Site icon Vistara News

Yashaswini Scheme | ಸಹಕಾರಿಗಳ ಆರೋಗ್ಯ ರಕ್ಷಣೆಗೆ ಯಶಸ್ವಿನಿ; ಹೆಸರು ನೋಂದಣಿಗೆ ಡಿ.31 ಕೊನೆಯ ದಿನ

Yashaswini Scheme

ಬೆಂಗಳೂರು: ಗ್ರಾಮೀಣ ಸಹಕಾರಿಗಳ ಆರೋಗ್ಯ ರಕ್ಷಣಾ ಯೋಜನೆ ʼಯಶಸ್ವಿನಿʼ (Yashaswini Scheme)ಗೆ ಹೆಸರು ನೊಂದಾಯಿಸಲು ಇನ್ನು ನಾಲ್ಕು ದಿನ ಮಾತ್ರ ಬಾಕಿ ಇದೆ. ಕರ್ನಾಟಕದ ರಾಜ್ಯದ ಗ್ರಾಮೀಣ ಸಹಕಾರಿಗಳಿಗಾಗಿಯೇ ರೂಪಗೊಂಡಿರುವ ಈ ಸ್ವಯಂ-ನಿಧಿ ಶಸ್ತ್ರಚಿಕಿತ್ಸಾ ಯೋಜನೆಗೆ ಹೆಸರು ನೊಂದಾಯಿಸಲು ಡಿಸೆಂಬರ್‌ 31 ಕೊನೆಯ ದಿನವಾಗಿದೆ. ಈ ಯೋಜನೆಯು 2023 ಜನವರಿ1 ರಿಂದ ಡಿಸೆಂಬರ್‌ 31ರ ವರೆಗೆ ಜಾರಿಯಲ್ಲಿರಲಿದೆ.

ಈ ಯೋಜನೆಯಡಿ ಯಶಸ್ವಿನಿ ನೆಟ್ ವರ್ಕ್ ಆಸ್ಪತ್ರೆಗಳಲ್ಲಿ ಒಂದು ಕುಟುಂಬ 5 ಲಕ್ಷ ರೂ. ವರೆಗಿನ ವೆಚ್ಚದಲ್ಲಿ ನಗದು ರಹಿತ ಚಿಕಿತ್ಸೆ ಪಡೆಯಬಹುದಾಗಿದೆ. ರಾಜ್ಯ ಸರ್ಕಾರವು ಇದಕ್ಕಾಗಿ ಪ್ರಸಕ್ತ ಆಯವ್ಯಯದಲ್ಲಿ 300 ಕೋಟಿ ರೂ. ಅನುದಾನ ನಿಗದಿ ಪಡಿಸಿದೆ. ಈ ಯೋಜನೆಯಡಿ ಗ್ರಾಮೀಣ ಅಥವಾ ನಗರದ ಸಹಕಾರಿಯೊಬ್ಬರು ತಿಂಗಳಿಗೆ ಇಂತಿಷ್ಟರಂತೆ ನಿಗದಿತ ಪ್ರಮಾಣದಲ್ಲಿ ಒಂದು ವರ್ಷದ ಅವಧಿಯಲ್ಲಿ, ಯೋಜನೆಯಲ್ಲಿ ಒಳಗೊಂಡ ಯಾವುದೇ ಶಸ್ತ್ರ ಚಿಕಿತ್ಸೆಯನ್ನು ನಿಗದಿತ ಮಿತಿಯೊಳಗೆ ಷರತ್ತು ಮತ್ತು ನಿಯಮಗಳಿಗೆ ಒಳಪಟ್ಟು ನಗದು ರಹಿತವಾಗಿ ಪಡೆಯಬಹುದಾಗಿರುತ್ತದೆ.

ಕಳೆದ ನವೆಂಬರ್‌ 1 ರಿಂದ ನೋಂದಣಿ ಪ್ರಕ್ರಿಯೆ ಆರಂಭಿಸಲಾಗಿದ್ದು, 30 ಲಕ್ಷ ಮಂದಿಯ ನೋಂದಣಿ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ. ಗ್ರಾಮೀಣ ಪ್ರದೇಶದ ಸಹಕಾರಿ ಸಂಘಗಳ ಸದಸ್ಯರಿಗೆ ನಾಲ್ಕು ಜನರ ಕುಟುಂಬಕ್ಕೆ ತಲಾ 500 ರೂ. ಹಾಗೂ ನಗರ ಪ್ರದೇಶದ ಸಹಕಾರಿಗಳಿಗೆ 1,000 ರೂ. ವಂತಿಗೆ ನಿಗದಿ ಪಡಿಸಲಾಗಿದೆ. ನಾಲ್ಕು ಮಂದಿಗಿಂತ ಹೆಚ್ಚಿನ ಸದಸ್ಯರು ಇರುವ ಕುಟುಂಬಗಳಿಗೆ ಹೆಚ್ಚುವರಿ ಸದಸ್ಯರಿಗೆ ತಲಾ 200 ರೂ. ವಂತಿಗೆ ಪಾವತಿಸಿ, ನೊಂದಾಯಿಸಿಕೊಳ್ಳಲು ಸೂಚಿಸಲಾಗಿದೆ.

