Site icon Vistara News

Yakshagana Mela : ರಾತ್ರಿಪೂರ್ತಿ ಯಕ್ಷಗಾನ ಪ್ರದರ್ಶನಕ್ಕೆ ಹೈಕೋರ್ಟ್‌ ಗ್ರೀನ್‌ ಸಿಗ್ನಲ್‌, ಕಾಲಮಿತಿಗೆ ತೆರೆ?

Yakshagana Kateel Mela

ಬೆಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮೇಳಗಳು (Kateelu Mela) ಇನ್ನು ಮುಂದೆ ರಾತ್ರಿಯಿಡೀ ಯಕ್ಷಗಾನ (Full Night Yakshagana) ಪ್ರದರ್ಶನ ನೀಡಬಹುದು ಎಂದು ರಾಜ್ಯ ಹೈಕೋರ್ಟ್‌ (Karnataka High Court) ಗ್ರೀನ್‌ ಸಿಗ್ನಲ್‌ ನೀಡಿದೆ. ರಾತ್ರಿಯಿಡೀ ಯಕ್ಷಗಾನ ಪ್ರದರ್ಶನ ನೀಡುವುದಕ್ಕೆ ಜಿಲ್ಲಾಡಳಿತ ಹಾಕಿದ್ದ ನಿರ್ಬಂಧವನ್ನು ಹೈಕೋರ್ಟ್​ (Karnataka High Court) ತೆರವು ಮಾಡಿದೆ. ಹಾಗಿದ್ದರೆ ಕಟೀಲು ಮೇಳಗಳು ಈಗ ನಡೆಸುತ್ತಿರುವ ಸಂಜೆ 5ರಿಂದ ರಾತ್ರಿ 12ರವರೆಗಿನ ಕಾಲಮಿತಿ ಪ್ರದರ್ಶನಕ್ಕೆ ತೆರೆ ಬೀಳುತ್ತದಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಹುಟ್ಟಿಕೊಂಡಿದೆ. ಆದರೆ, ಸದ್ಯ ಸಿಗುತ್ತಿರುವ ಮಾಹಿತಿಗಳ ಪ್ರಕಾರ, ಹೈಕೋರ್ಟ್‌ ಗ್ರೀನ್‌ ಸಿಗ್ನಲ್‌ ಕೊಟ್ಟರೂ ಕಟೀಲು ಮೇಳಗಳ (Yakshagana Mela) ಪ್ರದರ್ಶನ ಇಡಿ ರಾತ್ರಿಗೆ ವಿಸ್ತರಿಸುವ ಸಾಧ್ಯತೆ ಕಡಿಮೆ. ತೀರಾ ಅಗತ್ಯವೆನ್ನಿಸುವ ಸನ್ನಿವೇಶಗಳನ್ನು ಹೊರತುಪಡಿಸಿ ಕಾಲ ಮಿತಿ ಪ್ರದರ್ಶನವೇ ಮುಂದುವರಿಯಲಿದೆ.

2022ರ ನವೆಂಬರ್ 15ರಂದು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳು ಯಕ್ಷಗಾನ ಮೇಳಗಳಿಗೆ ಸಮಯ ನಿರ್ಬಂಧವನ್ನು ವಿಧಿಸಿ, ಸಂಜೆ 5 ರಿಂದ 12.30 ರವರೆಗೆ ಮಾತ್ರ ಪ್ರದರ್ಶನಕ್ಕೆ ಅವಕಾಶ ನೀಡಿ ಆದೇಶ ಹೊರಡಿಸಿದ್ದರು. ರಾತ್ರಿಯಿಂದ ಬೆಳಗಿನ ಜಾವದವರೆಗೆ ಯಕ್ಷಗಾನ ಪ್ರದರ್ಶನಕ್ಕೆ ಇರುವ ನಿರ್ಬಂಧ ಪ್ರಶ್ನಿಸಿ ಬೆಂಗಳೂರಿನ ಭಕ್ತ ಹಾಗೂ ದೇವಸ್ಥಾನದ ಭಕ್ತರಾದ ಕೃಷ್ಣ ಕುಮಾರ್ ಅವರು ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಪೀಠ ನಿರ್ಬಂಧ ತೆರವುಗೊಳಿಸಿದೆ.

ನಿರ್ಬಂಧ ವಿಧಿಸಿದ್ದು ಯಾಕೆ?

  1. ಸಾಂಪ್ರದಾಯಿಕ ಯಕ್ಷಗಾನ ಪ್ರದರ್ಶನಗಳು ‘ಶಬ್ದ ಮಾಲಿನ್ಯ (ನಿಯಂತ್ರಣ) ನಿಯಮಗಳು, 2000’ ರ ಅಡಿಯಲ್ಲಿ ಅನುಮತಿಸಿರುವ ಡೆಸಿಬಲ್ ಮಟ್ಟವನ್ನು ಮೀರುತ್ತವೆ. ಹೀಗಾಗಿ ಶಬ್ದ ಮಾಲಿನ್ಯವನ್ನು ಕಡಿಮೆ ಮಾಡುವ ಆಧಾರದ ಮೇಲೆ ನಿರ್ಬಂಧ ಹೇರಲಾಗಿತ್ತು.
  2. ರಾತ್ರಿ ಇಡೀ ಯಕ್ಷಗಾನ ಪ್ರದರ್ಶನಕ್ಕೆ ಕೆಲವು ಕಡೆ ಆಕ್ಷೇಪ ವ್ಯಕ್ತವಾಗಿತ್ತು. ಅದರಲ್ಲೂ ಪರೀಕ್ಷೆ ಸಂದರ್ಭದಲ್ಲಿ ಮಕ್ಕಳಿಗೆ, ವಯಸ್ಸಾದವರಿಗೆ ತೊಂದರೆ ಎಂಬ ವಾದ ಕೇಳಿಬಂದಿತ್ತು.
  3. ಕೊರೊನಾ ಕಾಲದಲ್ಲಿ ಯಕ್ಷಗಾನಗಳ ಪ್ರದರ್ಶನವನ್ನು ಕಾಲಮಿತಿಗೆ ಒಳಪಡಿಸಲಾಗಿತ್ತು. ಅದನ್ನೇ ಬಳಿಕ ಮುಂದುವರಿಸಲಾಗಿತ್ತು.

