ಬೆಂಗಳೂರು: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಲೋಕಾರ್ಪಣೆಗೆ ರಾಮಮಂದಿರ ಸಜ್ಜುಗೊಂಡಿದೆ. ಜನವರಿ 22 ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮಕ್ಕೆ (Ram Mandir) ಪ್ರಮುಖ ರಾಜಕೀಯ ನಾಯಕರು, ಕ್ರೀಡೆ ಹಾಗೂ ಚಿತ್ರರಂಗ ಸೇರಿ ವಿವಿಧ ಕ್ಷೇತ್ರಗಳ ಗಣ್ಯರಿಗೆ ಆಹ್ವಾನ ನೀಡಲಾಗುತ್ತಿದೆ. ಅದರಂತೆ ಕನ್ನಡದ ಖ್ಯಾತ ನಟರಾದ ರಾಕಿಂಗ್ ಸ್ಟಾರ್ ಯಶ್ ಮತ್ತು ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಗೆ ಆಹ್ವಾನ ನೀಡಲಾಗಿದೆ.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸುಮಾರು 3,000 ವಿವಿಐಪಿಗಳು, ದೇಶದ ವಿವಿಧ ಭಾಗಗಳಿಂದ 4,000 ಸಂತರು ಮತ್ತು ಸಾಧುಗಳು, 50 ದೇಶಗಳ ಪ್ರತಿನಿಧಿಗಳು ಮತ್ತು ರಾಮ ಮಂದಿರ ಚಳವಳಿಯ ಭಾಗವಾಗಿದ್ದ ‘ಕರ ಸೇವಕರ’ ಕುಟುಂಬ ಸದಸ್ಯರು ಸೇರಿದಂತೆ 7,000ಕ್ಕೂ ಹೆಚ್ಚು ಜನರಿಗೆ ಆಹ್ವಾನ ಪತ್ರಗಳನ್ನು ಈಗಾಗಲೇ ಕಳುಹಿಸಿದೆ. ಜತೆಗೆ ಚಿತ್ರರಂಗದ ಗಣ್ಯರಿಗೂ ಆಹ್ವಾನ ನೀಡಲಾಗುತ್ತಿದೆ.
ಇದನ್ನೂ ಓದಿ | Ram Mandir: ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ವಿರಾಟ್ ಕೊಹ್ಲಿ, ಸಚಿನ್ಗೆ ಆಹ್ವಾನ
ಇನ್ನು ರಾಮ ಮಂದಿರ ಟ್ರಸ್ಟ್‌ನ 3,000 ವಿವಿಐಪಿಗಳ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್, ಬಾಲಿವುಡ್ ನಟ ಅಕ್ಷಯ್ ಕುಮಾರ್, ನಟಿ ಕಂಗನಾ ರಾಣಾವತ್, ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಯೋಗ ಗುರು ರಾಮ್‌ದೇವ್ ಮತ್ತು ಕೈಗಾರಿಕೋದ್ಯಮಿಗಳಾದ ಮುಖೇಶ್ ಅಂಬಾನಿ, ರತನ್ ಟಾಟಾ ಮತ್ತು ಗೌತಮ್ ಅದಾನಿ ಸೇರಿದ್ದಾರೆ. ಇದಲ್ಲದೆ ಪ್ರಸಿದ್ಧ ಟಿವಿ ಧಾರಾವಾಹಿ ‘ರಾಮಾಯಣ’ದಲ್ಲಿ ರಾಮನ ಪಾತ್ರವನ್ನು ನಿರ್ವಹಿಸಿದ ನಟ ಅರುಣ್ ಗೋವಿಲ್ ಮತ್ತು ಸೀತೆಯ ಪಾತ್ರವನ್ನು ನಿರ್ವಹಿಸಿದ ದೀಪಿಕಾ ಚಿಖ್ಲಿಯಾ ಅವರನ್ನು ಸಹ ಟ್ರಸ್ಟ್ ಆಹ್ವಾನಿಸಿದೆ.
ಇದೀಗ ಕನ್ನಡ ಚಿತ್ರರಂಗದ ಸ್ಟಾರ್ ನಟರಾದ ಯಶ್ ಮತ್ತು ರಿಷಬ್ ಶೆಟ್ಟಿ ಅವರಿಗೂ ಆಹ್ವಾನ ಬಂದಿದೆ. ಜತೆಗೆ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟರಾದ ರಜನಿಕಾಂತ್, ಚಿರಂಜೀವಿ, ಪ್ರಭಾಸ್, ಮೋಹನ್ ಲಾಲ್, ಧನುಷ್ ಅವರು ಆಹ್ವಾನಿತರ ಪಟ್ಟಿಯಲ್ಲಿದ್ದಾರೆ.
ಇದನ್ನೂ ಓದಿ | Priyanka Kamath: ಮದುವೆ ಸಂಭ್ರಮದಲ್ಲಿ ʻಗಿಚ್ಚಿ ಗಿಲಿಗಿಲಿʼ ಖ್ಯಾತಿಯ ನಟಿ ಪ್ರಿಯಾಂಕಾ ಕಾಮತ್
ವಾರಾಣಸಿಯ 21 ಪಂಡಿತರ ತಂಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಪೂಜಾ ಕಾರ್ಯ ನಡೆಸಲಿದೆ. ಖ್ಯಾತ ವೈದಿಕ ವಿದ್ವಾಂಸ ಪಂಡಿತ್ ಲಕ್ಷ್ಮೀಕಾಂತ್ ದೀಕ್ಷಿತ್ ತಂಡವನ್ನು ಮುನ್ನಡೆಸಲಿದ್ದು, ಅವರ ಇಬ್ಬರು ಪುತ್ರರಾದ ಪಂಡಿತ್ ಜೈಕೃಷ್ಣ ದೀಕ್ಷಿತ್ ಮತ್ತು ಸುನಿಲ್ ದೀಕ್ಷಿತ್ ಮತ್ತು ಕಾಶಿಯ ಇತರ 18 ಪಂಡಿತರು ಮಾರ್ಗದರ್ಶನ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಯೋಧ್ಯೆಯ ರಾಮ ದೇವಾಲಯದ ಗರ್ಭಗುಡಿಯಲ್ಲಿ ಇರಿಸಬೇಕಾದ ವಿಗ್ರಹದ ಕೆಲಸ ಬಹುತೇಕ ಪೂರ್ಣಗೊಂಡಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