Site icon Vistara News

Yash Birthday : ಹುಬ್ಬಳ್ಳಿ ಏರ್‌ಪೋರ್ಟ್‌ನಲ್ಲಿ ಲ್ಯಾಂಡ್‌ ಆದ ಯಶ್‌, ಸೊರಣಗಿ ಗ್ರಾಮದ ಕಡೆ ಪಯಣ

Actor Yash at Hubballi Airport

ಹುಬ್ಬಳ್ಳಿ: ತಮ್ಮ ಹುಟ್ಟುಹಬ್ಬವನ್ನು ಸಂಭ್ರಮದಿಂದ (Yash Birthday) ಆಚರಿಸುವುದಕ್ಕಾಗಿ ಬೃಹತ್‌ ಕಟೌಟ್‌ ನಿಲ್ಲಿಸಲು ಹೋಗಿ ವಿದ್ಯುದಾಘಾತದಿಂದ ಪ್ರಾಣ ಕಳೆದುಕೊಂಡ ಮೂವರು ಯುವಕರ ಕುಟುಂಬಕ್ಕೆ (Families of died youngsters) ಸಾಂತ್ವನ ಹೇಳುವುದಕ್ಕಾಗಿ ರಾಕಿಂಗ್‌ ಸ್ಟಾರ್‌ ಯಶ್‌ (Actor Yash) ಈಗ ಹುಬ್ಬಳ್ಳಿ ವಿಮಾನ ನಿಲ್ದಾಣದ (Hubballi Airport) ಮೂಲಕ ಸೊರಣಗಿ ಗ್ರಾಮಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಭಾನುವಾರ ರಾತ್ರಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೊರಣಗಿ ಗ್ರಾಮದಲ್ಲಿ ಯಶ್‌ ಅವರ ಕಟೌಟ್‌ ಏರಿಸುವ ಸಂದರ್ಭದಲ್ಲಿ ಕಬ್ಬಿಣದ ಪಟ್ಟಿಗೆ ಹೈ ಟೆನ್ಶನ್‌ ವಿದ್ಯುತ್‌ ಲೈನ್‌ ತಗುಲಿ ಮೂವರು ಯುವಕರು ಮೃತಪಟ್ಟಿದ್ದಲ್ಲದೆ, ಮೂವರು ಗಂಭೀರವಾಗಿ ಗಾಯಗೊಂಡಿದ್ದರು.

ಈ ವಿಷಯ ತಿಳಿಯುತ್ತಲೇ ವಿದೇಶದಲ್ಲಿ ಶೂಟಿಂಗ್‌ನಲ್ಲಿದ್ದ ಚಿತ್ರ ನಟ ಯಶ್‌ ಅವರು ಭಾರತಕ್ಕೆ ಧಾವಿಸಿ ಬಂದಿದ್ದಾರೆ. ತಮ್ಮ ಮೇಲೆ ಅತೀವವಾದ ಅಭಿಮಾನವನ್ನು ಇಟ್ಟುಕೊಂಡ ಯುವಕ ಸಾವಿನ ಹಿನ್ನೆಲೆಯಲ್ಲಿ ಕುಟುಂಬದವರಿಗೆ ಸಾಂತ್ವನ ಹೇಳಲು ಅವರು ಮುಂದಾಗಿದ್ದಾರೆ.

ಇದರಂತೆ ಭಾರತಕ್ಕೆ ಬಂದು ವಿಶೇಷ ವಿಮಾನದಲ್ಲಿ ಸಂಜೆ 5 ಗಂಟೆಯ ಹೊತ್ತಿಗೆ ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ತಲುಪಿದರು. ಅಲ್ಲಿಂದ ಕಪ್ಪು ಫಾರ್ಚುನರ್‌ ಕಾರಿನಲ್ಲಿ ಅವರು ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಸೊರಗಣಿ ಗ್ರಾಮಕ್ಕೆ ಧಾವಿಸಿದ್ದಾರೆ.

ವಿಮಾನ ನಿಲ್ದಾಣದಲ್ಲಿ ನೂರಾರು ಅಭಿಮಾನಿಗಳು ಅವರಿಗೆ ಮುತ್ತಿಗೆ ಹಾಕಿದರು. ಅವರಿಗೆ ಹೂಗುಚ್ಛ ನೀಡಲು ಮುಂದಾದರು, ಮಾತನಾಡಿ ಎಂದು ಹಠ ಹಿಡಿದರು. ಆದರೆ, ಯಶ್‌ ಯಾವುದಕ್ಕೂ ಸ್ಪಂದಿಸಲಿಲ್ಲ. ಆದಷ್ಟು ಬೇಗ ಯುವಕರ ಕುಟುಂಬಕ್ಕೆ ಸಾಂತ್ವನ ಹೇಳಬೇಕೆಂಬ ಧಾವಂತ ಅವರಲ್ಲಿ ಕಾಣುತ್ತಿತ್ತು.