ಮರಳಿ ಜಾರಿಗೆ ಬಂದ ಯೋಜನೆ
2003ರಲ್ಲಿ ಸಹಕಾರಿ ಇಲಾಖೆಯಲ್ಲಿ ಯಶಸ್ವಿನಿ ಯೋಜನೆಯನ್ನು ಪ್ರಾರಂಭಿಸಲಾಗಿತ್ತು. 2003-04ರಿಂದ 2017-18ರವರೆಗೆ ಈ ಯೋಜನೆ ಜಾರಿಯಲ್ಲಿತ್ತು. ನಂತರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಈ ಯೋಜನೆಯನ್ನು ವರ್ಗಾವಣೆ ಮಾಡಲಾಗಿತ್ತು. 2018ರ ಮೇ ತಿಂಗಳಿನಲ್ಲಿ ಈ ಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತು. ನಂತರ ಅದೇ ವರ್ಷದ ಜೂನ್‌ನಲ್ಲಿ ಈ ಯೋಜನೆಯನ್ನು ʼಆರೋಗ್ಯ ಕರ್ನಾಟಕ ಯೋಜನೆʼ ಯೊಂದಿಗೆ ವಿಲೀನಗೊಳಿಸಲಾಗಿತ್ತು.

ರಾಜ್ಯದೆಲ್ಲೆಡೆ ಸಹಕಾರಿಗಳು ಮತ್ತು ರೈತರು ನಿರಂತರವಾಗಿ ಒತ್ತಾಯಿಸಿದ ಹಿನ್ನೆಲೆಯಲ್ಲಿ 2022-23ನೇ ಸಾಲಿನ ಬಜೆಟ್‌ನಲ್ಲಿ ಈ ಯಶಸ್ವಿನಿ ಯೋಜನೆಯನ್ನು ಪರಿಣಾಮಕಾರಿಯಾಗಿ ರೂಪಿಸಿ, ಮರುಜಾರಿಗೊಳಿಸುವುದಾಗಿ ಪ್ರಕಟಿಸಲಾಗಿತ್ತು. ಇದಕ್ಕಾಗಿ 300 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿತ್ತು. ಈ ಯೋಜನೆ ಜಾರಿಗೆ ಸಂಬಂಧ 2022ರ ಅಕ್ಟೋಬರ್‌ 22 ರಂದು ಸರ್ಕಾರ ಅಧಿಕೃತ ಆದೇಶ ಹೊರಡಿಸಿತ್ತು.

ಯಶಸ್ವಿನಿ ಯೋಜನೆಯಡಿ ಸದಸ್ಯರಿಗೆ ಯೂನಿಕ್‌ ಐಡಿ ಸಂಖ್ಯೆಯುಳ್ಳ ಕಾರ್ಡ್‌ಅನ್ನು ಒದಗಿಸಲಾಗುತ್ತದೆ. ಈ ಕಾರ್ಡಿನಲ್ಲಿ ಪ್ರಾಥಮಿಕ ಸದಸ್ಯರ ಸಹಕಾರ ಸಂಘದ ಸದಸ್ಯತ್ವದ ವಿವರಗಳು ಮತ್ತು ಅವರ ಕುಟುಂಬ ಸದಸ್ಯರ ವಿವರಗಳು, ವಾರ್ಷಿಕ ವಂತಿಗೆ ಪಾವತಿಸಿರುವ ವಿವರ ಹಾಗೂ ಭಾವಚಿತ್ರ ಇರುತ್ತದೆ. ಇದರಲ್ಲಿ ಕುಟುಂಬದ ವಾರ್ಷಿಕ ವೈದ್ಯಕೀಯ ವೆಚ್ಚದ ಮಿತಿಯನ್ನು ಸಹ ಕಾರ್ಡಿನಲ್ಲಿ ನಮೂದಿಸಲಾಗಿರುತ್ತದೆ. ಈ ಯೋಜನೆಯಡಿ ನೋಂದಾಯಿತ ಸದಸ್ಯರು ಈ ಕಾರ್ಡ್‌ ಅನ್ನು ಬಳಸಿ ನಗದು ರಹಿತ ಚಿಕಿತ್ಸೆಗಳನ್ನು ಪಡೆಯಬಹುದಾಗಿದೆ.

