷದವೂ ದೀಪಾವಳಿ ಹಬ್ಬದ ದಿನದಂದೇ ಅದ್ದೂರಿಯಾಗಿ ನಡೆಯುತ್ತದೆ. ಹಬ್ಬದ ದಿನ ಅಡ್ಡ ಪಲ್ಲಕ್ಕಿ ಮೆರವಣಿಗೆ, ಗ್ರಾಮದ ಹಲವು ಬೀದಿಗಳಲ್ಲಿ ಬಾಜಾ ಭಜಂತ್ರಿ, ಡೊಳ್ಳು ಕುಣಿತ ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ. ಈ ಜಾತ್ರೆಯ ವಿಶೇಷ ಎಂದರೆ, ಬಲಭಿಮೇಶ್ವರ ದೇವರ ಪಟ್ಟದ ಅರ್ಚಕರಾದ ರಾಮಣ್ಣ ಪೂಜಾರಿ ಅವರು ಮುಂದಿನ ಭವಿಷ್ಯದ ಬಗ್ಗೆ ಕಾರ್ಣಿಕ, ಹೇಳಿಕೆ ನುಡಿ ಹೇಳುತ್ತಾರೆ.
ಇಲ್ಲಿನ ಮತ್ತೊಂದು ಪ್ರಮುಖ ಸಂಪ್ರದಾಯವೆಂದರೆ, ಸರತಿ ಸಾಲಿನಲ್ಲಿ ಮಲಗಿರುವ ಹೆಣ್ಣುಮಕ್ಕಳ ಮೇಲೆ ದೇವರ ಪೂಜಾರಿ ನಡೆದುಕೊಂಡು ಹೋಗುವುದು.
ಇಲ್ಲಿ ಮಹಿಳೆಯರು ಸೇವೆಯ ರೂಪದಲ್ಲಿ ದೇವಸ್ಥಾನದ ಹೊರಾಂಗಣದಲ್ಲಿ ಒತ್ತೊತ್ತಾಗಿ ಮುಖ ಕೆಳಗೆ ಮಾಡಿ ಮಲಗಿರುತ್ತಾರೆ. ಜಾತ್ರೆಯ ಸಂದರ್ಭದಲ್ಲಿ ದೇವರ ಪೂಜಾರಿ ಅವರ ಮೇಲೆ ನಡೆದುಕೊಂಡು ಹೋಗುವುದು ವಾಡಿಕೆ. ಈ ಬಾರಿಯೂ ದೇವಸ್ಥಾನದ ಮುಂದೆ ಗ್ರಾಮದ ಹೆಣ್ಣುಮಕ್ಕಳು ಸರತಿ ಸಾಲಿನಲ್ಲಿ ಮಲಗಿದಾಗ ಅವರ ಮೇಲೆ ದೇವರ ಪೂಜಾರಿಯು ನಡೆದುಕೊಂಡು ಹೋಗುವ ವಿಶಿಷ್ಟ ಆಚರಣೆ ನಡೆಸಲಾಯಿತು.
ಇಲ್ಲಿ ಮೊದಲು ಒಬ್ಬ ಪೂಜಾರಿ ಮಹಿಳೆಯರನ್ನು ದಾಟಿಕೊಂಡು ಹೋಗುತ್ತಾರೆ. ಅವರು ಬಹುತೇಕ ಮಹಿಳೆಯರ ಮೇಲೆ ಕಾಲು ಇಡದಂತೆ ಮುನ್ನೆಚ್ಚರಿಕೆ ವಹಿಸುತ್ತಾರಾದರೂ ಹಲವು ಬಾರಿ ಬೆನ್ನಿ ಮೇಲೆ ಕಾಲಿಡಬೇಕಾಗುತ್ತದೆ. ಅದಾದ ಬಳಿಕ ದೇವರನ್ನು ಹೊತ್ತ ಅಡ್ಡಪಲ್ಲಕ್ಕಿಯನ್ನು ಹೊತ್ತುಕೊಂಡು ಈ ಮಹಿಳೆಯರ ಮೇಲೆ ನಡೆದುಕೊಂಡು ಹೋಗುವುದು ಕ್ರಮ. ಇಲ್ಲಿಯೂ ಸಾಕಷ್ಟು ಮಟ್ಟಿಗೆ ಅವರ ಮೇಲೆ ಕಾಲು ಇಡದಂತೆ ಪ್ರಯತ್ನ ನಡೆಯುತ್ತದೆ. ಆದರೆ, ಪಲ್ಲಕ್ಕಿ ಹೊತ್ತವರಿಗೆ ಕೆಳಗೆ ಕಾಣುವುದಿಲ್ಲ ಮತ್ತು ವೇಗವಾಗಿ ಸಾಗಬೇಕಾದ ಹಿನ್ನೆಲೆಯಲ್ಲಿ ಮಹಿಳೆಯರ ಮೇಲೆ ಕಾಲಿಟ್ಟುಕೊಂಡೇ ನಡೆಯಬೇಕಾದ ಅನಿವಾರ್ಯತೆ ಉಂಟಾಗುತ್ತದೆ.
ಇದನ್ನೂ ಓದಿ: Deepavali 2023: ಲಕ್ಷ್ಮೀಪೂಜೆಯನ್ನು ದೀಪಾವಳಿಯ ಅಮಾವಾಸ್ಯೆಯಂದೇ ಮಾಡುವುದೇಕೆ?
ಇದನ್ನು ಇಲ್ಲಿನ ಮಹಿಳೆಯರು ಸೇವೆ ಎಂದು ಪರಿಗಣಿಸುತ್ತಾರೆ. ಸಾಕಷ್ಟು ಮಹಿಳೆಯರು ಪರಿಸರದ ನಾನಾ ಭಾಗಗಳಿಂದ ಬಂದು ಇಲ್ಲಿ ಸೇವೆ ಸಲ್ಲಿಸುತ್ತಾರೆ. ಪತ್ತೆಪುರ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮದ ಸಾವಿರಾರು ಭಕ್ತರು ಜಾತ್ರೆಯಲ್ಲಿ ಭಾಗವಹಿಸಿ ಸಂಭ್ರಮದಿಂದ ಆಚರಿಸುವುದು ಪ್ರತಿ ವರ್ಷದ ವಿಶೇಷ.