ಸೊರಣಗಿ ಗ್ರಾಮದಲ್ಲಿ ಅವರು ಮೃತರ ಮನೆಗೆ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಲಿದ್ದಾರೆ. ಸೊರಣಗಿ ಗ್ರಾಮದಲ್ಲಿ ಯಶ್‌ ಅವರ ಆಗಮನಕ್ಕಾಗಿ ಸಾವಿರಾರು ಮಂದಿ ಕಾಯುತ್ತಿದ್ದಾರೆ. ಅವರ ಕುಟುಂಬದವರು ಕೂಡಾ ಕಣ್ಣೀರಿನ ನಡುವೆಯೂ ತಮ್ಮ ಮನೆ ಮಕ್ಕಳ ಅಭಿಮಾನದ ನಟ ಆಗಮಿಸುವುದನ್ನು ಕಾಯುತ್ತಿದ್ದಾರೆ.

ಏನಾಗಿತ್ತು ಸೊರಣಗಿಯಲ್ಲಿ?

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮ ಯುವಕರಾದ, ಯಶ್‌ ಅವರ ಅಭಿಮಾನಿಗಳಾದ ಹನುಮಂತ ಹರಿಜನ (21), ಮುರಳಿ ನಡವಿನಮನಿ (20), ನವೀನ್ ಗಾಜಿ (19) ಹಾಗೂ ಮಂಜುನಾಥ್ ಹರಿಜನ, ದೀಪಕ ಹರಿಜನ, ಪ್ರಕಾಶ ಮ್ಯಾಗೇರಿ ಮೊದಲಾದ ಯುವಕರು ಮಧ್ಯ ರಾತ್ರಿಯೇ ಯಶ್‌ ಜನುಮ ದಿನ ಆಚರಣೆಗೆ ಭರದ ಸಿದ್ಧತೆಗಳನ್ನು ನಡೆಸಿದ್ದರು. ಅವರು ದೊಡ್ಡ ಕಟೌಟ್‌ ಸಿದ್ಧಪಡಿಸಿ ಅದನ್ನು ನೀಲಗಿರಿ ಮರಕ್ಕೆ ಕಟ್ಟುವ ಹಂತದಲ್ಲಿ ಮೂವರು ಅಲ್ಲಿದ್ದ ವಿದ್ಯುತ್‌ ತಂತಿಯನ್ನು ಸ್ಪರ್ಶಿಸಿ ಆಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ಹನುಮಂತ ಹರಿಜನ (21), ಮುರಳಿ ನಡವಿನಮನಿ (20), ನವೀನ್ ಗಾಜಿ (19) ಮೃತಪಟ್ಟ ಯುವಕರು. ಮಂಜುನಾಥ್ ಹರಿಜನ, ದೀಪಕ ಹರಿಜನ, ಪ್ರಕಾಶ ಮ್ಯಾಗೇರಿ ಎಂಬವರಿಗೆ ಗಂಭೀರ ಗಾಯಗಳಾಗಿವೆ.

ಇದನ್ನೂ ಓದಿ: Birthday banner: ಮೂವರ ಸಾವಿಗೆ ಕಾರಣವಾಯಿತು ಯಶ್ ಬರ್ತ್‌ಡೇ ಬ್ಯಾನರ್‌

ಸರ್ಕಾರದಿಂದ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ

ಯಶ್‌ ಹುಟ್ಟುಹಬ್ಬದ ಬ್ಯಾನರ್‌ ಹಾಕುವ ಸಂದರ್ಭದಲ್ಲಿ ವಿದ್ಯುತ್‌ ಸ್ಪರ್ಶದಿಂದ ಮೃತಪಟ್ಟ ಮೂವರು ಯುವಕರ ಕುಟುಂಬಕ್ಕೆ ಸರ್ಕಾರದಿಂದ ತಲಾ ಎರಡು ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಕಾನೂನು ಸಚಿವರೂ ಆಗಿರುವ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ. ಪಾಟೀಲ್‌ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮೂವರು ಗಾಯಳುಗಳಿಗೆ ತಲಾ 50 ಸಾವಿರ ಪರಿಹಾರ ನೀಡಲು ಸಿಎಂ ತಿಳಿಸಿದ್ದಾರೆ ಎಂದರು.

Exit mobile version