ಏನೇನು ಲಾಭ?
ಯಶಸ್ವಿನಿ ಯೋಜನೆಯಡಿಯಲ್ಲಿ ಮುಖ್ಯವಾಗಿ ಹೃದಯಕ್ಕೆ ಸಂಬಂಧಿಸಿದ ರೋಗಗಳು ಕಿವಿ, ಮೂಗು, ಗಂಟಲು ವ್ಯಾದಿಗಳು, ಕರುಳಿನ ಕಾಯಿಲೆಗಳು, ನರಗಳಿಗೆ ಸಂಬಂಧಿಸಿದ ಸಮಸ್ಯೆ, ಕಣ್ಣಿನ ಕಾಯಿಲೆಗಳು, ಮೂಳೆ ರೋಗಗಳು, ಸ್ತ್ರೀಯರಿಗೆ ಸಂಬಂಧಿಸಿದ ವಿಶೇಷ ಕಾಯಿಲೆಗಳಿಗೆ ಚಿಕಿತ್ಸಾ ಸೌಲಭ್ಯಗಳನ್ನು ರಾಜ್ಯದ ಯಶಸ್ವಿನಿ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಒದಗಿಸಲಾಗುತ್ತದೆ.

ಪ್ರಾರಂಭಿಕವಾಗಿ ಈ ಹಿಂದಿನ ಯಶಸ್ವಿನಿ ಯೋಜನೆಯಲ್ಲಿ ನೋಂದಾಯಿಸಿದ ನೆಟ್‌ವರ್ಕ್ ಅಸ್ಪತ್ರೆಗಳನ್ನೇ ಸದ್ಯಕ್ಕೆ ಮುಂದುವರಿಸಲಾಗಿದೆ. ನಂತರ ಹೊಸ ಮಾರ್ಗಸೂಚಿಗಳಂತೆ, ಟ್ರಸ್ಟ್‌ನಲ್ಲಿ ತೀರ್ಮಾನಿಸಿ ನೆಟ್‌ವರ್ಕ್ ಆಸ್ಪತ್ರೆಗಳನ್ನು ಅಂತಿಮಗೊಳಿಸಲಾಗುವುದು ಎಂದು ಸರ್ಕಾರ ಪ್ರಕಟಿಸಿದೆ.

“ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕʼʼ ಯೋಜನೆಯಲ್ಲಿ ಅಳವಡಿಸಿಕೊಂಡಿರುವ 1,650 ಕಾಯಿಲೆಗಳಿಗೆ ಚಿಕಿತ್ಸೆಗಳನ್ನು ಯಶಸ್ವಿನಿ ಯೋಜನೆಯಲ್ಲಿ ನೀಡಲಾಗುತ್ತದೆ. ಮುಂದೆ ಯಶಸ್ವಿನಿ ಟ್ರಸ್ಟ್‌ನಲ್ಲಿ ಚರ್ಚಿಸಿ ಅಗತ್ಯತೆ ಕಂಡು ಬಂದಲ್ಲಿ ಹೆಚ್ಚಿನ ಚಿಕಿತ್ಸೆಗಳು ಮತ್ತು ದರಗಳ ಪರಿಷ್ಕರಣೆಗೆ ತೀರ್ಮಾನಿಸಬಹುದಾಗಿದೆ ಎಂದು ಸರ್ಕಾರ ಆದೇಶದಲ್ಲಿ ಹೇಳಿದೆ.

ಯಶಸ್ವಿನಿ ಸದಸ್ಯರು ಜನರಲ್ ವಾರ್ಡ್‌ನಲ್ಲಿ ಸೌಲಭ್ಯ ಪಡೆಯುವಲ್ಲಿ ಅರ್ಹತೆ ಹೊಂದಿರುತ್ತಾರೆ. ಆಸ್ಪತ್ರೆಯಲ್ಲಿ ಒದಗಿಸಿರುವ ಚಿಕಿತ್ಸಾ ಸೌಲಭ್ಯದಲ್ಲಿ ಔಷಧಿ ವೆಚ್ಚ, ಆಸ್ಪತ್ರೆ ವೆಚ್ಚ, ಶಸ್ತ್ರಚಿಕಿತ್ಸೆಯ ವೆಚ್ಚ, ಆವರೇಷನ್ ಥಿಯೇಟರ್ ಬಾಡಿಗೆ, ಅರೆವಳಿಕೆ ತಜ್ಞರ ಫೀ, ಸರ್ಜನ್ ಫೀ, ಕನ್ಸಲ್‌ಟೆಂಟ್ ಫೀ, ಬೆಡ್ ಚಾರ್ಜ್, ನರ್ಸ್ ಫೀ ಇತ್ಯಾದಿ ವೆಚ್ಚ ಒಳಗೊಂಡಿರುತ್ತದೆ.