ಅರ್ಜಿದಾರರು ಮಾಡಿದ ವಾದ ಏನಾಗಿತ್ತು?

1.ಯಕ್ಷಗಾನವನ್ನು ಹಿಂದಿನಿಂದಲೂ ರಾತ್ರಿಯಿಂದ ಮುಂಜಾನೆಯವರೆಗೆ ಪ್ರದರ್ಶಿಸುತ್ತಾ ಬರಲಾಗಿದೆ.

2. ರಾತ್ರಿ 9 ಗಂಟೆಗೆ ಚೌಕಿ ಪೂಜೆ ಸಲ್ಲಿಸಿ ದೇವರಿಗೆ ಪೂಜೆ, ಆರತಿ ಸಲ್ಲಿಸಿದ ನಂತರ ಯಕ್ಷಗಾನ ಪ್ರದರ್ಶನ ಮತ್ತು ಅಭ್ಯಾಸಕ್ಕೆ ಈ ದೇವಾಲಯದಲ್ಲಿ ದೀರ್ಘಕಾಲದ ಇತಿಹಾಸವಿದೆ. ಇದಾದ ನಂತರ ಯಕ್ಷಗಾನ ಪ್ರದರ್ಶನ ಆರಂಭವಾಗುತ್ತಿತ್ತು.

3. ಕೋವಿಡ್​ ನಿರ್ಬಂಧಗಳ ಸಂದರ್ಭದಲ್ಲಿ ಹಾಕಿದ ನಿರ್ಬಂಧಗಳನ್ನು ಈಗಲೂ ಮುಂದುವರಿಸಬೇಕು ಎನ್ನುವುದು ಸರಿಯಲ್ಲ.

4. ಯಕ್ಷಗಾನ ಪ್ರದರ್ಶನಗಳನ್ನು ಮುಂಜಾನೆವರೆಗೆ ವಿಸ್ತರಿಸಲು ವಿಚಾರಣೆ ವೇಳೆ ಸರ್ಕಾರಿ ವಕೀಲರು ಯಾವುದೇ ಆಕ್ಷೇಪಣೆಯನ್ನು ವ್ಯಕ್ತಪಡಿಸಲಿಲ್ಲ, ಆದರೆ ನಿಗದಿತ ಶಬ್ದ ಮಟ್ಟದ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಪ್ರತಿಪಾದಿಸಿದ್ದರು.

5. ಕೋವಿಡ್ -19 ಪ್ರಾರಂಭವಾಗುವ ಮೊದಲು ಚಾಲ್ತಿಯಲ್ಲಿದ್ದಂತೆ ಯಕ್ಷಗಾನವನ್ನು ನಡೆಸಲು ಅನುಮತಿ ನೀಡುವಂತೆ ನ್ಯಾಯಾಲಯವು ಜಿಲ್ಲಾಧಿಕಾರಿ ಅಥವಾ ಸಕ್ಷಮ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದೆ.

ಇದನ್ನೂ ಓದಿ: Yakshagana Performance : ಕುಂದಾಪುರದಲ್ಲಿ ಮಕ್ಕಳ ಯಕ್ಷಗಾನ ಪ್ರದರ್ಶನ ತಡೆದ ಪೊಲೀಸ್‌!

ಕಾಲ ಮಿತಿ ಪ್ರದರ್ಶನವೇ ಮುಂದುವರಿಕೆ

ಹೈಕೋರ್ಟ್‌ ರಾತ್ರಿ ಇಡೀ ಯಕ್ಷಗಾನ ನಡೆಸಲು ಅವಕಾಶ ನೀಡಿದ್ದರೂ ಕಟೀಲು ದೇವಾಲಯದ ಮೇಳಗಳು ಕಾಲಮಿತಿಯಲ್ಲೇ ಉಳಿಯುವ ಸಾಧ್ಯತೆ ಹೆಚ್ಚಿದೆ. ಕಾಲಮಿತಿಯಲ್ಲಿ ಹಲವಾರು ಅನುಕೂಲತೆಗಳು ಇವೆ, ಕಲಾವಿದರ ಆರೋಗ್ಯವೂ ಸುಧಾರಿಸಿದೆ. ಹೀಗಾಗಿ ಮತ್ತೆ ರಾತ್ರಿ ಇಡೀ ಯಕ್ಷಗಾನ ನಡೆಸುವ ಸಾಧ್ಯತೆಗಳು ಕಡಿಮೆ ಇದೆ. ಕಟೀಲು ಕ್ಷೇತ್ರದಿಂದ ಆರು ಮೇಳಗಳು ತಿರುಗಾಟ ನಡೆಸುತ್ತಿವೆ.

Exit mobile version