ಟ್ರಸ್ಟ್‌ನಿಂದ ಅಂಗೀಕೃತವಾದ ಆಸ್ಪತ್ರೆಗಳಲ್ಲಿ ಯಶಸ್ವಿನಿ ಫಲಾನುಭವಿಗಳು ಹೊರರೋಗಿ ಸಲಹೆಯನ್ನು ರೂ 100 ಗಳನ್ನು ಸಾಮಾನ್ಯ ಪರೀಕ್ಷೆಗೆ ಮತ್ತು ವಿಶೇಷ ತಜ್ಞರಿಂದ ಪರೀಕ್ಷೆ ಮಾಡಿಸಿಕೊಳ್ಳಲು ರೂ.200 ಗಳನ್ನು
ಪಾವತಿಸಿ ಮೂರು ತಿಂಗಳವರೆಗೆ ಅದೇ ಕಾರ್ಡ್​​​​​ನಲ್ಲಿ ತಪಾಸಣೆ ಮಾಡಿಸಿಕೊಳ್ಳಬಹುದಾಗಿದೆ.

ಯಾರು ಈ ಸೌಲಭ್ಯ ಪಡೆಯಬಹುದು?
ಕನಿಷ್ಠ 3 ತಿಂಗಳು ಮುಂಚಿತವಾಗಿ ಅರ್ಹ ಗ್ರಾಮೀಣ ಸಹಕಾರ ಸಂಘವೊಂದರ ಸದಸ್ಯರಾದವರು ಈ ಯೋಜನೆಯ ಭಾಗವಾಗಬಹುದಾಗಿದೆ. ಅಲ್ಲದೇ ಗ್ರಾಮೀಣ ಸಹಕಾರ ಸಂಘ/ಬ್ಯಾಂಕುಗಳೊಡನೆ ವ್ಯವಹರಿಸುತ್ತಿರುವ ಗ್ರಾಮೀಣ ಸ್ತ್ರೀ ಶಕ್ತಿ ಗುಂಪು, ಸ್ವ-ಸಹಾಯ ಗುಂಪಿನ ಸದಸ್ಯರು ಮತ್ತು ಅವರ ಕುಟುಂಬದ ಎಲ್ಲ ಸದಸ್ಯರು ಯೋಜನೆಯ ಫಲಾನುಭವಿಯಾಗಬಹುದು.

ಗ್ರಾಮೀಣ ಪ್ರದೇಶದಲ್ಲಿರುವ ಸಹಕಾರಿ ಸಂಘ/ಸಹಕಾರಿ ಬ್ಯಾಂಕುಗಳಲ್ಲಿ ಹಣಕಾಸಿನ ವಹಿವಾಟು ಹೊಂದಿರುವ ಸ್ವ-ಸಹಾಯ ಗುಂಪಿನ ಸದಸ್ಯರು ಕೂಡ ಯೋಜನೆಯ ಸೌಲಭ್ಯ ಪಡೆಯಬಹುದಾಗಿದೆ. ನಗರ/ಪಟ್ಟಣ ಪ್ರದೇಶದಲ್ಲಿ ಸಹಕಾರಿ ಮೀನುಗಾರರು, ಸಹಕಾರಿ ಬೀಡಿ ಕಾರ್ಮಿಕರು ಮತ್ತು ಸಹಕಾರಿ ನೇಕಾರರು ಕೂಡ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ.

ಯಶಸ್ವಿನಿ ಯೋಜನೆ ಕುರಿತ ಹೆಚ್ಚಿನ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ | Yashaswini Scheme | ಯಶಸ್ವಿನಿ ಯೋಜನೆಗೆ 20 ಲಕ್ಷ ನೋಂದಣಿ; ಗಡುವು ಮುಗಿಯಲು ಕೇವಲ ಮೂರು ದಿನ ಬಾಕಿ

Exit mobile version